ಉಡುಪಿ: ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಅದಕ್ಕೆ ಕರ್ನಾಟಕ ರಾಜ್ಯದ ಹೆಚ್ಚುವರಿ ಎರಡನೇ ಅಧಿಕೃತ ರಾಜ್ಯಭಾಷೆಯ ಸ್ಥಾನಮಾನ ನೀಡಬೇಕು ಎಂದು ತುಳು ಭಾಷಾ ಚಿಂತಕ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಾ. ಆಕಾಶ್ ಜೈನ್ ಹೇಳಿದ್ದಾರೆ.
ತುಳು ಸಂಘಟನೆಗಳು ಉಡುಪಿ ಪ್ರೆಸ್ಕ್ಲಬ್ನಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಉದಾಹರಣೆಗಳಿವೆ. ಅದರಂತೆಯೇ ತುಳುವಿಗೂ ಕರ್ನಾಟಕದಲ್ಲಿ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ದೇಶದಲ್ಲಿ 1956 ರ ಸಂದರ್ಭದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ರಚಿಸುವ ಸಂದರ್ಭದಲ್ಲೇ ತುಳುವಿಗೂ ಪ್ರತ್ಯೇಕ ಪ್ರಾಂತ್ಯ ರಚಿಸುವ ಅವಕಾಶ ಇತ್ತು. ಆ ವೇಳೆ ತುಳುವರ ಮನವೊಲಿಸಿ ಮುಂದಿನ ದಿನಗಳಲ್ಲಿ ತುಳುವಿಗೆ ಪ್ರತ್ಯೇಕ ಸ್ಥಾನಮಾನ, ಪ್ರಾತಿನಿಧ್ಯ ನೀಡುವ ಭರವಸೆ ನೀಡಿ ಪ್ರಾಂತ್ಯ ರಚನೆಯ ಮುಂದೂಡಲಾಯಿತು. ತುಳು ಕನ್ನಡದ ಜೊತೆಗೆ ಸಾಂಸ್ಕೃತಿಕ, ಐತಿಹಾಸಿಕ ಸಂಬಂಧವನ್ನು ಸಾವಿರಾರು ವರ್ಷಗಳಿಂದ ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಎಂಬತ್ತು ವರ್ಷಗಳಾಗುತ್ತಾ ಬಂತು. ಆದರೆ ತುಳು ಭಾಷೆಗೆ ಸೂಕ್ತ ಸ್ಥಾನಮಾನ ಸಿಗದೇ ಇರುವುದು ದುರಂತ. ತುಳುಭಾಷೆಗೆ ಸೂಕ್ತವಾದ ಸಾಂವಿಧಾನಿಕ, ಆಡಳಿತಾತ್ಮಕ ಹಾಗೂ ಅಧಿಕೃತ ಸ್ಥಾನಮಾನವನ್ನು ನೀಡುವುದು ಕರ್ನಾಟಕ ಸರಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.
ಡಾ. ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಮಾತನಾಡಿ, ತುಳು ಭಾಷೆಯನ್ನು ಕೇವಲ ಕರ್ನಾಟಕದ ಕರಾವಳಿಯ ಜನರು ಮಾತನಾಡುವುದಲ್ಲ. ವಿಶ್ವದೆಲ್ಲೆಡೆ ಲಕ್ಷಾಂತರ ಜನರು ಬಳಸುತ್ತಾರೆ. ತುಳುವಿಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವಂತೆ ಎಲ್ಲರೂ ಒಗ್ಗಟ್ಟಿನಿಂದ ಒತ್ತಾಯಿಸಬೇಕು. ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ತುಳು ಸೇರಬೇಕೆನ್ನುವ ಕೂಗಿಗೂ ಇದು ಶಕ್ತಿ ತುಂಬಲಿದೆ ಎಂದರು.
ಹಾಗೆಯೇ ಸೆ. 18 ರಂದು ದಕ್ಷಿಣ ಕನ್ನಡದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಸರ್ಕಾರಕ್ಕೆ ತೌಳವರ ಪರವಾಗಿ ಆಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ಜೈ ತುಳುನಾಡು ಒಡಿಪು ಘಟಕದ ಅಧ್ಯಕ್ಷ ಸಂತೋಷ್ ಎನ್.ಎಸ್. ಕಟಪಾಡಿ, ಉಡುಪಿ ಸಿರಿ ತುಲು ಚಾವಡಿ ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ, ಕೋಶಾಧಿಕಾರಿ ಅಂಬಿಕಾ ರಾವ್ ಮೊದಲಾದವರು ಭಾಗವಹಿಸಿದ್ದರು.







































