ಘಟನೆ ಕುರಿತು ರೈಲಿನಲ್ಲಿದ್ದ ಸುಜಿತ್ ಕೆರ್ವಾಶೆ ನ್ಯೂಸ್ ಕಾರ್ಕಳಕ್ಕೆ ಮಾಹಿತಿ
ಒಡಿಶಾ : ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಬಳಿ ಬೆಂಗಳೂರು – ಹೌರಾ ಸೂಪರ್‌ಫಾಸ್ಟ್ ಎಕ್ಸೆಪ್ರೆಸ್, ಕೋರಮಂಡಲ್ ಎಕ್ಸೆಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 238ಕ್ಕೆ ಏರಿದೆ. 900ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕೊತಾದಿಂದ ತಮಿಳುನಾಡಿನ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು, ಮಾರ್ಗ ಮಧ್ಯೆ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದ್ದು, ಅನಂತರ ಮತ್ತೊಂದು ರೈಲಿಗೆ ಡಿಕ್ಕಿಯಾದ್ದರಿಂದ ಸರಣಿ ಅಪಘಾತ ಸಂಭವಿಸಿದೆ.
ಕಾರ್ಕಳದವರು ಸೇಫ್
ಜೈನ ಧರ್ಮೀಯರ ಪವಿತ್ರ ಸ್ಥಳ ಜಾರ್ಖಂಡ್‌ನ ಸಮ್ಮೇದ್ ಶಿಖರ್ಜಿಗೆ ಹೊರಟಿರುವ ಕಾರ್ಕಳದವರು ಸುರಕ್ಷಿತವಾಗಿದ್ದಾರೆ. ಈ ಕುರಿತು ಸುಜಿತ್ ಕೆರ್ವಾಶೆ ಅವರು ನ್ಯೂಸ್ ಕಾರ್ಕಳಕ್ಕೆ ಮಾಹಿತಿ ನೀಡಿದ್ದಾರೆ. ಗುರುವಾರ ಮಧ್ನಾಹ್ನ 12:30ರ ವೇಳೆ ಬೆಂಗಳೂರಿನಿಂದ ರೈಲು ಹೊರಟಿತ್ತು. ಅಪಘಾತದಿಂದ ನಾವು ಪ್ರಯಾಣಿಸುತ್ತಿದ್ದ ರೈಲಿನ (ಬೆಂಗಳೂರು – ಹೌರಾ ಸೂಪರ್‌ಫಾಸ್ಟ್ ಎಕ್ಸೆಪ್ರೆಸ್) ಕೊನೆಯ ಮೂರು ಬೋಗಿ ಜಖಂಗೊಂಡಿದೆ. ಆ ಸಂದರ್ಭ ನಮಗೆ ಅದು ಗೊತ್ತಾಗಿರಲಿಲ್ಲ. ರೈಲನ್ನು ನಿಲ್ಲಿಸಿದ ಬಳಿಕ ಅವಘಡದ ಬಗ್ಗೆ ತಿಳಿಯಿತು. ನಾವು ಇದೀಗ ಅದೇ ರೈಲಿನಲ್ಲಿ ಕೋಲ್ಕತ್ತದತ್ತ ಸಾಗುತ್ತಿದ್ದೇವೆ ಎಂದು ತಿಳಿಸಿದರು.
ಚಿಕ್ಕಮಗಳೂರಿನಿಂದ ಸಮ್ಮೇದ ಶಿಖರ್ಜಿ ಹೊರಟಿದ್ದ 110 ಮಂದಿ ಕನ್ನಡಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗುತ್ತಿದೆ. 9 NDRF ತಂಡ ಸ್ಥಳದಲ್ಲಿದೆ. ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ರೈಲು ಅಪಘಾತವಾದ ಸ್ಥಳದಲ್ಲಿ ಬುಲ್ಡೋಜರ್, ಕ್ರೇನ್ ಗಳನ್ನು ತಂದು ಕಾರ್ಯಾಚರಣೆ ಮಾಡಿಸಲಾಗುತ್ತಿದೆ. 200 ಆಂಬುಲೆನ್ಸ್, 50 ಬಸ್, 45 ಮೊಬೈಲ್ ಕ್ಲಿನಿಕ್‌ಗಳ ವವಸ್ಥೆ ಮಾಡಲಾಗಿದೆ.

ಕನ್ನಡಿಗರ ಸುರಕ್ಷತೆಗಾಗಿ ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದಾರೆ. ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅಗತ್ಯ ನೆರವನ್ನು ಒದಗಿಸಲು ಸಿಎಂ ಸಂತೋಷ್ ಲಾಡ್ ಅವರಿಗೆ ಸೂಚನೆ ನೀಡಿದ್ದಾರೆ. ಸಂತೋಷ್ ಲಾಡ್ ಅವರ ಜತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸೇರಿ ಇತರೆ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದೆ.








































