70‌ರ ವಯಸ್ಸಿನಲ್ಲೂ ಬತ್ತದ ಉತ್ಸಾಹ – ಅಂತಾರಾಷ್ಟ್ರೀಯ ಕ್ರೀಡಾಪಟು ಜಯಕೃಷ್ಣ ಹೆಗ್ಡೆ

5 ದೇಶಗಳಲ್ಲಿ ಕ್ರೀಡಾ ಸಾಧನೆ ಮೆರೆದ ನಿವೃತ್ತ ಮೆಸ್ಕಾಂ ಉದ್ಯೋಗಿ

ವರದಿ : ನಳಿನಿ ಎಸ್.‌ ಸುವರ್ಣ

ಕಾರ್ಕಳ : ಸಾಧನೆ ಮಾಡಲು ವಯಸ್ಸಿನ ಹಂಗಿಲ್ಲ, ವಯಸ್ಸು ಒಂದು ಸಂಖ್ಯೆ ಮಾತ್ರ. 71 ರ ವಯಸ್ಸಿನಲ್ಲೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಮಿಂಚುತ್ತಿದ್ದಾರೆ ಕಾರ್ಕಳ ಕುಕ್ಕುಂದೂರು ಗ್ರಾಮದ ನಕ್ರೆ ಜಯಕೃಷ್ಣ ಹೆಗ್ಡೆಯವರು. ಹಿರಿಯರ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸುವ ಇವರು 100 ಮೀ., 200 ಮೀ. ಓಟ, ಹೈಜಂಪ್, ಟ್ರಿಪಲ್ ಜಂಪ್ ಹಾಗೂ ಜವೆಲಿನ್ ಕ್ರೀಡಾಪಟುವಾಗಿ ಹೆಸರುವಾಸಿಯಾಗಿದ್ದಾರೆ.

ಶ್ರೀ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವ ಇವರು ಅತ್ತೂರು ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿರುತ್ತಾರೆ. ತನ್ನ 16 ನೇ ವಯಸ್ಸಿನಲ್ಲೇ ಕ್ರೀಡೆಯತ್ತ ಒಲವು ಹೊಂದಿದ್ದ ಅವರು ದೈಹಿಕ ಶಿಕ್ಷಕರಾಗಿದ್ದ ರತ್ನಾಕರ ಭಟ್‌ ಮಾರ್ಗದರ್ಶನದಲ್ಲಿ ಜಿಲ್ಲಾ, ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದರು. ಮುಂಬಯಿಯಲ್ಲಿ ಪಿಯುಸಿ ಶಿಕ್ಷಣ ಪಡೆದ ಅವರು ಅಲ್ಲೂ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಅನಂತರ ಊರಿಗೆ ವಾಪಾಸಾದರು.

ಮೆಸ್ಕಾಂ ಇಲಾಖೆಯಲ್ಲಿ ಉದ್ಯೋಗ
ರಾಜ್ಯ, ರಾಷ್ಟ್ರಮಟ್ಟದಲ್ಲಿನ ಕ್ರೀಡಾ ಸಾಧನೆಯ ಅರ್ಹತೆಯಲ್ಲೇ 1981 ರಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ಪಡೆದ ಜಯಕೃಷ್ಣ ಹೆಗ್ಡೆ ಅವರು 2012 ರಲ್ಲಿ ನಿವೃತ್ತಿ ಹೊಂದಿದರು.

5 ದೇಶಗಳಲ್ಲಿ ಸ್ಪರ್ಧೆ
ಮೆಸ್ಕಾಂ ಉದ್ಯೋಗಿಯಾಗಿದ್ದ ಸಂದರ್ಭ 2002 ರಲ್ಲಿ ಮೊಟ್ಟ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗೆ ಆಯ್ಕೆಯಾಗಿರುವ ಇವರು ಮಲೇಶೀಯಾದಲ್ಲಿ ನಡೆದ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಹೈ ಜಂಪ್‌, ಟ್ರಿಪಲ್‌ ಜಂಪ್‌ ವಿಭಾಗದಲ್ಲಿ ಸ್ಪರ್ಧಿಸಿದ್ದರು. ನಂತರದಲ್ಲಿ ಬ್ರೂನಿ, ಎರಡು ಬಾರಿ ಥೈಲಾಂಡ್‌ನಲ್ಲಿ, ಒಂದು ಬಾರಿ ಸಿಂಗಾಪುರದಲ್ಲಿ ಮತ್ತು ಮೂರು ಬಾರಿ ಶ್ರೀಲಂಕಾದಲ್ಲಿ ಹೈಜಂಪ್, ಟ್ರಿಪಲ್ ಜಂಪ್ ಮತ್ತು ಜವೆಲಿನ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಪ್ರತಿ ಬಾರಿ ಗೆಲುವನ್ನು ಪಡೆದಿದ್ದಾರೆ.

ಪ್ರಥಮ ಸ್ಥಾನಿ
ಮೇ 26 ರಿಂದ 27 ರವರೆಗೆ ಮಲೇಶಿಯಾದಲ್ಲಿ ನಡೆದ ಜೋಹೋರೆ – ಸಿಂಗಾಪುರ್‌ ಇಂಟರ್‌ನ್ಯಾಷನಲ್ ಮಾಸ್ಟರ್ಸ್‌ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಹೈಜಂಪ್ ಮತ್ತು ಟ್ರಿಪಲ್ ಜಂಪ್‌ನಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿ ಕಾರ್ಕಳಕ್ಕೆ ಕೀರ್ತಿ ತಂದಿದ್ದಾರೆ.

ನಿತ್ಯ 10 ಕಿ.ಮೀ. ಓಟ
ಜಯಕೃಷ್ಣ ಹೆಗ್ಡೆ ಅವರು ನಿರಂತರವಾಗಿ ಕ್ರೀಡಾ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಾರ್ಕಳದಲ್ಲಿದ್ದ ಸಂದರ್ಭ ಪ್ರತಿನಿತ್ಯ ಮುಂಜಾನೆ ಅತ್ತೂರು, ಗುಂಡ್ಯಡ್ಕ, ಕಾಬೆಟ್ಟು ಸಾಗಿ ಪದವಿನವರೆಗೆ ಸುಮಾರು 10 ಕಿ. ಮೀ. ಓಡುತ್ತಿದ್ದರು. ಪ್ರಸ್ತುತ ಮುನಿಯಾಲು ಕಾಡುಹೊಳೆಯಲ್ಲಿ ವಾಸವಿರುವ ಇವರು ಸಂಜೆ 4:30 ರಿಂದ 5:30 ರವರೆಗೆ ಒಂದು ಗಂಟೆಗಳ ಕಾಲ ಮೈದಾನದಲ್ಲಿ ಕ್ರೀಡಾ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಆರೋಗ್ಯಕ್ಕೆ ಸಹಕಾರಿ
ನಾನು ಸಣ್ಣ ವಯಸ್ಸಿನಿಂದ ಇಲ್ಲಿಯವರೆಗೆ ಸತತ 55 ವರ್ಷಗಳ ಕಾಲ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದು, ಇದು ನನ್ನ ದೈಹಿಕ ಮತ್ತು ಮಾನಸಿಕ ದೃಢತೆಗೆ ಸಹಕಾರಿಯಾಗಿದೆ. ಆರೋಗ್ಯ ವೃದ್ಧಿಯಲ್ಲಿ ಕ್ರೀಡೆ ಸಹಕಾರಿಯಾಗಿದ್ದು, ಪ್ರತಿಯೋರ್ವರು ದಿನಕ್ಕೆ ಸ್ವಲ್ಪ ಸಮಯವಾದರೂ ಕ್ರೀಡೆ, ವ್ಯಾಯಾಮಕ್ಕಾಗಿ ಮೀಸಲಿಡಬೇಕು. ಕ್ರೀಡೆಯಿಂದಾಗಿ ನಾನು ಸರಕಾರಿ ಉದ್ಯೋಗ ಗಳಿಸುವಂತಾಗಿದ್ದು, ಜೀವನಕ್ಕೆ ಭದ್ರತೆ ನೀಡಿದೆ.
ಜಯಕೃಷ್ಣ ಹೆಗ್ಡೆ

































































error: Content is protected !!
Scroll to Top