ಸತ್ಕಾರ್ಯಗಳನ್ನು ಮಾಡಿದಾಗ ಅದು ದೇವರಿಗೆ ಸಲ್ಲುತ್ತದೆ – ಪ್ರವೀಣ್ ಅಮೃತ್ ಮಾರ್ಟಿಸ್
ಹೆಬ್ರಿ : ಹೂವಿನ ಬೆಳೆಗಾರರ ಸಹಕಾರಿ ಸಂಘದ ಶಾಖೆ ಹೆಬ್ರಿಯಲ್ಲಿ ಆರಂಭಗೊಂಡಿರುವುದು ಹೆಬ್ರಿಯ ಪ್ರಗತಿಗೆ ಮತ್ತೊಂದು ಮೈಲಿಗಲ್ಲು. ಹಳ್ಳಿಯ ಜನರು ಹೂವಿನ ಬೆಳೆ ಮಾಡುವುದರಿಂದ ಕುಟುಂಬದ ಆರ್ಥಿಕ ಚಟುವಟಿಕೆಗೆ ಸಹಕಾರಿಯಾಗುತ್ತದೆ ಎಂದು ಧಾರ್ಮಿಕ ಮುಂದಾಳು ಹೆಚ್. ಭಾಸ್ಕರ್ ಜೋಯಿಸ್ ಅಭಿಪ್ರಾಯಪಟ್ಟರು. ಅವರು ಸೋಮವಾರ ಹೆಬ್ರಿಯ ವಿನೂನಗರ ಪುಪ್ಪಾ ಕಾಂಪ್ಲೇಕ್ಸ್‌ನಲ್ಲಿ ಕಾರ್ಕಳ ಅನಂತಶಯನ ಎಪಿ ಟವರ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಹೂವಿನ ಬೆಳೆಗಾರರ ಸಹಕಾರ ಸಂಘದ ಹೆಬ್ರಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಜೆಕಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ಪ್ರವೀಣ್ ಅಮೃತ್ ಮಾರ್ಟಿಸ್ ಮಾತನಾಡಿ, ಒಳ್ಳೆಯ ಉದ್ದೇಶದಿಂದ ಮಾಡಿದ ಕೆಲಸಗಳು ಯಶಸ್ವಿಯಾಗುತ್ತದೆ. ಜನರು ಸತ್ಕಾರ್ಯಗಳನ್ನು ಮಾಡಿದಾಗ ಅದು ದೇವರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಹೆಬ್ರಿಯ ಹೂವಿನ ಬೆಳೆಗಾರರ ಸಂಘಕ್ಕೆ ಶುಭವಾಗಲಿ ಎಂದು ಆಶೀರ್ವಚನ ನೀಡಿದರು. ಭದ್ರತಾ ಕೊಠಡಿಯನ್ನು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ. ಕರುಣಾಕರ ಶೆಟ್ಟಿ ಮತ್ತು ಗಣಕಯಂತ್ರವನ್ನು ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಚಂದ್ರಶೇಖರ ಬಾಯರಿ ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೂವಿನ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಮಾತನಾಡಿ, ಹೂವಿನ ಬೆಳಗೆ ಸಂಬಂಧಿಸಿದಂತಹ ಮಾಹಿತಿ ಕೊರತೆ ರೈತರಿಗೆ ದೊಡ್ಡ ಸಮಸ್ಯೆ. ವೈಜ್ಞಾನಿಕವಾಗಿ ಸೂಕ್ತ ಕ್ರಮ ಬಳಸಿಕೊಂಡು ಹೂವಿನ ಕೃಷಿ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ. ಹೆಬ್ರಿಯ ಜನರನ್ನು ಮಲ್ಲಿಗೆ ಕೃಷಿಯತ್ತ ಆಕರ್ಷಿಸುವ ಕಾರ್ಯವನ್ನು ಸಂಘವು ಮಾಡಲಿದೆ ಎಂದರು.
ಅಭಿನಂದನೆ
ಪ್ರಗತಿಪರ ಕೃಷಿಕರಾದ ಹೆಬ್ರಿಯ ರಾಜೀವ ಶೆಟ್ಟಿ, ಬೈಕಾಡಿ ಮಂಜುನಾಥ್ ಭಟ್ ಶಿವಪುರ, ಮುನಿಯಾಲು ಗೋಪಾಲ ಕುಲಾಲ್, ಮಲ್ಲಿಗೆ ಕೃಷಿಕರಾದ ಹೆಬ್ರಿಯ ಮಠದಬೆಟ್ಟು ಶಾಂತ ಆಚಾರ್ಯ ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು.
ಹೆಬ್ರಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ, ಮುದ್ರಾಡಿ ಗುರುರಕ್ಷಾ ಸೌಹಾರ್ದ ಸಂಘದ ಅಧ್ಯಕ್ಷ ಮಂಜುನಾಥ ಪೂಜಾರಿ, ಉದ್ಯಮಿ ಹೆಬ್ರಿ ಸತೀಶ ಪೈ, ಸಮಾಜ ಸೇವಕಿ ಅನಿತಾ ಡಿಸೋಜ ಬೆಳ್ಮಣ್, ಹೂವಿನ ಬೆಳೆಗಾರರ ಸಹಕಾರ ಸಂಘದ ಉಪಾಧ್ಯಕ್ಷ ನವೀನ್ ಶೆಣೈ, ನಿರ್ದೇಶಕರಾದ ಫ್ಲೋರಾ ಮೆಂಡೋನ್ಸಾ, ಪ್ಲಾವಿಯ ಅರಾನ್ಹ, ವೆಂಕಟರಮಣ ಶರ್ಮ, ಶಶಿಕಾಂತ್ ಭಟ್, ಹಾಗೂ ಹೆಚ್. ಕೆ. ನಾರಾಯಣ ನಾಯ್ಕ್, ಸುಕುಮಾರ್ ಮುನಿಯಾಲ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲತಾ, ಚಾರದ ವಿದ್ಯಾಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು. ವೀಣಾ ಸ್ವಾಗತಿಸಿ, ನಿತೀಶ್ ಎಸ್. ಪಿ. ಕಾರ್ಯಕ್ರಮ ನಿರೂಪಿಸಿದರು. ರಚಿತಾ ವಂದಿಸಿದರು.



























