ಸಾಣೂರಿನಲ್ಲಿ ಸುಟ್ಟು ಕರಕಲಾದ ದೇಹ ಪತ್ತೆ – ಆತ್ಮಹತ್ಯೆ ಶಂಕೆ

ಜೊತೆಗಿದ್ದ ಕಾರ್ಮಿಕ ನಾಪತ್ತೆ – ಮೂಡುತ್ತಿದೆ ಹಲವು ಅನುಮಾನ

ಕಾರ್ಕಳ : ಸಾಣೂರು ಗ್ರಾಮದ ಶುಂಠಿಗುಡ್ಡೆಯ ರಬ್ಬರ್‌ ತೋಟದಲ್ಲಿ ಸುಟ್ಟು ಕರಕಲಾದ ಮೃತದೇಹ ಬುಧವಾರ ಪತ್ತೆಯಾಗಿದ್ದು, ಮೃತನನ್ನು ಇದೇ ರಬ್ಬರ್‌ ತೋಟದಲ್ಲಿ ಕಾರ್ಮಿಕನಾಗಿರುವ ಕೇರಳ ಮಲಪ್ಪುರಂ ಮೂಲದ ಗೋಪಿ (60) ಎಂದು ಗುರುತಿಸಲಾಗಿದೆ. ಉದ್ಯಮಿ ವಿವೇಕಾನಂದ ಶೆಣೈ ಅವರು ಸಾಣೂರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿ ಕೇರಳದ ಬಿಜು ಥೋಮಸ್ ಎಂಬವರ ಜೊತೆ ಕರಾರು ಮೂಲಕ ರಬ್ಬರ್ ಪ್ಲಾಂಟೇಶನ್ ಪಡೆದುಕೊಂಡು ವ್ಯವಹಾರ ಮಾಡಿಕೊಂಡಿದ್ದು, ಪ್ಲಾಂಟೇಶನ್ ನ ಉಸ್ತುವಾರಿಯನ್ನು ಹವಾಲ್ದಾರ್‌ ಬೆಟ್ಟುವಿನ ದಿಲೀಪ್‌ ಎಂಬವರು ನೋಡಿಕೊಳ್ಳುತ್ತಿದ್ದರು. ಅ. 19ರಂದು ಬೆಳಗ್ಗೆ 9 ಗಂಟೆಗೆ ವಸಂತ ಎಂಬವರು ಗ್ರಾಸ್‌ ಕಟ್ಟಿಂಗ್‌ ಮಾಡಲು ತೋಟದತ್ತ ಹೋದಾಗ ಅಲ್ಲಿ ಮೃತದೇಹ ಕಂಡುಬಂದಿದ್ದು, ತಕ್ಷಣವೇ ಅವರು ದಿಲೀಪ್‌ಗೆ ಮಾಹಿತಿ ನೀಡಿರುತ್ತಾರೆ. ದಿಲೀಪ್‌ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಮೃತದೇಹದ ಹತ್ತಿರ ಸಿಗರ್ ಲೈಟರ್ ಹಾಗೂ ಪೆಟ್ರೋಲ್ ಕ್ಯಾನ್‌ ಮುಚ್ಚಳ ಕಂಡು ಬಂದಿದೆ. ಗೋಪಿ ಅವರೊಂದಿಗಿದ್ದ ಇನ್ನೊಬ್ಬ ಕಾರ್ಮಿಕ ಬಾಹುಲೇಯನ್ ಗೆ ಕರೆ ಮಾಡಿದಾಗ ಮೋಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಗೋಪಿ ಹಾಗೂ ಬಾಹುಲೇಯನ್ ಒಂದು ವಾರದ ಹಿಂದೆ ಊರಿಗೆ ಹೋಗಿದ್ದು ಕಳೆದ ಮಂಗಳವಾರ ವಾಪಾಸ್‌ ಬಂದು ಕೆಲಸಕ್ಕೆ ಹಾಜರಾಗಿರುತ್ತಾರೆ ಎಂದು ತಿಳಿದುಬಂದಿದೆ. ಬಾಹುಲೇಯನ್ ಕಾಣೆಯಾಗಿರುವುದು ಗೋಪಿಯ ಮರಣದಲ್ಲಿ ಹಲವು ಸಂಶಯ ಮೂಡಿಸಿದೆ. ಪ್ರಕರಣ ಭೇದಿಸುವ ನಿಟ್ಟಿನಲ್ಲಿ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ವಿವೇಕಾನಂದ ಶೆಣೈ ಅವರನ್ನೂ ಠಾಣೆಗೆ ಕರೆದು‌ ಪೊಲೀಸರು ವಿಚಾರಣೆ ನಡೆಸಿರುತ್ತಾರೆ.





























































error: Content is protected !!
Scroll to Top