ಬಹುಭಾವ ಪ್ರಕಟನಾವಕಾಶವುಳ್ಳ ಸುಪುಷ್ಟಸಾಹಿತ್ಯ, ಪ್ರಯೋಗ,ಪರಿಣಾಮದ ಪೂರ್ವ ದೃಷ್ಟಿಯುಳ್ಳ, ಕಣ್ಗಾಪಿನ ನಿರ್ದೇಶನ, ಅಪರಿಮಿತ ಬದ್ಧತೆಯ ಅಪ್ಪಟ ಪ್ರತಿಭಾಶಾಲಿ ಕಲಾಕಾರರ ತಾದಾತ್ಮ್ಯ ಇವುಗಳಿಗೆ ಪೂರಕವಾದ ಹಿಮ್ಮೇಳ ಇದಿಷ್ಟು ರಸಿಕನಾದ ಪ್ರೇಕ್ಷಕರನ್ನು ಹೇಗೆ ರಸವಾಹಿನಿಯಲ್ಲಿ ಕೊಂಡೊಯ್ಯುತ್ತಲೇ ಸಾಗಬಹುದು ಎಂಬುದಕ್ಕೆ ಉದಾಹರಣೆ ಯಕ್ಷಗಾನ.
ಇಂತಹ ಕಲೆಯನ್ನು ಈ ಕಾಲಘಟ್ಟದಲ್ಲಿ ನಾವು ನೋಡ ಹೊರಟಿರುವುದು. ಯುಟ್ಯೂಬ್, ಫೇಸ್ ಬುಕ್ ನಲ್ಲಿ. ಇದು ಭವಿಷ್ಯದಲ್ಲಿ ಈ ಕ್ಷೇತ್ರಕ್ಕೆ ಕೊರೊನಕ್ಕಿಂತ ದೊಡ್ಡ ಮಾರಕ.
ಕಾರಣ ಇಷ್ಟೇ
ಮೊನ್ನೆ ಒಂದು ಪ್ರಸಿದ್ದಕಲಾವಿದರ ತಂಡದ ಗಾನ ವೈಭವವನ್ನು ಯುಟ್ಯೂಬ್ ನಲ್ಲಿ ವೀಕ್ಷಿಸಿದವರ ಸಂಖ್ಯೆ “ಇಪ್ಪತೊಂದು ಸಾವಿರ” ಇವರು ಇಷ್ಟೂ ಜನ ನೋಡಿದ ಕಾರಣಕ್ಕಾದರೂ ತಲಾ ಹತ್ತು ರೂಪಾಯಿ ನೀಡಿ ಸಹಕರಿಸುತ್ತಿದ್ದರೂ “ಎರಡುಲಕ್ಷ ಹತ್ತುಸಾವಿರ” ಆಗುತ್ತಿತ್ತು. ಚಿಕ್ಕಾಸು ಇಲ್ಲ ಬಿಡಿ.
ಆಯೋಜಕರು ಈ ಲಾಕ್ ಡೌನ್ ಸಮಯದಲ್ಲೂ ಕಲಾವಿದರನ್ನು ನಾವು ಕೈಬಿಟ್ಟಿಲ್ಲ ಎಂಬ ಪ್ರತಿಷ್ಠೆ, ಕಲಾವಿದ ಅಷ್ಟಾದರೆ ಅಷ್ಟು ಏನೋ ಕೊಟ್ಟರಲ್ಲ ಸಂಭಾವನೆ ಎಂಬ ಸಮಾಧಾನದಿಂದ , ಬುದ್ದಿವಂತ ಪ್ರೇಕ್ಷಕ ಹೇಗೂ ಡಾಟಾ ಫ್ರೀ ಇದೆ. ಮಾಡಿದ್ದಾರೆ, ನೋಡುವಾ ಧರ್ಮಕ್ಕೆ ಅಲ್ಲ, ಎಂಬ ಮನೋ ಪ್ರವೃತ್ತಿಯಿಂದ ……ಹೀಗೆ ಬಗೆಬಗೆಯಿಂದ ಈ ಕಲೆಯ ಪ್ರಸರಣದಲ್ಲಿ ತೊಡಗಿದ ಪರಿಣಾಮ ಮುಂದೆ ರಂಗಸ್ಥಳದ ಆಟ ಹುಡುಕಾಟದ ಕಾಲ ಅದರಲ್ಲೂ ಕಲಾವಿದನಿಗೆ ಬೇಡಿಕೆಯೇ ಇಲ್ಲವಾಗುವ ಕಾಲ ಖಂಡಿತಾ ದೂರವಿಲ್ಲ. ಪ್ರಸಿದ್ದರಿಗೆ ಪ್ರಚಾರದ ಬರವಿಲ್ಲ, ಪ್ರಚಾರದ ಅಮಲಿನಲ್ಲಿರುವವರಿಗೆ ಈ ಬಗ್ಗೆ ಆಲೋಚಿಸುವ ವ್ಯವಧಾನವಿಲ್ಲ, ಇದರಿಂದ ಮುಂದೆ ನಮ್ಮ ಕಲಾಬುಡಕ್ಕೆ ನಾವೇ ಕೊಳ್ಳಿ ಇಟ್ಟುಕೊಂಡಂತೆ, ಒಂದು ಪ್ರಸಿದ್ದ ಭಾಗವತನ ಹಾಡು, ಒಬ್ಬ ಕಲಾವಿದನ ಒಂದು ಬಗೆಯ ವೇಷ ಒಮ್ಮೆ ಅಪ್ಲೋಡ್ ಆದ ಬಳಿಕ ರಂಗದಲ್ಲಿ ಮತ್ತೆ ಆ ಕಲಾವಿದನ ವೇಷ ನೋಡುವ, ಹಾಡು ಕೇಳುವ ಮನಸ್ಸು ಖಂಡಿತಾ ಪ್ರೇಕ್ಷಕ ಮಾಡಲಾರ.ಇದು ಕಲಾವಿದರು ಗಮನಿಸ ಬೇಕಾದ ಅಂಶ.
ಹಾಗಾದರೆ ಸಾಮಾಜಿಕ ಜಾಲತಾಣಗಳಲ್ಲಿ ಫಿಲ್ಮ್,ಕಥಕಳಿ,ಸಂಗೀತ, ವಾದ್ಯ ವಾದನಗಳೇ ಮೊದಲಾದವುಗಳು ಯುಟ್ಯೂಬ್ ನಲ್ಲಿ ನಮಗೆ ಸಿಗುವುದಿಲ್ಲವೇ ಎಂಬ ಪ್ರಶ್ನೆ. ಇಲ್ಲೆಲ್ಲ ಮೊದಲೇ ಅವರೊಳಗೆ ಹಕ್ಕುಬಾಧ್ಯತೆಗಳ ಒಪ್ಪಂದ (ಕಾಪಿರೈಟ್ಸ್) ಏರ್ಪಟ್ಟಿರುತ್ತದೆ. ಇಂತಹ ಸಾಧಕರೆಲ್ಲ ಒಂದು ಕಾರ್ಯಕ್ರಮಕ್ಕೆ ಪಡೆವ ಸಂಭಾವನೆ ಎಷ್ಟು? ಲಕ್ಷೋಪಲಕ್ಷ. ಈ ಮಟ್ಟಕ್ಕೆ ಯಕ್ಷಗಾನ ಕಲಾವಿದ ಹಾಗೂ ಈ ಕಲೆ ಇನ್ನೂ ಬೆಳೆಯಬೇಕಾಗಿದೆ. ಇಲ್ಲಿ ಕಲಾವಿದ ಪಡೆಯುವುದು ಅಷ್ಟೋ ಇಷ್ಟೋ ಸಂಭಾವನೆ ಯಾ ದಿನ ಕೂಲಿ, ಇಂದು ನಮ್ಮಲ್ಲಿರುವ ಈ ಕಲೆಯ ಅಷ್ಟನ್ನು ಈ ರೀತಿಯಾಗಿ ಹಂಚ ಹೊರಟದ್ದೇ ಆದಲ್ಲಿ ಈಗಾಗಲೇ ಕಾಲ ಮಿತಿಯ ಯಕ್ಷಗಾನ ಮುಂದೆ ಇದು ಯಾರಿಗೂ ಬೇಡವಾಗಿ ಕೇವಲ ಹರಕೆ ಸಂದಾಯಕ್ಕೆ ಮಾತ್ರ ಸೀಮಿತವಾಗಿ ಉಳಿದೀತು.ಈಗಾಗಲೇ ಮ್ಯಾಜಿಕ್ ಕಲೆ ಸೊರಗಿದಂತೆ.
ಕಾಲಗುಣವೋ ಕರ್ಮಗುಣವೋ ಅರಿಯದು. ಎಲ್ಲಾ ಕ್ಷೇತ್ರಕ್ಕೂ ಈ ಕೊರೊನಾ ಮಾರಿ ಆವರಿಸಿದೆ. ಕಾಲಕ್ಕನುಗುಣವಾಗಿ ಕಲಾವಿದರೆಲ್ಲ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಉತ್ತಮ.
ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ ಅನೇಕ ವಿಡಿಯೋ ಗಳನ್ನು ಈಗಾಗಲೇ ಆನೇಕರು ರೆಕಾರ್ಡ್ ಮಾಡಿಕೊಂಡು ಅನುಕೂಲಕ್ಕೆ ತಕ್ಕಂತೆ ಬಳಸುತ್ತಿರುವುದು ಭವಿಷ್ಯದಲ್ಲಿ ಇನ್ನೂ ಹಾನಿಕಾರಕ. ಇಲ್ಲಿ ಕಲಾವಿದ,ಯಜಮಾನ ಸೇರಿ ಚಿಂತನೆ ನಡೆಸಿ ಹೇಗೆ ಒಳ್ಳೆಯ ಪ್ರಸಂಗ ಪ್ಯಾಕೇಜ್ ನೀಡಿ ಪ್ರೇಕ್ಷಕರಿಗೆ ಕೊಟ್ಟ ಹಣಕ್ಕೆ ಮನ ಸಂತೋಷಪಡಿಸ ಬಹುದು ಎಂಬುದರ ಬಗ್ಗೆ, ಮತ್ತು ಎಷ್ಟು ಸಮಯ ಜಾಲತಾಣದಲ್ಲಿ ಹರಿಯ ಬಿಡಬಹುದು ಅದರ ಹಕ್ಕನ್ನು ವೆಬ್‌ಸೈಟ್ ನೊಂದಿಗೆ ಮೊದಲೇ ಕಾಯ್ದಿರಿಸಿಕೊಂಡು ಮುಂದುವರಿಯುವುದು ಉತ್ತಮ. ಅಲ್ಲಿ ಕೂಡ ಹಣ ಪಾವತಿಸಿಯೇ ಜನ ನೋಡುವಂತೆ ಆಗಬೇಕು. ಆಗ ಮಾತ್ರ ಕಲಾವಿದ ಭವಿಷ್ಯ ಉಳಿಸಿಕೊಂಡಾನು ಹೊರತು ಮೂರು ಮಾರ್ಗ ಸೇರಿದಲ್ಲೆಲ್ಲಾ ಕಾರ್ಯಕ್ರಮ,ಅದು ಅಲ್ಲಿಂದಲೇ ಯೂಟ್ಯೂಬ್ ಸೇರಿದರೆ ಕಲೆ ಸೊರಗುವುದು ಖಚಿತ ಮತ್ತು ಅದು ತಾತ್ಕಾಲಿಕ.
ಯಕ್ಷಗಾನದ ಮಂಗಳದ ಹಾಡಿನ ಮೊದಲು
ರಂಗದಲ್ಲಿ ಪಾತ್ರಧಾರಿ ಹೇಳುವಂತೆ…
ಆಡಿದವರಿಗೆ,ಆಡಿಸಿದವರಿಗೆ,ನೋಡಿದವರಿಗೆ,ನೋಡುವಂತೆ ಮಾಡಿದವರಿಗೆ, ಮುಖ್ಯವಾಗಿ ತನ್ನ ಅನುಕೂಲದ ಸಮಯದಲ್ಲಿ ಮನೆಯಲ್ಲೇ ಇದ್ದು ವೀಕ್ಷಿಸಿದವರಿಗೆ ಆ ಭಗವಂತ ಇನ್ನಾದರೂ ಕಲೆ ಕಲಾವಿದ ಇದರಲ್ಲಿ ಸೊರಗದಂತೆ ಮಾಡಲಿ ಎಂಬ ಆಶಯ ನನ್ನದು.
ಈ ಯಕ್ಷಗಾನ ಕಲೆಯ ಒಟ್ಟು ಆಶಯವನ್ನು “ಹಾಲಿಗೆ” ಹೋಲಿಸಿದರೆ ಪ್ರೇಕ್ಷಕ ಕೊಡುವುದು ಸಕ್ಕರೆಯಾದರೆ ಅದು ನಮ್ಮಲ್ಲಿ ಕರಗಿಹೋಗುವದು,ಉಪ್ಪಾದರೆ ಒಡೆದು ಹೋಗುವುದು,ಮೊಸರಾದರೆ ನಮ್ಮ ಅಸ್ತಿತ್ವವನ್ನೇ ಬದಲಾಯಿಸುವುದು,ನೀರಾದರೆ ತೆಳ್ಳಗೆ ಮಾಡುತ್ತದೆ.ಹೀಗೆ ಹಾಲು ಯಾರ ಪಾಲಾಗಬೇಕು ಎಂಬುದನ್ನು ಕಲಾವಿದ,ಯಜಮಾನನೇ ನಿರ್ಧರಿಸಿಕೊಳ್ಳಬೇಕು.ಹೊರತು ಅನ್ಯತ್ರ ಅಸಾಧ್ಯ.
ಎಂ. ದೇವಾನಂದ ಭಟ್, ಬೆಳುವಾಯಿ