ಉಡುಪಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನೆಪವೊಡ್ಡಿ ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ಜಟ್ಕಾ ಸ್ಟ್ಯಾಂಡ್ ಬಳಿ ನಡೆದ ಪ್ರತಿಭಟನೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ದ್ವೇಷ ಭಾಷಣ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದಾ ನಶೆಯಲ್ಲಿ ತೇಲುತ್ತಿರುವ ರಾಹುಲ್ ಗಾಂಧಿಗೆ ಚಿಂತನೆ ಮಾಡುವ ಶಕ್ತಿ ಇಲ್ಲ. ಕ್ರಾಕೋಚ್‌ಗಳೊಂದಿಗೆ ಸೇರಿ ಪ್ರಧಾನಿಯನ್ನು ಟೀಕೆ ಮಾಡುವ ಕೆಲಸ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ್ದಂತೆಯೇ ರಾಹುಲ್ ಗಾಂಧಿ ವಂಶವನ್ನು ಕಾರ್ಯಕರ್ತರು ಧ್ವಂಸ ಮಾಡಲಿದ್ದೇವೆ. ಉಡುಪಿ ಜಿಲ್ಲೆಯ ಕಲಾವಿದರನ್ನು ಒಟ್ಟುಗೂಡಿಸಿ ವಿಷ ಬೀಜ ಬಿತ್ತಲು ಯತ್ನಿಸುತ್ತಿರುವ ಪ್ರಕಾಶ್ ರಾಜ್ ಕರಾವಳಿಯಲ್ಲಿ ಬಂದು ಅಧಿಕ ಪ್ರಸಂಗ ಮಾಡಿದರೆ ಅರಬ್ಬಿ ಸಮುದ್ರದಲ್ಲಿ ಎಳೆಯಬೇಕಾಗುತ್ತದೆ ಅಥವಾ ಮೀನಿಗೆ ಆಹಾರವಾಗಬೇಕಾಗುತ್ತದೆ ಎಂದು ಯಶ್‌ಪಾಲ್ ಪ್ರತಿಭಟನೆಯಲ್ಲಿ ಹೇಳಿದ್ದರು.
ಉಡುಪಿ ನಗರ ಪೊಲೀಸ್ ಠಾಣೆಗೆ ತೆರಳಿದ ಕಾಂಗ್ರೆಸ್ ಮುಖಂಡರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರಿಗೆ ದೂರು ಸಲ್ಲಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿದ ದೂರಿನಂತೆ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ವಕೀಲರಾದ ಹಬೀಬ್ ಅಲಿ, ಹರೀಶ್ ಪಾಂಗಾಳ ಮೊದಲಾದವರಿದ್ದರು.














