ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರ ಮತ್ತು ಪೋಷಕರ ಮೊದಲ ಆದ್ಯತೆ. ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ವಿನಿಯೋಗಿಸುತ್ತಿದೆ. ಶಾಲಾ ಅಭಿವೃದ್ಧಿ ಅನುದಾನದ ಜೊತೆಗೆ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನೂ ಕಲ್ಪಿಸುತ್ತಿದೆ. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನೂ ನೇಮಿಸಿಕೊಳ್ಳುತ್ತಿದೆ. ಇದರೊಂದಿಗೆ ಕಾರ್ಪೊರೇಟ್ ಸಂಸ್ಥೆಗಳ ಸಿಎಸ್ಆರ್ (CSR) ನಿಧಿ, ಹಳೆಯ ವಿದ್ಯಾರ್ಥಿಗಳು, ಎಸ್ಡಿಎಂಸಿ (SDMC) ಹಾಗೂ ಊರಿನ ದಾನಿಗಳು ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಅಭಿನಂದನೀಯ ಬೆಳವಣಿಗೆ. ಸರ್ಕಾರ ಪ್ರತಿ ಮಗುವಿನ ಶಿಕ್ಷಣಕ್ಕಾಗಿ ವರ್ಷಕ್ಕೆ 2 ಲಕ್ಷ ರೂ.ಗಿಂತ ಅಧಿಕ ವೆಚ್ಚ ಮಾಡುತ್ತಿದ್ದರೂ ಸರ್ಕಾರಿ ಶಾಲೆಗಳು ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಮುಖ್ಯಶಿಕ್ಷಕರ ನೇಮಕಾತಿಯಲ್ಲಿ ‘ಅರ್ಹತೆ’ಗಿಂತ ‘ಹಿರಿತನ’ಕ್ಕೆ ಪ್ರಾಶಸ್ತ್ಯ ನೀಡುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ವಯೋಸಹಜ ದೈಹಿಕ ಶ್ರಮದ ಕೊರತೆ ಹಾಗೂ ಅನಾರೋಗ್ಯದ ಕಾರಣಗಳಿಂದಾಗಿ, ಹಿರಿಯ ಶಿಕ್ಷಕರಿಗೆ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗುವುದು ಮತ್ತು ಇಲಾಖೆಯ ತಕ್ಷಣದ ನಿಯಮಗಳಿಗೆ ಸ್ಪಂದಿಸುವುದು ಕಷ್ಟಸಾಧ್ಯವಾಗುತ್ತಿದೆ. ಇದರಿಂದಾಗಿ ಶಾಲೆಗಳ ಸುಧಾರಣೆ ಕೇವಲ ಕನಸಾಗಿಯೇ ಉಳಿಯುತ್ತಿದ್ದು ಶಾಲಾ ಅಭಿವೃದ್ಧಿಗೆ ತೊಡಕಾಗುತ್ತಿರುವುದು ನಿರಾಕರಿಸಲಾಗದ ಸತ್ಯ.
ಕ್ರಿಯಾಶೀಲ ಶಿಕ್ಷಕರಿಗೆ ಹೆಚ್ಚುವರಿ ಹೊರೆ
ಮುಖ್ಯಶಿಕ್ಷಕರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದಿದ್ದಾಗ ಆ ಆಡಳಿತಾತ್ಮಕ ಕೆಲಸಗಳೆಲ್ಲವೂ ಶಾಲೆಯಲ್ಲಿರುವ ಇತರ ಕ್ರಿಯಾಶೀಲ ಶಿಕ್ಷಕರ ಹೆಗಲೇರುತ್ತವೆ. ವಿದ್ಯಾರ್ಥಿಗಳ ಕಲಿಕೆಗೆ ಒತ್ತು ನೀಡಬೇಕಾದ ಶಿಕ್ಷಕರನ್ನು ಕಾಗದಪತ್ರ, ಆನ್ಲೈನ್ ಅಪ್ಡೇಟ್ಗಳಲ್ಲೇ ಬಳಲಿಸುವ ಶಿಕ್ಷಣ ಇಲಾಖೆ, ಅರ್ಹತೆಯಿಲ್ಲದವರಿಗೆ ಮುಖ್ಯಶಿಕ್ಷಕ ಹುದ್ದೆ ನೀಡುವ ಮೂಲಕ ಕ್ರಿಯಾಶೀಲ ಶಿಕ್ಷಕರ ಅಮೂಲ್ಯ ಸಮಯವೂ ಮಕ್ಕಳಿಗೆ ಸಿಗದಂತೆ ಮಾಡುತ್ತಿದೆ.
ಕಲಿಕೆಗೂ ಹಿನ್ನಡೆ
ಅಸಹಾಯಕರನ್ನು ಮುಖ್ಯಶಿಕ್ಷಕರ ಹುದ್ದೆಯಲ್ಲಿ ಕೂರಿಸುವುದು ಶಾಲೆಯ ಅಭಿವೃದ್ಧಿಗೆ ಮಾತ್ರವಲ್ಲದೇ ಮಕ್ಕಳ ಶೈಕ್ಷಣಿಕ ಹಿನ್ನಡೆಗೂ ನೇರ ಕಾರಣವಾಗುತ್ತದೆ. ಮುಖ್ಯಶಿಕ್ಷಕರಲ್ಲಿ ಸೂಕ್ತ ಮಾರ್ಗದರ್ಶನ ಹಾಗೂ ಆಡಳಿತಾತ್ಮಕ ದಕ್ಷತೆ ಇಲ್ಲದಿದ್ದಾಗ ಸಹಶಿಕ್ಷಕರಿಂದ ಕೆಲಸ ತೆಗೆಸಿಕೊಳ್ಳಲು ಅವರು ವಿಫಲರಾಗುತ್ತಾರೆ. ಇದರಿಂದಾಗಿ ಕೆಲ ಸಹಶಿಕ್ಷಕರು ಈ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

ನಿವೃತ್ತಿಗೂ ತಡೆ
ಸೇವೆಯ ಕೊನೆಯ ಹಂತದಲ್ಲಿರುವ ಶಿಕ್ಷಕರು ಸ್ವಯಂ ನಿವೃತ್ತಿಗೆ (VRS) ಮುಂದಾದರೆ, “ನೀವು ನಿರ್ದಿಷ್ಟ ಶಾಲೆಗೆ ವರ್ಗಾವಣೆ ಪಡೆಯಿರಿ, ಅಲ್ಲಿ ಉತ್ತಮ ಸಹಶಿಕ್ಷಕರಿದ್ದಾರೆ, ಅವರೇ ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತಾರೆ” ಎಂದು ಹೇಳಿ ಅಧಿಕಾರಿಗಳು ನಿವೃತ್ತಿಯನ್ನು ತಡೆಯುವ ಉದಾಹರಣೆಗಳೂ ಇವೆ. ನಿವೃತ್ತಿಯ ಮೂಡ್ನಲ್ಲಿರುವವರಿಂದ ಹೆಚ್ಚಿನ ಕಾರ್ಯಕ್ಷಮತೆ ನಿರೀಕ್ಷಿಸಲು ಸಾಧ್ಯವಿಲ್ಲ. ಇದರಿಂದಾಗಿ ಶಾಲೆಗೆ ಲಭ್ಯವಾಗಬಹುದಾಗಿದ್ದ ಒಬ್ಬ ಯುವ ಅತಿಥಿ ಶಿಕ್ಷಕನ ಸೇವೆಯೂ ಕೈತಪ್ಪಿ ಹೋಗುತ್ತದೆ.
ಉತ್ಸಾಹಿ ಅತಿಥಿ ಶಿಕ್ಷಕರು
ಬಹುತೇಕ ಶಾಲೆಗಳಲ್ಲಿ ಕಾಯಂ ಶಿಕ್ಷಕರಿಗಿಂತ ಅತಿಥಿ ಶಿಕ್ಷಕರೇ ಹೆಚ್ಚು ಶ್ರದ್ಧೆ, ಬದ್ಧತೆ ಹಾಗೂ ವಿಶೇಷ ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಪೋಷಕರು ಮತ್ತು ಎಸ್ಡಿಎಂಸಿಯ ಮಾತು. ಕಾಯಂ ಶಿಕ್ಷಕರ ಶೇಕಡಾ 10ರಷ್ಟು ವೇತನ ಪಡೆಯುವ ಅತಿಥಿ ಶಿಕ್ಷಕರು, ಅವರಿಗಿಂತ ಹತ್ತು ಪಟ್ಟು ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಅನೇಕ ಶಾಲಾ ಆಡಳಿತ ಮಂಡಳಿಗಳು ಅಭಿಪ್ರಾಯಪಡುತ್ತವೆ.
ಪೊಲೀಸ್ ಠಾಣೆಯಲ್ಲಿ ಸಬ್ಇನ್ಸ್ಪೆಕ್ಟರ್ (SI) ಆಗಲಿ ಅಥವಾ ಬ್ಯಾಂಕುಗಳಲ್ಲಿ ಮ್ಯಾನೇಜರ್ ಆಗಲಿ—ನೇಮಕಾತಿಗೆ ನಿರ್ದಿಷ್ಟ ಪರೀಕ್ಷೆ ಮತ್ತು ‘ಅರ್ಹತೆ’ಯೇ ಮಾನದಂಡವಾಗಿದೆಯೇ ಹೊರತು ಬರಿ ‘ಹಿರಿತನ’ವಲ್ಲ. ಇದೇ ನಿಯಮವನ್ನು ಶಿಕ್ಷಣ ಇಲಾಖೆಯಲ್ಲೂ ಜಾರಿಗೆ ತಂದರೆ ಸರ್ಕಾರಿ ಶಾಲೆಗಳ ಪಲ್ಲಟ ಮತ್ತು ಅಭಿವೃದ್ಧಿ ಖಚಿತ. ಹಾಗೆಂದು ಎಲ್ಲ ಹಿರಿಯ ಶಿಕ್ಷಕರನ್ನೂ ದೂಷಿಸಲಾಗದು. ಅತ್ಯಂತ ದಕ್ಷತೆ, ಪ್ರಾಮಾಣಿಕತೆ ಹಾಗೂ ಸೇವಾಮನೋಭಾವದಿಂದ ಕಾರ್ಯನಿರ್ವಹಿಸುವ ಸಾವಿರಾರು ಹಿರಿಯ ಶಿಕ್ಷಕರಿದ್ದಾರೆ; ನಿವೃತ್ತಿಯ ನಂತರವೂ ಶಾಲೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುವವರಿದ್ದಾರೆ. ಆದರೆ, ಮುಖ್ಯಶಿಕ್ಷಕ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎನಿಸುವವರು ಸ್ವಯಂಪ್ರೇರಿತರಾಗಿ ಆ ಹುದ್ದೆಯಿಂದ ಹಿಂದೆ ಸರಿಯುವುದು ಸೂಕ್ತ. ಸುಧಾರಣೆಗಾಗಿ ಬದಲಾವಣೆ ಅನಿವಾರ್ಯ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಾಗೂ ಸರ್ಕಾರಿ ಶಾಲೆಗಳ ಹಿತದೃಷ್ಟಿಯಿಂದ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಿದೆ.









































