ಕಾರ್ಕಳ ತಾಲೂಕಿನ 21 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಸಾಧ್ಯತೆ – ಜಿಲ್ಲಾಧಿಕಾರಿ
ಉಡುಪಿ : ಜಿಲ್ಲೆಯಲ್ಲಿ ಈ ವರ್ಷದಲ್ಲಿ 1959 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಈವರೆಗೆ 1182ಮಿ.ಮೀ. ಮಳೆಯಾಗಿದೆ. ಈಗಾಗಲೇ ವಾಡಿಕೆ ಮಳೆಯಲ್ಲಿ ಶೇ. 40ರಷ್ಟು ಕೊರತೆ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.
ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಕಳ ತಾಲೂಕಿನ 17 ಗ್ರಾಮ ಪಂಚಾಯತ್‌ಗಳ ಪೈಕಿ 21 ಗ್ರಾಮ, ಕುಂದಾಪುರ ತಾಲೂಕಿನ 36 ಗ್ರಾ.ಪಂ.ಗಳ 57 ಗ್ರಾಮ, ಉಡುಪಿ ತಾಲೂಕಿನ 4 ಗ್ರಾ.ಪಂ.ಗಳ 6 ಗ್ರಾಮ, ಬೈಂದೂರು ತಾಲೂಕಿನ 15 ಗ್ರಾ.ಪಂ. ಗಳ 22 ಗ್ರಾಮ, ಬ್ರಹ್ಮಾವರ ತಾಲೂಕಿನ 13 ಗ್ರಾ.ಪಂ.ಗಳ 25 ಗ್ರಾಮ, ಕಾಪು ತಾಲೂಕಿನ 4 ಗ್ರಾ.ಪಂ.ಗಳ 5 ಗ್ರಾಮ ಹಾಗೂ ಹೆಬ್ರಿ ತಾಲೂಕಿನ 5 ಗ್ರಾ.ಪಂ.ಗಳ 10 ಗ್ರಾಮಗಳು ಸೇರಿದಂತೆ ಒಟ್ಟು 94 ಗ್ರಾ.ಪಂ.ಗಳ 146 ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದವರು ವಿವರಿಸಿದರು.
ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಪರ್ಯಾಯ ಮೂಲಗಳಿಂದ ಕುಡಿಯುವ ನೀರಿನ ಸರಬರಾಜು ಮಾಡಬೇಕು. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಡಿಸಿ ಸ್ಪಷ್ಟ ಸೂಚನೆ ನೀಡಿದರು.

ಪರಿಹಾರ ವಿತರಣೆ ಬಾಕಿ ಉಳಿಯದಿರಲಿ
ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಹಾಗೂ ಬಳಿಕ ಮಳೆಗಾಲದ ಮಳೆಯಿಂದ ಆಗಿರುವ ಮಾನವ ಜೀವಹಾನಿ ಹಾಗೂ ಜಾನುವಾರು ಜೀವಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರದ ಮೊತ್ತ ವಿತರಣೆ ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಅವರು ಕಂದಾಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ರೈತರ ಅವಶ್ಯಕತೆಗೆ ಅನುಗುಣವಾಗಿ ಬಿತ್ತನೆ ಬೀಜ ಹಂತಹಂತವಾಗಿ ದಾಸ್ತಾನೀಕರಿಸಿ, ರೈತರಿಗೆ ವಿತರಿಸಬೇಕು ಎಂದು ತಿಳಿಸಿದ ಡಿಸಿಯವರು ರಸಗೊಬ್ಬರ ವಿತರಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಕೃತಕ ಅಭಾವ ಸೃಷ್ಟಿಯಾಗದಂತೆ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 4720 ಮೆ.ಟನ್‌ನಷ್ಟು ರಸಗೊಬ್ಬರ ದಾಸ್ತಾನು ಇದ್ದು, ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣು ಪರೀಕ್ಷಾ ಆಧಾರಿತ ಪೋಷಕಾಂಶಗಳ ಶಿಫಾರಸ್ಸು ಹಾಗೂ ಹಸಿರೆಲೆ ಗೊಬ್ಬರದ ಬೀಜಗಳ ಬಳಕೆಯ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಶಾಲಾ ಕೊಠಡಿಗಳ ಸುರಕ್ಷತೆ
ಜಿಲ್ಲೆಯಲ್ಲಿರುವ ಶಾಲಾ-ಅಂಗನವಾಡಿ ಕಟ್ಟಡ ಹಾಗೂ ಕೊಠಡಿಗಳ ಸದೃಢತೆಯ ಬಗ್ಗೆ ಲೋಕೋಪಯೋಗಿ ಇಲಾಖೆ, ಪಂಚಾಯತ್ರಾಜ್ ಇಲಾಖೆ ಅಭಿಯಂತರರು, ಶಿಕ್ಷಣ ಇಲಾಖೆ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ, ಸುರಕ್ಷತೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದೊಮ್ಮೆ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಬಳಕೆಗೆ ಯೋಗ್ಯವಿಲ್ಲದಿದ್ದಲ್ಲಿ ಅಂತಹ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದೇ ಬದಲೀ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಡಿಎಫ್‌ಓ ರುಥ್ರೇನ್ ಪಿ., ವೈಲ್ಡ್‌ಲೈಫ್ ಡಿಎಫ್‌ಓ ಶಿವರಾಮ ಎಂ. ಬಾಬು, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.


































































