ಮಳೆಗಾಲದಲ್ಲೂ ಎಚ್ಚೆತ್ತುಕೊಳ್ಳದ ಮೆಸ್ಕಾಂ ಅಧಿಕಾರಿಗಳು
ಕಾರ್ಕಳ : ಕಳೆದ ಕೆಲದಿನಗಳಿಂದ ಕಾರ್ಕಳ, ಕುಕ್ಕುಂದೂರು, ಕಾಬೆಟ್ಟು ಪರಿಸರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಇದೀಗ ಬೇಸಿಗೆ ಮಾತ್ರವಲ್ಲದೇ ಮಳೆಗಾಲದಲ್ಲೂ ಕರೆಂಟ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ತಾಲೂಕಿನ ವಿವಿಧೆಡೆ ವಿದ್ಯುತ್ ಪರಿವರ್ತಕ ಹಾಗೂ ಕಂಬಗಳಿಗೆ ಸುತ್ತಿರುವ ಗಿಡಗಂಟಿ, ಬಳ್ಳಿ, ತಾಗಿದ ಗೆಲ್ಲುಗಳನ್ನು ತೆರವುಗೊಳಿಸುವಲ್ಲಿ ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಗುಣಮಟ್ಟದ ವಿದ್ಯುತ್ ಪೂರೈಕೆ ಇಲ್ಲದೇ ಮನೆಗಳಿಗೆ ಮಾತ್ರವಲ್ಲದೇ ವಾಣಿಜ್ಯ ಮಳಿಗೆ, ಇಂಡಸ್ಟ್ರೀಗಳಿಗೂ ಸಮಸ್ಯೆಯಾಗಿದೆ.
ಗ್ರಾಮೀಣ ಭಾಗದಲ್ಲೂ ಅಸಮರ್ಪಕ, ಅನಿಯಮಿತ ವಿದ್ಯುತ್ ಸರಬರಾಜಿನಿಂದ ರೈತರ ಬದುಕು ದುಸ್ತರವಾಗಿದೆ. ವಿದ್ಯುತ್ ಇಲ್ಲದೆ ಬೆಳೆಗಳು ಒಣಗುತ್ತಿವೆ ಎಂದು ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.


ಅಪಾಯಕಾರಿ
ವಿವಿಧೆಡೆ ಗಿಡಗಂಟಿ, ಬಳ್ಳಿಗಳು ನೆಲದಿಂದ ವಿದ್ಯುತ್ ಪರಿವರ್ತಕ ಹಾಗೂ ಕಂಬದ ಮೇಲಿನ ತಂತಿಗಳವರೆಗೂ ಚಾಚಿಕೊಂಡಿದೆ. ಹಸಿರು ಬಳ್ಳಿಗಳು ತಂತಿಗೆ ತಾಗಿಕೊಂಡಾಗ ವಿದ್ಯುತ್ ಪ್ರವಹಿಸಿ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ. ವಿದ್ಯುತ್ ಪರಿವರ್ತಕಗಳಿಗೆ (transformer) ಬಳ್ಳಿಗಳು ಹಬ್ಬಿದರೆ ಬೆಂಕಿ ಹೊತ್ತಿಕೊಳ್ಳುವ ಅಪಾಯವೂ ಇದೆ.
ತೆಳ್ಳಾರು ರಾಘವೇಂದ್ರ ಮಠ ರಸ್ತೆ, ಗುಡ್ಡೆಯಂಗಡಿ ಬೊಬ್ಬರ್ಯಕಟ್ಟೆಯಿಂದ ಬೊಬ್ಬಳ ಸಂಪರ್ಕಿಸುವ ರಸ್ತೆ, ಪೆರ್ವಾಜೆ ಪತ್ತೊಂಜಿ ಕಟ್ಟೆ ರಸ್ತೆ, ಕಾರ್ಕಳ ನಗರ ಭಾಗ ಹೀಗೆ ತಾಲೂಕಿನ ಹೆಚ್ಚಿನ ಭಾಗದಲ್ಲಿ ವಿದ್ಯುತ್ ಕಂಬ, ಪರಿವರ್ತಕಗಳಿಗೆ ಗಿಡಗಂಟಿಗಳು ಸುತ್ತಿಕೊಂಡಿದೆ. ದಿನನಿತ್ಯ ಈ ರಸ್ತೆಗಳಲ್ಲಿ ವಾಹನ ಸವಾರರು, ಪಾದಚಾರಿಗಳು, ಜಾನುವಾರುಗಳು ಓಡಾಡುತ್ತವೆ. ಆದ್ದರಿಂದ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬ ಹಾಗೂ ಪರಿವರ್ತಕಗಳಿಗೆ ಹಬ್ಬಿರುವ ಬಳ್ಳಿ ತೆರವುಗೊಳಿಸಬೇಕು. ವಿದ್ಯುತ್ ತಂತಿ ಹಾದು ಹೋಗಿರುವ ಕಡೆ ಮರಗಳ ಟೊಂಗೆ ಕತ್ತರಿಸಬೇಕು. ವಿದ್ಯುತ್ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.














