ಅಂಗಳದ ಸಿಹಿಗೆಣಸಿನಿಂದ ಅಮೆರಿಕ ಸರಕಾರದ ಉನ್ನತ ಹುದ್ದೆವರೆಗೆ

ಓದುವ ಹಪಾಹಪಿ, ಎದೆತುಂಬಾ ಛಲ ಮತ್ತು ಕಣ್ಣಲ್ಲೊಂದು ಸ್ಪಷ್ಟ ಗುರಿಯಿದ್ದಾಗ ಸಾಧನೆಯ ಹಾದಿಗೆ ಬಡತನ ಎಂದಿಗೂ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ಹೆಬ್ರಿ ತಾಲೂಕಿನ ಚಾರ ಗ್ರಾಮದ ಸಾಧು ಹಾಂಡ ಅವರೇ ಜೀವಂತ ಸಾಕ್ಷಿ. ಅಂದು ಬದುಕಿನ ಅನಿವಾರ್ಯತೆಗಾಗಿ ಮನೆಯ ಅಂಗಳದಲ್ಲೇ ಸಿಹಿಗೆಣಸು ಬೆಳೆದು ಮಾರುತ್ತಿದ್ದ ಅದೇ ಚಾರದ ಹುಡುಗ, ಇಂದು ಅಮೆರಿಕ ಸರಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಕಡುಬಡತನದ ಬಾಲ್ಯ ಮತ್ತು ಶಿಕ್ಷಣದ ಹಾದಿ
ಚಾರ ಗ್ರಾಮದ ಭೋಜು ಹಾಂಡ ಹಾಗೂ ಪದ್ಮ ದಂಪತಿಯ ಐವರು ಮಕ್ಕಳಲ್ಲಿ ಸಾಧು ಅವರೇ ಕಿರಿಯವರು. 1974ರಲ್ಲಿ ಜನಿಸಿದ ಇವರ ಬಾಲ್ಯ ಅಷ್ಟು ಸುಲಭದ್ದಾಗಿರಲಿಲ್ಲ. ಹೆಬ್ರಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಹೆಬ್ರಿಯ ಜೂನಿಯರ್ ಕಾಲೇಜಿನಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪಡೆದರು. ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರೈಸಿದ ನಂತರ, ಇವರ ಉನ್ನತ ಶಿಕ್ಷಣದ ಹಾದಿ ವಿಸ್ತರಿಸಿತು. ಮಹಾರಾಷ್ಟ್ರದ ಆರ್.ಐ.ಟಿ ಸಂಸ್ಥೆಯಿಂದ ಎಂ.ಬಿ.ಎ. ಪದವಿ ಗಳಿಸಿದ ಸಾಧು, ಆ ಬಳಿಕ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಐ.ಐ.ಎಂ. ಅಹಮದಾಬಾದ್‌ನಲ್ಲಿ ಉನ್ನತ ಶಿಕ್ಷಣ ಪಡೆದರು. ವ್ಯವಹಾರ ಆಡಳಿತ ವಿಷಯದಲ್ಲಿ ಅಮೆರಿಕದಲ್ಲೇ ಪಿಎಚ್.ಡಿ ಮುಗಿಸಿರುವ ಸಾಧು, ಜ್ಞಾನದ ಹಸಿವನ್ನು ನೀಗಿಸಿಕೊಂಡ ಬಗೆ ಅನನ್ಯ.

ಬಾಲ್ಯದ ನೆನಪುಗಳ ಸುರುಳಿ
“ನಮ್ಮ ಬಾಲ್ಯ ಕಡುಬಡತನದಿಂದ ಕೂಡಿತ್ತು. ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಇತ್ತು. ಶಾಲೆಯ ಸಮವಸ್ತ್ರ ಮತ್ತು ಪುಸ್ತಕಗಳನ್ನು ಕೊಳ್ಳಲು ಹಣವಿಲ್ಲದೆ, ಮನೆಯ ಅಂಗಳದಲ್ಲೇ ಸಿಹಿಗೆಣಸು ಬೆಳೆದು ಮಾರಿ ಆ ಹಣದಿಂದ ವಿದ್ಯಾಭ್ಯಾಸ ಮುಂದುವರಿಸಿದ್ದೆ. ಅಂದಿನ ಆ ಬದುಕಿನ ಹೋರಾಟವೇ ನನ್ನನ್ನು ಇಂದು ಮತ್ತಷ್ಟು ಬಲಿಷ್ಠ ವ್ಯಕ್ತಿಯನ್ನಾಗಿ ರೂಪಿಸಿದೆ. ನನ್ನ ಶಿಕ್ಷಣದ ಆರಂಭಿಕ ಹಂತದಲ್ಲಿ ತಂದೆ-ತಾಯಿ ಬೆಂಬಲಿಸಿದರೆ, ಆ ನಂತರ ಅಣ್ಣಂದಿರು ಬೆಂಬಲವಾಗಿ ನಿಂತರು” ಎಂದು ಸಾಧು ಹಾಂಡ ಅವರು ಹಳೆಯ ದಿನಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಕಾರ್ಪೊರೇಟ್ ಜಗತ್ತಿನಿಂದ ಅಮೆರಿಕ ಸರಕಾರದವರೆಗೆ
ಎಂ.ಪಿ. ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಸಾಧು, ತದನಂತರ ಕಾರ್ಪೊರೇಟ್ ಜಗತ್ತಿಗೆ ಕಾಲಿಟ್ಟರು. ಇನ್ಫೋಸಿಸ್, ವಿಪ್ರೋ, ಬ್ಯಾಂಕ್ ಆಫ್ ಅಮೆರಿಕ ಮತ್ತು ಅಮೆರಿಕದ ಸ್ವಿಸ್ ಬ್ಯಾಂಕ್‌ನಂತಹ ಜಾಗತಿಕ ಬಹುರಾಷ್ಟ್ರ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸಿದ ಇವರು, ಪ್ರಸ್ತುತ ಅಮೆರಿಕ ಸರಕಾರದಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಸತಿ ಸೌಲಭ್ಯ ಮತ್ತು ಹುಟ್ಟೂರಿನ ಕಳಕಳಿ
ದೂರದ ಅಮೆರಿಕದಲ್ಲಿ ನೆಲೆಸಿದ್ದರೂ ಹುಟ್ಟೂರಿನ ಪ್ರೀತಿ ಮತ್ತು ಅಭಿಮಾನ ಅವರ ಮನಸ್ಸಿನಿಂದ ಮಾಸಿಲ್ಲ. ಕೃಷಿ ತನ್ನ ಜೀವನದ ಒಂದು ಭಾಗ ಎಂದು ಹೇಳುವ ಅವರು ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಅಪೇಕ್ಷೆಯಿಂದ ಹುಟ್ಟೂರಿನಲ್ಲಿಯೇ ಒಂದು ಫಾರ್ಮ್ ಖರೀದಿಸಿ ಸುತ್ತಮುತ್ತಲಿನ ಜನರಿಗೆ ಉದ್ಯೋಗಾವಕಾಶ ಒದಗಿಸಿದ್ದಾರೆ.

ಜೆಕೆಎಕೆ ವೆಂಚರ್ಸ್‌ ಎಲ್‌ಎಲ್‌ಸಿ ಘಟಕದಡಿ ಅಮೆರಿಕ ಹಾಗೂ ಕೆನಡಾಕ್ಕೆ ಹೊಸದಾಗಿ ಬರುವ ವಲಸಿಗರಿಗೆ ಮತ್ತು ವಿದ್ಯಾರ್ಥಿಗಳಿಗೆ ನೆಲೆಗೊಳ್ಳಲು ಅನುಕೂಲವಾಗುವಂತೆ ಸಹಾಯಧನದ ರೂಪದಲ್ಲಿ ವಸತಿ ಸೌಲಭ್ಯಗಳನ್ನು ಒದಗಿಸುತ್ತಾ ನೆರವಾಗುತ್ತಿದ್ದಾರೆ. ಸಾಧು ಹಾಂಡ ಅವರ ಸೇವೆ, ಕಾರ್ಯದಕ್ಷತೆ ಗುರುತಿಸಿ ಹಲವಾರು ಸಂಘ – ಸಂಸ್ಥೆಗಳು ಸನ್ಮಾನಿಸಿವೆ.

ಬಾಲಾಜಿ ಇನ್‌
ಕಾರ್ಕಳದ ಜನತೆಗೆ ಮತ್ತು ಕಾರ್ಕಳಕ್ಕೆ ಆಗಮಿಸುವ ಪ್ರವಾಸಿಗರಿಗೆ ಉತ್ತಮ ಹೊಟೇಲ್‌ ಮತ್ತು ಲಾಡ್ಜ್‌ ವ್ಯವಸ್ಥೆ ಒದಗಿಸಬೇಕೆಂಬ ಇರಾದೆಯಿಂದ ಜೆಕೆಎಕೆ ವೆಂಚರ್ಸ್‌ ಮೂಲಕ ಪ್ರತಿಷ್ಠಿತ ಬಾಲಾಜಿ ಹೊಟೇಲ್‌ ಖರೀದಿಸಿದ್ದಾರೆ. ಗ್ರಾಹಕರಿಗೆ ಆಧುನಿಕತೆಯೊಂದಿಗೆ ಅತ್ಯುತ್ತಮ ಸೌಕರ್ಯ ಒದಗಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬಾಲಾಜಿ ಇನ್‌ ನಲ್ಲಿ ಗ್ರಾಹಕರಿಗೆ ಆಹ್ಲಾದಕರ ವಾತಾವರಣ ಕಲ್ಪಿಸಿ ಸಂತೃಪ್ತರಾಗುವಂತೆ ಆಸ್ಥೆ ವಹಿಸಲಾಗುತ್ತಿದೆ.

ಕಾಲೇಜು ದಿನಗಳ ಆ ‘ಉಚಿತ ಊಟ’ದ ಋಣ
ಭುವನೇಂದ್ರ ಕಾಲೇಜಿನ ದಿನಗಳನ್ನು ನೆನಪಿಸಿಕೊಳ್ಳುವ ಸಾಧು ಹಾಂಡ ಅವರು ಭಾವುಕರಾಗುತ್ತಾರೆ. “ಅಂದು ಕಾಲೇಜಿನ ಬಳಿ ಕೇವಲ 32 ರೂಪಾಯಿ ಬಾಡಿಗೆಗೆ ಒಂದು ಕೋಣೆಯನ್ನು ಪಡೆದು ಉಳಿದುಕೊಂಡಿದ್ದೆವು. ಅಂತಹ ದಿನಗಳಲ್ಲಿ ನಮಗೆ ಮಧ್ಯಾಹ್ನದ ಊಟವನ್ನು ಕಾಲೇಜಿನಲ್ಲಿ ಉಚಿತವಾಗಿ ನೀಡುತ್ತಿದ್ದರು. ಆ ಅನ್ನದ ಋಣಕ್ಕೆ ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಹಲವರಿರುತ್ತಾರೆ. ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್ ಸರ್ ನನ್ನ ಜೀವನದಲ್ಲಿ ಯಾವಾಗಲೂ ದೊಡ್ಡ ಸ್ಫೂರ್ತಿಯಾಗಿದ್ದಾರೆ” ಎನ್ನುತ್ತಾರೆ ಅವರು.

ಸುಖೀ ಸಂಸಾರ
ಪ್ರಸ್ತುತ ಸಾಧು ಹಾಂಡ ಅವರು ಅಮೆರಿಕದ ಇಂಡಿಯಾನಾಪೊಲಿಸ್ ಪರಿಸರದಲ್ಲಿ ಪತ್ನಿ ತ್ರಿವೇಣಿ, ಪುತ್ರರಾದ ಜತಿನ್ ಮತ್ತು ಅನುಜ್ ಅವರೊಂದಿಗೆ ವಾಸವಾಗಿದ್ದಾರೆ. ಪತ್ನಿ ತ್ರಿವೇಣಿ ಅವರು ಅಲ್ಲಿನ ವಿಶೇಷ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಯುವ ಸಮುದಾಯಕ್ಕೆ ಸಾಧು ಸಂದೇಶ
ಕಲಿಕೆ ಎಂಬುದು ನಿರಂತರವಾಗಿರಲಿ. ಓದು ಕೇವಲ ಒಂದು ಪದವಿಗಷ್ಟೇ ಸೀಮಿತವಾಗದಿರಲಿ. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ನಮ್ಮ ಕೌಶಲ್ಯವಿರಲಿ. ನಮ್ಮ ಬೇರುಗಳು ಕಾರ್ಕಳದಲ್ಲಿದ್ದರೂ, ನಮ್ಮ ಗುರಿ ಮತ್ತು ಆಲೋಚನೆಗಳು ಜಾಗತಿಕ ಮಟ್ಟದ್ದಾಗಿರಲಿ.

























error: Content is protected !!
Scroll to Top