ಕಾರ್ಕಳ ಪೊಲೀಸ್ ಠಾಣೆಯಲ್ಲಿ ಸಂಧಾನದ ಮೂಲಕ ಪ್ರಕರಣ ಸುಖಾಂತ್ಯ
ಕಾರ್ಕಳ : ಪತಿ ಮಕ್ಕಳನ್ನು ಬಿಟ್ಟು ಪ್ರಿಯಕರನ ಜತೆ ಕಾರ್ಕಳಕ್ಕೆ ಓಡಿ ಬಂದ ಮಹಿಳೆಯನ್ನು ಪೊಲೀಸರು ಸಂಧಾನದ ಮೂಲಕ ಪತಿಗೆ ಒಪ್ಪಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಮೇಸ್ತ್ರಿಯಾಗಿ ಕೆಲಸ ನಿರ್ವಹಿಸುತ್ತಾ ಪತ್ನಿ, ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಪತಿಯನ್ನು ಬಿಟ್ಟು ಗಂಗಾವತಿ ನಿವಾಸಿ ಭಾಗ್ಯ(22) ಎಂಬಾಕೆ ಪ್ರಿಯಕರ ಪರಸಪ್ಪ ಎಂಬಾತನ ಜತೆ ಕಾರ್ಕಳಕ್ಕೆ ಬಂದಿದ್ದರು. ಬಳ್ಳಾರಿಯ ಕುರುಗೋಡಿನ ಬಸವರಾಜ ಎಂಬವರ ಜತೆ ಐದು ವರ್ಷ ಹಿಂದೆ ಭಾಗ್ಯಳಿಗೆ ವಿವಾಹವಾಗಿತ್ತು. ಇಬ್ಬರು ಪುಟ್ಟಮಕ್ಕಳು ಇದ್ದಾರೆ. ವಿವಾಹದ ಬಳಿಕ ಬಸವರಾಜ ತನ್ನ ಪತ್ನಿ ಹಾಗೂ ಅತ್ತೆ ಮಾವನ ಜತೆ ಬೆಂಗಳೂರಿನ ರಾಮನಗರಕ್ಕೆ ಕೆಲಸಕ್ಕೆ ಬಂದಿದ್ದ. ಪತಿಯೊಂದಿಗೆ ಚೆನ್ನಾಗಿದ್ದ ಪತ್ನಿ ಭಾಗ್ಯಳಿಗೆ ಇಬ್ಬರು ಮಕ್ಕಳಾದ ಬಳಿಕ ತನ್ನೂರು ಗಂಗಾವತಿಯ – ಯುವಕ ಪರಸಪ್ಪನ ಪರಿಚಯವಾಗಿತ್ತು. ಅವರಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿದ ಪರಿಣಾಮ ಆಕೆ ತನ್ನ ಕುಟುಂಬ ಬಿಟ್ಟು ಜು.10ರಂದು ಪ್ರಿಯಕರನ ಜತೆ ಪರಾರಿಯಾಗಿದ್ದಳು.

ಪ್ರಿಯಕರ ಪರಸಪ್ಪ ಈ ಹಿಂದೆ ಕಾರ್ಕಳದಲ್ಲಿ ಕಲ್ಲುಕೋರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಪರಿಚಯದ ವ್ಯಕ್ತಿಯ ಮೂಲಕ ಬಾಡಿಗೆ ಮನೆಯಲ್ಲಿ ವಾಸವಿದ್ದ. ಪತ್ನಿ ಭಾಗ್ಯ ಮನೆಯಿಂದ ನಾಪತ್ತೆಯಾಗಿದ್ದರಿಂದ ಗಾಬರಿಯಾದ ಪತಿ ಬಸವರಾಜ ಪತ್ನಿಗಾಗಿ ಹುಡುಕಾಟ ನಡೆಸಿದ್ದ. ಬಳಿಕ ಭಾಗ್ಯಳ ಪ್ರಿಯಕರ ಪರಸಪ್ಪನ ಅಣ್ಣ ಈ ಹಿಂದೆ ಕಾರ್ಕಳದಲ್ಲಿ ಕೆಲಸ ಮಾಡಿಕೊಂಡಿದ್ದು, ಆತನ ಮೂಲಕ ಇವರಿಬ್ಬರು ಕಾರ್ಕಳದಲ್ಲಿ ವಾಸವಿರುವುದು ಗೊತ್ತಾಗಿದೆ.
ಬಸವರಾಜನ ಪತ್ನಿ ನಾಪತ್ತೆ ಪ್ರಕರಣ ಕಾರ್ಕಳ ನಗರ ಠಾಣೆಗೂ ತಲುಪಿತ್ತು. ಪೊಲೀಸರು ಭಾಗ್ಯ ಹಾಗೂ ಆಕೆಯ ಪ್ರಿಯಕರನನ್ನು ಠಾಣೆಗೆ ಕರೆಸಿ ಬುದ್ದಿವಾದ ಹೇಳಿದರೂ ಆಕೆ ಪ್ರಿಯಕರನನ್ನು ಬಿಡಲು ಸಿದ್ಧಳಿರಲಿಲ್ಲ. ಪರಸಪ್ಪ ಮಾಡಿದ ಕೆಲಸಕ್ಕೆ ಸಿಟ್ಟಿಗೆದ್ದ ಆತನ ಮನೆಯವರು ಆಕೆಯನ್ನು ಬಿಡುವಂತೆ ಹೇಳಿದರೂ, ಆತ ಬಿಡಲು ಸಿದ್ಧನಿರಲಿಲ್ಲ. ಪೊಲೀಸರು ಆತನಿಗೆ, ಬುದ್ದಿ ಹೇಳಿದರೂ, ಕೇಳಲು ಒಪ್ಪದಿದ್ದಾಗ ಆತನ ಮನೆಯವರೇ ನಾಲ್ಕೇಟು ಬಿಗಿದು ಕರೆದೊಯ್ದರು. ಭಾಗ್ಯಳನ್ನು ಠಾಣೆಯಲ್ಲಿ ಕೂರಿಸಿದ ಪೊಲೀಸರು ಸಂಸಾರದ ಹೊಣೆಗಾರಿಕೆ ಕುರಿತು ಬುದ್ದಿವಾದ ಹೇಳಿದರು. ಕೊನೆಗೂ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡು ಇನ್ನು ಮುಂದೆ ತಾನು ಪತಿ ಹಾಗೂ ಮಕ್ಕಳ ಜತೆ ಸಂಸಾರ ನಡೆಸುವುದಾಗಿ ಹೇಳಿದ ಬಳಿಕ ಪ್ರಕರಣ ಸುಖಾಂತ್ಯ ಕಂಡಿತು.


































