ಶೌರ್ಯ ಸ್ವಯಂ ಸೇವಕರಿಂದ ಮಾನವೀಯ ಕಾರ್ಯ – ಸಂದೀಪ್ ಜಿ.ಎಸ್.
ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವತಿಯಿಂದ ಕಾರ್ಕಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರಿಗೆ ಜು. 14ರಂದು ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್. ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯು ಪ್ರಾಕೃತಿಕ ವಿಕೋಪ ಸಂದರ್ಭ ಶೌರ್ಯ ಸಮಿತಿಯು ಇಲಾಖೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ತಂಡದ ನಿಸ್ವಾರ್ಥ ಸೇವೆ, ಮಾನವೀಯ ಕಾರ್ಯ ಶ್ಲಾಘನೀಯವಾದುದು ಎಂದರು.
ಹಳ್ಳಿಯಲ್ಲಿ ಸಹಕಾರ ಭಾವನೆ ಜೀವಂತ
ತರಬೇತಿದಾರರಾಗಿ ಆಗಮಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಇನ್ಸ್ಪೆಕ್ಟರ್ ಶಾಂತಿಲಾಲ್ ಜಟಿಯ ಮಾತನಾಡಿ, ಹಳ್ಳಿ ಬದುಕಿನಲ್ಲಿ ಒಬ್ಬರಿಗೊಬ್ಬರು ಸಹಕಾರ, ಸ್ಪಂದನೆ ನೀಡುವಂತಹ ಮನೋಭಾವ ಇಂದಿಗೂ ಉಳಿದುಕೊಂಡು ಬಂದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶೌರ್ಯ ವಿಪತ್ತು ನಿರ್ಹಹಣಾ ತಂಡ ರಚಿಸಿ ಅವರಿಗೆ ಅಗತ್ಯ ಮಾರ್ಗದರ್ಶನ, ಸಹಕಾರ ನೀಡುತ್ತಿರುವುದು ಅತ್ಯಂತ ಸ್ತುತ್ಯರ್ಹವೆಂದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಸಬ್‌ಇನ್ಸ್‌ಪೆಕ್ಟರ್ ಸುಭಾಸ್ ಸಿಂದೆ ಅವರು ಪ್ರಾಕೃತಿಕ ವಿಕೋಪದ ವೇಳೆ ಯಾವ ರೀತಿ ಕಾರ್ಯಾಚರಣೆ ನಡೆಸಬೇಕೆಂದು ಪ್ರಾತ್ಯಕ್ಷಿತೆ ನಡೆಸಿಕೊಟ್ಟರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ವೃಷಭರಾಜ್ ಕಡಂಬ, ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ ಯೋಜನಾಧಿಕಾರಿ ಜೈವಂತ ಪಟಾಗರ್, ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಕೆಡಿಆರ್‌ಡಿಪಿ ಕಾರ್ಕಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಧಿಕಾರಿ ಸವಿತಾ ನಿರೂಪಿಸಿ, ಜನಜಾಗೃತಿ ವಿಭಾಗದ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್ ವಂದಿಸಿದರು.
ಸಮಾರೋಪ – ಸನ್ಮಾನ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ತಾಲೂಕು ಮಾಸ್ಟರ್ ಆಗಿ ಪುನರಾಯ್ಕೆಗೊಂಡಿರುವ ಸದಾನಂದ ಸಾಲ್ಯಾನ್, ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಮಾಧವ ಭಂಡಾರ್ಕರ್ ಅವರನ್ನು ಸನ್ಮಾನಿಸಲಾಯಿತು. ನ್ಯೂಸ್ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ ಸನ್ಮಾನಿಸಿದರು. ಕಾರ್ಯಾಗಾರದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ 80 ಮಂದಿ ಸ್ವಯಂ ಸೇವಕರು ಪಾಲ್ಗೊಂಡರು.






































