ಉಡುಪಿ ಜ್ಞಾನಸುಧಾದಲ್ಲಿ ಪ್ರತಿಭಾ ಪುರಸ್ಕಾರ – 39.2 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ : ಜ್ಞಾನಸುಧಾ ಶಿಕ್ಷಣ ಸಂಸ್ಥೆಯಿಂದ ಒಂದು ವರ್ಷಕ್ಕೆ 227 ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್.ಗೆ ಸೇರ್ಪಡೆಯಾಗಿರುವುದು ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೆ ಮಾದರಿ. ಜ್ಞಾನಸುಧಾದಂತಹ ಒಂದು ಸಂಸ್ಥೆಯನ್ನು ಸೃಷ್ಟಿ ಮಾಡಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಇಂತಹ ಸಂಸ್ಥೆಯನ್ನು ದೇಶಕ್ಕೆ ಕೊಡುಗೆಯಾಗಿ ನೀಡಿ ಬದುಕಿಗಿಂತ ದೇಶ ಮಿಗಿಲೆಂಬ ಡಾ. ಸುಧಾಕರ ಶೆಟ್ಟಿಯವರ ಗುಣ ಅಣುಕರಣೀಯ ಎಂದು ಉಡುಪಿ, ಚಿಕ್ಕಮಗಳೂರು ಲೋಕಸಭಾಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗಾಂಧಿ ಆಸ್ಪತ್ರೆ ಉಡುಪಿ ಇದರ ಮೆಡಿಕಲ್‌ ಡೈರೆಕ್ಟರ್‌ ಡಾ. ವ್ಯಾಸರಾಜ ತಂತ್ರಿ ಮಾತನಾಡಿ, ಪ್ರತಿಭೆಯೊಂದಿಗೆ ಪರಿಶ್ರಮ ಮತ್ತು ಸಂಸ್ಕಾರ ಜೊತೆಯಾದಾಗ ಅದೊಂದು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ವಿದ್ಯಾರ್ಥಿಗಳು ಬದುಕನ್ನು ರೂಪುಗೊಳಿಸಿಕೊಳ್ಳುವ ಈ ಕಾಲದಲ್ಲಿ ಪ್ರತಿಭಾ ಪುರಸ್ಕಾರ ಪ್ರೇರಣೆಯಾಗಲಿ. ಬೃಹತ್‌ ಗುರಿಯೊಂದಿಗೆ ಸತ್ಯದ ದಾರಿಯಲ್ಲಿ ಸಾಗಿ ಎಂದರು.

ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, “ವೈದ್ಯೋ ನಾರಾಯಣೋ ಹರಿ”ಎಂಬಂತೆ ಡಾ. ವ್ಯಾಸರಾಜ ತಂತ್ರಿಗಳು ಶ್ರೇಷ್ಠ ಕೈಂಕರ್ಯವನ್ನು ಮಾಡುತ್ತಿದ್ದಾರೆ ಅವರ ಬದುಕು ವಿದ್ಯಾರ್ಥಿಗಳಿಗೆ ಆದರ್ಶವಾಗಲಿ. ವಿದ್ಯಾರ್ಥಿಗಳು ತಮ್ಮ ಶ್ರಮದ ಹಿಂದೆ ತಂದೆ ತಾಯಿ ಶಿಕ್ಷಕರ ಶ್ರಮ ಅಡಗಿದೆ ಎಂಬುದನ್ನು ಅರಿತು ಬಾಳಿ ಎಂದರು.

ಈ ಸಂದರ್ಭ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಪ್ರಥಮ ಪಿ.ಯು.ಸಿ.ಯ ಸಾಧಕ ವಿದ್ಯಾರ್ಥಿಗಳಿಗೆ, ಉಸನ್ಯಾಸಕರುಗಳಿಗೆ ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ವತಿಯಿಂದ 39 ಲಕ್ಷದ 20 ಸಾವಿರ ರೂ. ಗಳ ಪ್ರೋತ್ಸಾಹ ಧನವನ್ನು ನೀಡಲಾಯಿತು.

ಉಡುಪಿ ಜ್ಞಾನಸುಧಾದ ಪ್ರಾಂಶುಪಾಲ ಶ್ರೀನಿಧಿ ಭಾಗವತ್, ಮಣಿಪಾಲ ಜ್ಞಾನಸುಧಾ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಅಜೆಕಾರು ಜ್ಞಾನಸುಧಾ ಪ್ರಾಂಶುಪಾಲ ಸಂತೋಷ್‌, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್‌ ಅಕಾಡೆಮಿಕ್ಸ್‌ ಡಾ. ಮಿಥನ್‌ ಯು., ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಉಪಪ್ರಾಂಶುಪಾಲೆ ವಾಣಿ ಕೆ., ಉಪಪ್ರಾಂಶುಪಾಲ ಪ್ರಕಾಶ್‌ಜೋಗಿ ಮೊದಲಾದವರು ಉಪಸ್ಥಿತರಿದ್ದರು. ಭೌತಶಾಸ್ತ್ರ ಉಪನ್ಯಾಸಕಿ ಜೋತ್ಸ್ನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

























error: Content is protected !!
Scroll to Top