ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ, ಅಕ್ರಮವಾಗಿ ಭಾರತ ಪ್ರವೇಶಿಸಿ ಕೆಲಸ ಮಾಡುತ್ತಿದ್ದ 11 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ನಾಲ್ವರು ಅಪ್ರಾಪ್ತರೂ ಸೇರಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾಗ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದಾರೆ. ಇದರೊಂದಿಗೆ, ಕಳೆದ ಕೆಲವು ದಿನಗಳಲ್ಲಿ ಮಂಗಳೂರಿನಲ್ಲಿ ಪತ್ತೆಯಾದ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ 17ಕ್ಕೆ ಏರಿಕೆಯಾದಂತಾಗಿದೆ.
ಬಂಧಿತರನ್ನು ಎಂ.ಡಿ. ಕೌಸರ್ ಅಲಿ, ಎಂ.ಡಿ. ನೂರ್ ಅಮೀನ್, ಎಂ.ಡಿ. ನಾಹಿದುಲ್ ಇಸ್ಲಾಂ, ಹುಮಾಯೂನ್ ಕಬೀರ್, ರೊಮ್ಜಾನ್ ಅಲಿ, ಅಬ್ದುಲ್ ರಹಮಾನ್ ರೊಯೆಲ್ ಹಾಗೂ ನೋಯಾನ್ ಎಂದು ಗುರುತಿಸಲಾಗಿದೆ. ಉಳಿದ ನಾಲ್ವರು ಅಪ್ರಾಪ್ತರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಕಲಿ ವಿಳಾಸ
ಆರೋಪಿಗಳು ಅಕ್ರಮವಾಗಿ ಭಾರತಕ್ಕೆ ನುಸುಳಿ, ಪಶ್ಚಿಮ ಬಂಗಾಳದ ನಕಲಿ ವಿಳಾಸಗಳನ್ನು ಬಳಸಿಕೊಂಡು ಮಂಗಳೂರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ ಮೂಲದ ಏಜೆಂಟ್ ಒಬ್ಬರ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಬಂಧಿತರಿಂದ ಬಾಂಗ್ಲಾ ಗುರುತಿನ ಚೀಟಿ ವಶ
ಕಾರ್ಯಾಚರಣೆಯ ವೇಳೆ ಬಂಧಿತರ ಬಳಿಯಿಂದ ಬಾಂಗ್ಲಾದೇಶದ ರಾಷ್ಟ್ರೀಯ ಗುರುತಿನ ಚೀಟಿ ಜನನ ಪ್ರಮಾಣಪತ್ರ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಇತರ ದಾಖಲೆಗಳು ಪತ್ತೆಯಾಗಿವೆ. ಈ ದಾಖಲೆಗಳ ಆಧಾರದ ಮೇಲೆ ಅವರು ಬಾಂಗ್ಲಾದೇಶದ ನಿವಾಸಿಗಳೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಸುರತ್ಕಲ್‌ನಲ್ಲಿ 8 ಮಂದಿಯ ಬಂಧನ
ಇತ್ತೀಚೆಗೆ ಸುರತ್ಕಲ್‌ನಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಎಂಟು ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಉರ್ವಾದಲ್ಲಿ 11 ಮಂದಿಯನ್ನು ಬಂಧಿಸಿರುವುದರಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಪತ್ತೆಯಾದ ಅಕ್ರಮ ವಲಸಿಗರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಸಲ್ಲಿಸಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ. ಅಕ್ರಮ ವಲಸೆ ಜಾಲದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆ ಕೂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬಾಂಗ್ಲಾದೇಶೀಯರನ್ನು ಕರೆತಂದ ಮೂವರ ವಿರುದ್ಧ ಕೇಸ್
ಮಂಗಳೂರಿಗೆ ಬಾಂಗ್ಲಾದೇಶೀಯರನ್ನು ಕೆಲಸಕ್ಕೆ ಕರೆತಂದ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳ ಮೂಲದ ಮೊಯ್ದಿನ್ ಇಸ್ಲಾಂ, ರಸುಲ್ ಇಸ್ಲಾಂ ಹಾಗೂ ದಿಲ್ವಾರ್ ಹುಸೇನ್ ವಿರುದ್ಧ ಮಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಗಳು ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಮಂಗಳೂರಿಗೆ ಕೆಲಸಕ್ಕಾಗಿ ಕರೆತರುತ್ತಿದ್ದರು. ಅವರೊಂದಿಗೆ ಕೆಲ ಬಾಂಗ್ಲಾದೇಶೀಯರನ್ನೂ ಕರೆತಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.


































