ಆ. 30ರವರೆಗೆ ಗೃಹಜ್ಯೋತಿ ಗ್ಯಾರಂಟಿ ಯೋಜನೆ ಮರು ಪರಿಷ್ಕರಣೆಗೆ ಅವಕಾಶ

ಫಲಾನುಭವಿಗಳು ಶಿಬಿರದಲ್ಲಿ ಭಾಗವಹಿಸುವಂತೆ ಮಾಳ ಅಜಿತ್‌ ಹೆಗ್ಡೆ ಮನವಿ

ಕಾರ್ಕಳ : ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಗ್ಯಾರಂಟಿ ಯೋಜನೆಯ ಮರು ಪರಿಷ್ಕರಣೆ ಕಾರ್ಯಕ್ರಮವನ್ನು ವಿದ್ಯುತ್ ಇಲಾಖೆಯ ವತಿಯಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಯೋಜನೆಯ ನೈಜ ಫಲಾನುಭವಿಗಳೆಲ್ಲರೂ ಈ ಶಿಬಿರಗಳಲ್ಲಿ ತಪ್ಪದೇ ಭಾಗವಹಿಸಿ ತಮ್ಮ ಅರ್ಹತೆಯನ್ನು ಮರು ಪರಿಷ್ಕರಿಸಿಕೊಳ್ಳುವ ಮೂಲಕ ಯೋಜನೆಯ ಪ್ರಯೋಜನವನ್ನು ಮುಂದುವರೆಸಿಕೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಾಳ ಅಜಿತ್ ಹೆಗ್ಡೆ ಅವರು ತಿಳಿಸಿದ್ದಾರೆ.

ಇಲಾಖೆಯ‌ ಸಿಬಂದ್ದಿ ಮನೆ ಮನೆಗೆ ತೆರಳಿ ಮರು ಪರಿಷ್ಕರಣಾ ಕಾರ್ಯವನ್ನು ನಡೆಸಲಿದ್ದು ಆಗಸ್ಟ್ 30ರ ವರೆಗೆ ಕಾಲಾವಕಾಶವನ್ನು ಕಲ್ಪಿಸಲಾಗಿದೆ. ಫಲಾನುಭವಿಗಳು ಇದರ ಪ್ರಯೋಜನ ಪಡೆಯುವಂತೆ ಅಜಿತ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳದ ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆ ಇರುವ ಕಾರಣ ಮರು ಪರಿಷ್ಕರಣೆಗೆ ಅಡಚಣೆಯಾಗುತ್ತಿದ್ದು ಅಂತಹ ಸ್ಥಳಗಳಲ್ಲಿ ಪಂಚಾಯತ್ ಕಟ್ಟಡಗಳಲ್ಲಿ ಇಲಾಖೆಯ ಸಿಬ್ಬಂದಿ ವರ್ಗ ಶಿಬಿರ ಆಯೋಜಿಸಿ ಮರುಪರಿಷ್ಕರಣೆಗೆ ಅವಕಾಶ ಮಾಡಿಕೊಡಲಾಗಿದೆ. ಗೃಹಜ್ಯೋತಿ ಯೋಜನೆಯು ಲಕ್ಷಾಂತರ ಕುಟುಂಬಗಳ ವಿದ್ಯುತ್ ವೆಚ್ಚದ ಭಾರವನ್ನು ಕಡಿಮೆ ಮಾಡಿದ್ದು, ರಾಜ್ಯ ಸರಕಾರದ ಜನಪರ ಯೋಜನೆಗಳಲ್ಲಿ ಒಂದಾಗಿದೆ. ಯೋಜನೆಯ ಪ್ರಯೋಜನ ಯಾವುದೇ ಅರ್ಹ ಫಲಾನುಭವಿಯಿಂದ ತಪ್ಪಿಹೋಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಮರುಪರಿಷ್ಕರಣೆ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು, ಗ್ಯಾರಂಟಿ ಸಮಿತಿ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು. ಜೊತೆಗೆ ಸಾರ್ವಜನಿಕರಿಗೆ ಶಿಬಿರದ ಕುರಿತು ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಅಜಿತ್ ಹೆಗ್ಡೆ ಅವರು ಮನವಿ ಮಾಡಿಕೊಂಡಿದ್ದಾರೆ.

























error: Content is protected !!
Scroll to Top