ಬೋಳಾಸ್‌ ಹಾಗೂ ವಿಕಾಸ ಸೇವಾ ಸಂಸ್ಥೆ ವತಿಯಿಂದ ಸಂಜೀವಿನಿ ಮಹಿಳೆಯರಿಗೆ ಹೊಲಿಗೆ ಯಂತ್ರ – ಚೆಂಡೆ ವಿತರಣೆ

ಕಾರ್ಕಳ : ಸ್ವರ್ಣ ಕಾರ್ಕಳ ಕಲ್ಪನೆಯಡಿ ಪ್ರವಾಸೋದ್ಯಮ, ಸಾಹಿತ್ಯ, ಸಾಂಸ್ಕೃತಿಕ ಹೀಗೆ ಎಲ್ಲ ಆಯಾಮಗಳಲ್ಲಿ ಕ್ಷೇತ್ರದ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯರು ಆರ್ಥಿಕವಾಗಿ ವೃದ್ಧಿಯಾಗಬೇಕು. ಕ್ಷೇತ್ರದ ಕೊನೆಯ ಮನೆಯೂ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕೆನ್ನುವುದೇ ನಮ್ಮ ಆಶಯ ಎಂದು ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
​ಮೇ 17ರಂದು ಶಾಸಕರ ವಿಕಾಸ ಕಚೇರಿಯಲ್ಲಿ ಬೋಳಾಸ್ ಆಗ್ರೋ ಪ್ರೈವೆಟ್ ಲಿಮಿಟೆಡ್ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಕಳ ಮತ್ತು ಹೆಬ್ರಿ ಸಂಜೀವಿನಿ ಒಕ್ಕೂಟದ ಮಹಿಳೆಯರ ತಂಡದ ಸ್ವಾವಲಂಬಿ ಬದುಕಿನ ಆಸರೆಗಾಗಿ ಉಚಿತ ಹೊಲಿಗೆ ಯಂತ್ರ ಹಾಗೂ ಸಂಜೀವಿನಿ ಬಳಗಕ್ಕೆ ಚೆಂಡೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಕಾಸ ಸಂಸ್ಥೆಯು ಕಳೆದ 20 ವರ್ಷಗಳಿಂದ ನೂರಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದೆ ಎಂದು ಸ್ಮರಿಸಿದ ಶಾಸಕರು, ರಾಜಕೀಯವನ್ನು ವರ್ಷವಿಡೀ ನಡೆಸಬಹುದು, ಆದರೆ ಅದರೊಂದಿಗೆ ಪರೋಕ್ಷವಾಗಿ ಸಾಮಾಜಿಕ ಚಟುವಟಿಕೆಗಳೂ ನಡೆಯಬೇಕು ಎಂದರು. ಯಾವುದೇ ಪ್ರಚಾರದ ಬೆಳಕಿಗೆ ಬಾರದೆ, ತಿಂಗಳಿಗೆ ಒಬ್ಬ ಅಶಕ್ತರಿಗೆ ಮನೆ ನಿರ್ಮಾಣ ಮಾಡಿಕೊಡುವುದು, ಅನಾರೋಗ್ಯ ಪೀಡಿತರಿಗೆ ನೆರವು ನೀಡುವುದು ಸೇರಿದಂತೆ ಹತ್ತು ಹಲವು ಮಾನವೀಯ ಕಾರ್ಯಗಳನ್ನು ಸಂಸ್ಥೆ ಮಾಡುತ್ತಾ ಬಂದಿದ್ದು, ಅದರ ಮುಂದುವರಿದ ಭಾಗವಾಗಿಯೇ ಇಂದು ರೂ. 5 ಲಕ್ಷ ಮೊತ್ತದ 25 ಉಚಿತ ಹೊಲಿಗೆ ಯಂತ್ರ ಹಾಗೂ ಚೆಂಡೆ ವಿತರಣೆ ಮಾಡಲಾಗಿದೆ ಎಂದರು.
ಉದ್ಯಮದ ಜೊತೆಗೆ ಸಮಾಜಕ್ಕೂ ಅಪಾರ ಕೊಡುಗೆ ನೀಡುತ್ತಿರುವ ಬೋಳಾಸ್ ಆಗ್ರೋ ಸಂಸ್ಥೆಯನ್ನು ಶ್ಲಾಘಿಸಿದ ಶಾಸಕರು, ಬೋಳಾಸ್ ಸಂಸ್ಥೆಯು ಸಮಾಜಕ್ಕೆ ಅಗತ್ಯ ಅನಿಸಿದ್ದನ್ನು ಕೊಡುವ ಕಲ್ಪವೃಕ್ಷದಂತಿದೆ. ನರ್ಸಿಂಗ್ ಕಾಲೇಜಿಗೆ 75 ಲಕ್ಷ ರೂ. ಧನಸಹಾಯ ಹಾಗೂ ಬೋಳದಲ್ಲಿ ಸಾರ್ವಜನಿಕ ಸೇವೆಗಾಗಿ ಅಂಬುಲೆನ್ಸ್ ನೀಡುವ ಮೂಲಕ ಸಂಸ್ಥೆಯು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದರು.

ಬೋಳಾಸ್ ಆಗ್ರೋಸ್‌ನ ಮ್ಯಾನೇಜಿಂಗ್‌ ಡೈರೆಕ್ಟರ್ ಬೋಳ ದಾಮೋದರ ಕಾಮತ್ ಮಾತನಾಡಿ, ನಮ್ಮ ಸಮಾಜ ಸೇವೆಯ ಪರಿಕಲ್ಪನೆಗೆ ಶಾಸಕ ಸುನಿಲ್ ಕುಮಾರ್ ಪ್ರೇರಣೆಯಾಗಿದ್ದಾರೆ. ಇಂತಹ ಜನಪರ ಶಾಸಕರನ್ನು ಪಡೆದಿರುವುದು ಕಾರ್ಕಳದ ಪುಣ್ಯ ಎಂದರು. ಮಹಿಳೆಯರು ತಾವು ತೊಡಗಿಸಿಕೊಂಡ ಉದ್ಯಮದಲ್ಲಿ ಉಳಿತಾಯ ಮಾಡುವ ರೂಢಿ ಬೆಳೆಸಿಕೊಳ್ಳಬೇಕು ಮತ್ತು ಆ ಮೂಲಕ ತಮ್ಮ ಜೊತೆಗೆ ಇತರರನ್ನೂ ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ 25 ಮಂದಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 25 ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಹಾಗೆಯೇ ಸಂಜೀವಿನಿ ಮಹಿಳಾ ತಂಡಕ್ಕೆ ಚೆಂಡೆಗಳನ್ನು ವಿತರಿಸಲಾಯಿತು. ಶಾಸಕ ವಿ. ಸುನಿಲ್ ಕುಮಾರ್ ಅವರು ಚೆಂಡೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
​ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ವ್ಯವಸ್ಥಾಪಕಿ ಉಮಾ, ಪ್ರಮುಖರಾದ ಮಹಾವೀರ ಹೆಗ್ಡೆ, ಮಾಲಿನಿ ರೈ, ಹಾಗೂ ರವೀಂದ್ರ ಮಡಿವಾಳ ಉಪಸ್ಥಿತರಿದ್ದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಜಾತ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರುಣಾಕರ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.







































































































error: Content is protected !!
Scroll to Top