ವಿಕಲಚೇತನ ಮಕ್ಕಳಿಗಾಗಿ ಉಡುಪಿಯಲ್ಲಿ ‘ಸಾಮರ್ಥ್ಯ ವನ ಪಾರ್ಕ್’ ನಿರ್ಮಾಣ

ಉಡುಪಿ : ವಿಕಲಚೇತನ ಮಕ್ಕಳ ಬೆಳವಣಿಗೆ, ಮನರಂಜನೆ ಹಾಗೂ ಅವರ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಉಡುಪಿ ನಗರದ ಬ್ರಹ್ಮಗಿರಿಯ ಬಾಲಭವನದಲ್ಲಿ “ವಿಶೇಷ ಮಕ್ಕಳಿಗಾಗಿ ಸಾಮರ್ಥ್ಯ ವನ ಪಾರ್ಕ್” ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮೇ 16ರಂದು ಶಿಲಾನ್ಯಾಸ ನೆರವೇರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿ. ಪಂ. ವತಿಯಿಂದ ಪಾರ್ಕ್ ನಿರ್ಮಿಸಲಾಗುತ್ತಿದ್ದು ವಿಕಲಚೇತನರಿಗೆ ಸಮಗ್ರ ಪುನರ್ವಸತಿ, ಚಿಕಿತ್ಸಕ ಸೇವೆಗಳು, ಉದ್ಯೋಗಾವಕಾಶ ಮತ್ತು ಸ್ವತಂತ್ರ ಜೀವನಕ್ಕೆ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ವಿಶಿಷ್ಟ ರೀತಿಯ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಇದರ ನಿರ್ವಹಣೆಗಾಗಿ ಜಿ. ಪಂ. ಸಿಇಓ ಅಧ್ಯಕ್ಷತೆಯಲ್ಲಿ ಇತರ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸಾಮರ್ಥ್ಯ ಟ್ರಸ್ಟ್ ರಚಿಸಲಾಗಿದೆ. ಒಂದೂವರೆ ಕೋಟಿ ರೂ. ಸರಕಾರಿ ಅನುದಾನ ಮತ್ತು ಇತರ ಸಂಘ- ಸಂಸ್ಥೆಗಳ ಸಹಕಾರ ಸೇರಿದಂತೆ ಒಟ್ಟು 4.90 ಕೋಟಿ ರೂ. ವೆಚ್ಚದಲ್ಲಿ ವಿಶಿಷ್ಟ ರೀತಿಯ ಪಾರ್ಕ್ ನಿರ್ಮಾಣವಾಗಲಿದೆ.

ಉಡುಪಿ ಜಿಲ್ಲೆಯಲ್ಲಿ 15 ವರ್ಷ ಒಳಗಿನ 1,228 ವಿಕಲ ಚೇತನ ಮಕ್ಕಳಿದ್ದು ಇವರು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಪಾರ್ಕ್ ಅನುಕೂಲವಾಗಲಿದೆ. ಇದಲ್ಲದೇ, ಇದರಲ್ಲಿ ಥೆರಪಿ ಸ್ವಿಂಗ್ಸ್ ಗಳು, ಬ್ಯಾಲನ್ಸ್ ಬೀಮ್ಸ್ ಗಳು, ಸಂಗೀತ ವಾದ್ಯಗಳು, ಸ್ಪರ್ಶ ಸಂವೇದನಾ ಮಾರ್ಗಗಳು, ಮರಳು ಮತ್ತು ನೀರಿನ ಆಟದ ವಲಯಗಳು ಇರಲಿದೆ. ಹೂಗಳ ಸುವಾಸನೆ ವೈವಿಧ್ಯ ಅರಿಯಲು ಸೆನ್ಸೇಶನ್ ಸೆನ್ಸರಿ ಪಾರ್ಕ್ ಕೂಡ ಬರಲಿದೆ.
ಪಾರ್ಕ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದೊಂದು ರಾಜ್ಯ, ದೇಶಕ್ಕೆ ಮಾದರಿ ಆಗಬಲ್ಲ ಪಾರ್ಕ್ ಆಗಲಿದೆ. ಇದನ್ನು ನಾಲ್ಕು ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಎರಡೇ ವರ್ಷದಲ್ಲಿ ಕಾಮಗಾರಿ ಪೂರ್ತಿಗೊಳಿಸಿ ನಮ್ಮ ಅವಧಿಯಲ್ಲೇ ಉದ್ಘಾಟನೆ ಮಾಡುವಂತಾಗಬೇಕು. ನಮ್ಮ ಇಲಾಖೆಯಿಂದಲೂ ಶೀಘ್ರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಾಲ್, ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ರುದ್ರಣ್ಣ, ಶ್ರೀಮತಿ ರತ್ನ, ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಜೈ ವಿಠ್ಠಲ್, ಹರಿಪ್ರಸಾದ ರಾಯ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.































































































error: Content is protected !!
Scroll to Top