ಸತತ ಪ್ರಯೋಗಗಳ ನಂತರ ಬ್ಲಾಸ್ಟ್‌ಗೆ ತಯಾರಿ – ಅಚ್ಚರಿ ಸತ್ಯ ಬಹಿರಂಗ
ದೆಹಲಿ : ಕಳೆದ ವರ್ಷ ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಬರೋಬ್ಬರಿ 7,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.
ಆರೋಪಪಟ್ಟಿಯಲ್ಲಿ 588 ಸಾಕ್ಷಿಗಳ ಹೇಳಿಕೆಗಳು, 395 ಕ್ಕೂ ಹೆಚ್ಚು ದಾಖಲೆಗಳು ಮತ್ತು 200 ಕ್ಕೂ ಹೆಚ್ಚು ವಶಪಡಿಸಿಕೊಂಡ ವಸ್ತುಗಳನ್ನ ಮಾಹಿತಿಯನ್ನು ದಾಖಲಿಸಲಾಗಿದೆ. ಒಟ್ಟು 11 ಜನರನ್ನ ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಎನ್‌ಐಎ ಶೋಧ ಕಾರ್ಯ ಮುಂದುವರಿಸಿದೆ ಎಂದು ತಿಳಿಸಿದೆ.
2025ರ ನವೆಂಬರ್ 10ರಂದು ಸಂಜೆ ಕೆಂಪುಕೋಟೆ ಬಳಿ ಹುಂಡೈ I20 ಕಾರು ಸ್ಫೋಟಗೊಂಡು 11 ಮಂದಿ ಮೃತಪಟ್ಟಿದ್ದರು. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಹಲವಾರು ವಾಹನಗಳು ಹಾನಿಗೊಳಗಾಗಿದ್ದವು. ಈ ಪ್ರಕರಣದ ತನಿಖೆ ಹೊಣೆ ಹೊತ್ತಿದ್ದ ಎನ್‌ಐಎ ಇಂದು ಪಟಿಯಾಲ ಹೌಸ್ ಕೋರ್ಟ್‌ನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಆರೋಪ ಪಟ್ಟಿ ಸಲ್ಲಿಕೆ ಮಾಡಿದೆ.

ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ, ಸ್ಫೋಟಕ ವಸ್ತುಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವಿಕೆ ಕಾಯ್ದೆಯ ಬಹು ನಿಬಂಧನೆಗಳ ಅಡಿಯಲ್ಲಿ ಆರೋಪಪಟ್ಟಿಯನ್ನ ಸಲ್ಲಿಕೆ ಮಾಡಲಾಗಿದೆ. ಬಂಧಿತ ಆರೋಪಿಗಳು ಅಲ್-ಖೈದಾದ ಜೊತೆ ಲಿಂಕ್ ಹೊಂದಿರುವ ಅನ್ಸಾರ್ ಘಜ್ವತ್-ಉಲ್-ಹಿಂದ್ (AGuH) ಭಯೋತ್ಪಾದಕ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದರು ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಮುಖ ಆರೋಪಿಗಳು
ಪ್ರಕರಣದ ಪ್ರಮುಖ ಆರೋಪಿ ಪುಲ್ವಾಮಾ ನಿವಾಸಿ ಮತ್ತು ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಮಾಜಿ ಸಹಾಯಕ ಪ್ರಾಧ್ಯಾಪಕ ಡಾ. ಉಮರ್ ಉನ್ ನಬಿ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ತನಿಖಾಧಿಕಾರಿಗಳು ಬೆರಳಚ್ಚು ಮೂಲಕ ಆರೋಪಿ ಗುರುತನ್ನ ಪತ್ತೆ ಮಾಡಿದ್ದರು. ಇತರ 9 ಆರೋಪಿಗಳಲ್ಲಿ ಅಮೀರ್ ರಶೀದ್ ಮಿರ್, ಜಾಸಿರ್ ಬಿಲಾಲ್ ವಾನಿ, ಡಾ. ಮುಜಾಮಿಲ್ ಶಕೀಲ್, ಡಾ. ಅದೀಲ್ ಅಹ್ಮದ್ ರಾಥರ್, ಡಾ. ಶಾಹೀನ್ ಸಯೀದ್, ಮುಫ್ತಿ ಇರ್ಫಾನ್ ಅಹ್ಮದ್ ವಾಗೆ, ಸೋಯಾಬ್, ಡಾ. ಬಿಲಾಲ್ ನಸೀರ್ ಮಲ್ಲಾ ಮತ್ತು ಯಾಸಿರ್ ಅಹ್ಮದ್ ದಾರ್ ಸೇರಿದ್ದಾರೆ.
ಎನ್‌ಐಎ ಪ್ರಕಾರ, ಬಂಧಿತ ಆರೋಪಿಗಳು ಅಲ್-ಖೈದಾ ಸಿದ್ಧಾಂತಗಳಿಂದ ಪ್ರೇರಿತವಾಗಿದ್ದರು. ಘಜ್ವತ್-ಉಲ್-ಹಿಂದ್ ಉಗ್ರಸಂಘಟನೆಯ ಜಾಲವನ್ನ ನಿರಂತರವಾಗಿ ಸಂಘಟಿಸುವಲ್ಲಿ ತೊಡಗಿಕೊಂಡಿದ್ದರು. 2022ರಲ್ಲಿ ಶ್ರೀನಗರದಲ್ಲಿ ರಹಸ್ಯ ಸಭೆ ನಡೆದಿದ್ದ ಭಯೋತ್ಪಾದಕರು ಟರ್ಕಿ ಮೂಲಕ ಅಫ್ಘಾನಿಸ್ತಾನಕ್ಕೆ ಪ್ರಯಾಣಿಸಲು ವಿಫಲಯತ್ನ ನಡೆಸಿದ್ದರು. ಭಾರತದಲ್ಲಿ ಶರಿಯಾ ಆಡಳಿತ ಸ್ಥಾಪಿಸುವ ಉದ್ದೇಶದಿಂದ ʻಆಪರೇಷನ್ ಹೆವೆನ್ಲಿ ಹಿಂದ್ʼ ಹೆಸರಿನಲ್ಲಿ ದುಷ್ಕೃತ್ಯಗಳ ಅಭಿಯಾನ ನಡೆಸಲು ಪ್ಲ್ಯಾನ್ ರೂಪಿಸಿದ್ದರು. ಅದಕ್ಕಾಗಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನ ಸಂಗ್ರಹಿಸಿದ್ದರು.
ಸತತ ಪ್ರಯೋಗಗಳ ನಂತರ ಬ್ಲಾಸ್ಟ್‌ಗೆ ತಯಾರಿ
ಇನ್ನೂ ತನಿಖೆ ವೇಳೆ ಅಚ್ಚರಿ ಸತ್ಯವೊಂದು ಬಹಿರಂಗವಾಗಿದೆ. ಆರೋಪಿ ಕಾರು ಬಾಂಬ್ ಸ್ಫೋಟಕ್ಕೆ ಟ್ರಯಾಸೆಟೋನ್ ಟ್ರೈಪೆರಾಕ್ಸೈಡ್ (TATP) ಬಳಸಲಾಗಿದೆ. ರಾಸಾಯನಿಕವನ್ನು ಸಂಗ್ರಹಿಸಿ ಸತತ ಪ್ರಯೋಗಗಳನ್ನು ನಡೆಸಿದ್ದಾರೆ, ಅದು ಸಕ್ಸಸ್ ಆದ ಬಳಿಕ ಸ್ಫೋಟಕ್ಕೆ ತಯಾರಿ ಮಾಡಿಕೊಳ್ಳಲಾಗಿತ್ತು. ಇದರೊಂದಿಗೆ ಡ್ರೋನ್, ರಾಕೆಟ್ ಆಧಾರಿತ ಸ್ಫೋಟಕ ಸಾಧನಗಳು ಇತರ ಐಇಡಿ ಮಾಡ್ಯೂಲ್‌ಗಳನ್ನು ಪರೀಕ್ಷಿಸಿದ್ದರು ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
























