ಮುಂಬೈಯಲ್ಲಿ ಶೆಟ್ಟಿ ಕ್ಯಾಟರರ್ಸ್ ಸ್ಥಾಪಿಸಿದ ಕುಕ್ಕುಂದೂರು ಶ್ಯಾಮ್ ಶೆಟ್ಟಿ

1977ರಲ್ಲಿ ತುಳು ಕನ್ನಡಿಗರು ಸ್ಥಾಪಿಸಿದ ಪ್ರಥಮ ಕ್ಯಾಟರಿಂಗ್‌ ಸಂಸ್ಥೆ ಶೆಟ್ಟಿ ಕ್ಯಾಟರರ್ಸ್.‌ ಮದುವೆ ಸಮಾರಂಭಗಳಲ್ಲಿ ಕ್ಯಾಟರಿಂಗ್‌ ವ್ಯವಸ್ಥೆ ಪರಿಚಯಿಸಿ ಖ್ಯಾತಿ ಪಡೆದ ಶೆಟ್ಟಿ ಕ್ಯಾಟರರ್ಸ್‌ ಸಂಸ್ಥಾಪಕರು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಶ್ಯಾಮ್‌ ಎನ್.‌ ಶೆಟ್ಟಿ. ಶುಚಿ, ರುಚಿಯಾದ ಊಟ, ಉಪಾಹಾರ, ಅಚ್ಚುಕಟ್ಟಾದ ಸೇವೆಯಿಂದಲೇ ಮುಂಬೈಯಲ್ಲಿ ಪ್ರಸಿದ್ಧಿ ಪಡೆದ ಶೆಟ್ಟಿ ಕ್ಯಾಟರರ್ಸ್‌ ಸಂಸ್ಥಾಪಕರು ಇಂದಿನ ನಮ್ಮೂರ ಸಾಧಕರು.

1950 ಮೇ 15ರಂದು (ಇಂದು ಅವರ ಹುಟ್ಟು ಹಬ್ಬ) ಸಾಂತೂರು ನಾರಾಯಣ ಶೆಟ್ಟಿ ಮತ್ತು ನಕ್ರೆ ಬಲಿಪಗುತ್ತು ಕೃಷ್ಣಿ ಶೆಟ್ಟಿ ದಂಪತಿಯ ಪುತ್ರನಾಗಿ ಜನಿಸಿದರು. ನಕ್ರೆಯ ಮಹಾಲಿಂಗೇಶ್ವರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಮುಂಬಯಿಯ ವಡಾಲದಲ್ಲಿ ಎನ್.ಕೆ.ಇ.ಎಸ್. ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು, ಖಾಲ್ಸಾ ಕಾಲೇಜ್‌ನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು.

1979ರಲ್ಲಿ ನಂದಳಿಕೆ ಐತ್ರಬೆಟ್ಟು ಶಾರದಾ ಶೆಟ್ಟಿಯವರೊಂದಿಗೆ ಶ್ಯಾಮ್‌ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಚೇತನ್, ರೋಹನ್ (USA) ಮತ್ತು ಶ್ವೇತಾ ಇವರ ಮಕ್ಕಳು. ಶ್ಯಾಮ್‌ ಶೆಟ್ಟಿ ಅವರ ಸಾಮಾಜಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವ ಶಾರದಾ ಶೆಟ್ಟಿಯವರೂ ಕೂಡ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಘಟಕ – ಸಮಾಜ ಸೇವಕ
ಶ್ಯಾಮ್‌ ಶೆಟ್ಟಿ ಓರ್ವ ಉತ್ತಮ ಸಂಘಟಕ. ಸಮಾಜ ಸೇವಕ. ಮುಂಬೈಯ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿಸಿಕೊಂಡಿದ್ದಾರೆ. ಎನ್.ಕೆ.ಇ.ಎಸ್. ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾಗಿ, ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮುಂಬಯಿ ಸಮಿತಿಯ ಅಧ್ಯಕ್ಷರಾಗಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಸಮಾಜ ಕಲ್ಯಾಣ ಸಮಿತಿಯ ಹಾಗೂ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಜೊತೆ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ನವಿಮುಂಬಯಿ ಹೊಟೇಲ್ ಓನರ್ಸ್ ಅಸೋಸಿಯೇಶನ್‌ ಅಧ್ಯಕ್ಷರಾಗಿ, ಮುಂಬಯಿ ಕ್ಯಾಟರಿಂಗ್ ಅಸೋಸಿಯೇಶನ್‌ನಲ್ಲಿ ವಿವಿಧ ಹುದ್ದೆ ಅಲಂಕರಿಸಿ ಸಮರ್ಥವಾಗಿ ನಿಭಾಯಿಸಿರುತ್ತಾರೆ. ಲಯನ್ಸ್ ಕ್ಲಬ್ ಸದಸ್ಯರಾಗಿ, ಭ್ರಾಮರಿ ದಶಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಹಾಗೂ ಮಹಾರಾಷ್ಟ್ರ ಹೊಟೇಲ್ ಫೆಡರೇಶನ್‌ನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ನಿರ್ಮಾಪಕ
ಶ್ಯಾಮ್‌ ಶೆಟ್ಟಿ ಅವರು ಕೇವಲ ಕೇಟರರ್ಸ್, ಟ್ರಾಸ್ಪೋರ್ಟ್, ಹೋಟೆಲ್ ಉದ್ಯಮ ಮಾತ್ರವಲ್ಲದೇ ಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡವರು. ಓರ್ವ ಕಲಾವಿದರಾಗಿ, ಕಲಾಪೋಷಕರಾಗಿದ್ದ ಅವರು 1989ರಲ್ಲಿ ‘ರೋಹನ್ ಫಿಲಂ ಕಂಬೈನ್ಸ್ʼ ಬ್ಯಾನರ್‌ನಡಿ ಅನಂತನಾಗ್, ಮಹಾಲಕ್ಷ್ಮೀ, ತಾರಾ ಮೈಸೂರು ಲೋಕೇಶ್‌, ನಂಜುಂಡಯ್ಯ, ಕೃಷ್ಣೆ ಗೌಡ, ಮುಖ್ಯಮಂತ್ರಿ ಚಂದ್ರು ಅಭಿನಯದ ʼಇವಳಂಥಾ ಹೆಂಡ್ತಿ’ ಹಾಗೂ ದೇವರಾಜ್‌, ತಾರಾ, ಜಗ್ಗೇಶ್‌, ವಿನಯಾ ಪ್ರಸಾದ್‌, ಸುಧೀರ್‌, ದೊಡ್ಡಣ್ಣ, ಅಭಿನಯದ ʼಪೊಲೀಸ್ ಫೈಲ್ʼ ಚಿತ್ರ ನಿರ್ಮಾಣದಲ್ಲಿ ಬಂಡವಾಳ ಹೂಡಿದ್ದರು.

ಪ್ರಶಸ್ತಿ
ಶ್ಯಾಮ್ ಶೆಟ್ಟಿ ಅವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗಾಗಿ ಹಲವಾರು ಪ್ರಶಸ್ತಿಗಳು ಅರಸಿ ಬಂದಿದೆ. ಹೊರನಾಡ ಕನ್ನಡಿಗರ ಸೇವೆಗಾಗಿ ಸುರ್ವೆ ಕಲ್ಬರಲ್ ಅಕಾಡೆಮಿ ಬೆಂಗಳೂರು 2016ರಲ್ಲಿ ರಾಷ್ಟ್ರೀಯ ವಿಭೂಷಣ ಪ್ರಶಸ್ತಿ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ಕರ್ನಾಟಕ ಸಮಾಜ ರತ್ನ ಪ್ರಶಸ್ತಿ, ಯಕ್ಷ ಕೌಮುದಿ ಪ್ರಶಸ್ತಿ ಹಾಗೂ ಯಕ್ಷ ರಕ್ಷಕ ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಸಣ್ಣ ಕ್ಯಾಟರಿಂಗ್‌ ಮೂಲಕ ಉದ್ಯಮ ಆರಂಭಿಸಿ ಕ್ಯಾಟರಿಂಗ್‌ ವ್ಯವಸ್ಥೆಗೆ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಶ್ಯಾಮ್‌ ಶೆಟ್ಟಿ ಅವರು ಇಂದು ಶ್ವೇತಾ ಪ್ಯಾಲೇಸ್, ಗ್ರಾಂಡ್‌ ಮೂಕಾಂಬಿಕಾ ಹೆಸರಲ್ಲಿ ಹೊಟೇಲ್‌, ಬಾರ್ ಹೊಂದಿದ್ದಾರೆ. ತನ್ನ ಶಿಸ್ತು, ಬದ್ಧತೆ, ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲಕ್ಕೇರಿದ್ದಾರೆ. ನಿತ್ಯ ಯೋಗ, ಧ್ಯಾನ ಮಾಡುವ ಶ್ಯಾಮ್‌ ಶೆಟ್ಟಿ ಅವರು ಇಳಿವಯಸ್ಸಿನಲ್ಲೂ ಅತ್ಯಂತ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ಅವರ ಆದರ್ಶ ವ್ಯಕ್ತಿತ್ವ ಮಾದರಿಯಾಗಿದೆ.

ಯುವ ಸಮುದಾಯ ಸ್ಪಷ್ಟ ಗುರಿ, ಸಾಹಸಿ ಪ್ರವೃತ್ತಿಯೊಂದಿಗೆ ಯೋಜನಾಬದ್ಧವಾಗಿ ಮುಂದುವರಿಯಬೇಕು. ಯಾವುದೇ ಕೆಲಸವಾಗಲಿ ಅದನ್ನು ನಿಷ್ಠೆಯಿಂದ ಶ್ರದ್ಧೆಯಿಂದ ಮಾಡಿದಲ್ಲಿ ತಮ್ಮ ಭವಿಷ್ಯ ಉಜ್ವಲವಾಗುವುದು. ಯಶಸ್ವಿಗೆ ಕಠಿಣ ಪರಿಶ್ರಮವೊಂದೇ ದಾರಿ ಎಂದು ಶ್ಯಾಮ್‌ ಎನ್.‌ ಶೆಟ್ಟಿ ಯುವಕರಿಗೆ ಕಿವಿಮಾತು ಹೇಳುತ್ತಾರೆ.













error: Content is protected !!
Scroll to Top