ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಸಚಿವರು
ಉಡುಪಿ : ಮುಂಗಾರು ಮಳೆಗಾಲದಲ್ಲಿ ಅತಿವೃಷ್ಠಿಯಿಂದಾಗಿ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇ 16ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಂಬರುವ ಮುಂಗಾರು ಮಳೆಗಾಲದಲ್ಲಿ ಹೆಚ್ಚು ಮಳೆಯಿಂದಾಗಿ ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಮಳೆಯಿಂದ ರಸ್ತೆಗಳು ಹಾಳಾಗಿ ಜನರ ಸುಗಮ ಸಂಚಾರಕ್ಕೆ ವ್ಯತ್ಯಯವಾಗದಂತೆ, ಕಾಲುಸಂಕಗಳ ಬಳಕೆಯ ಸಂದರ್ಭದಲ್ಲಿ ಜಾರಿಬಿದ್ದು, ಅನಾಹುತಗಳು ಆಗದಂತೆ ಕ್ರಮವಹಿಸಬೇಕು. ಈಗಿನಿಂದಲೇ ಜಂಗಲ್ ಕ್ಲಿಯರೆನ್ಸ್ ಮಾಡುವುದರೊಂದಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದರು.

ಶಿಷ್ಟಾಚಾರ ಪಾಲಿಸಿ
ಜಿಲ್ಲೆಯಲ್ಲಿ ಯಾವುದೇ ರೀತಿಯ ಸರಕಾರಿ ಸಭೆ, ಸಮಾರಂಭಗಳು ಆಯೋಜಿಸಿ, ಆಹ್ವಾನ ಪತ್ರಿಕೆ ಮುದ್ರಿಸುವಾಗ ಸರಕಾರ ಸೂಚಿಸಿರುವ ಹಾಗೆ ಶಿಷ್ಟಾಚಾರದ ಪ್ರಕಾರ ಜನಪ್ರತಿನಿಧಿಗಳ ಹೆಸರನ್ನು ನಮೂದಿಸಬೇಕು. ಕಾರ್ಯಕ್ರಮ ಆಯೋಜಿಸುವಾಗ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಈ ಬಗ್ಗೆ ಕಳೆದ ಸಭೆಯಲ್ಲಿ ಸೂಚಿಸಿದ್ದರೂ ಸಹ ಪಾಲನೆ ಆಗುತ್ತಿಲ್ಲ ಎಂಬ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು ಕಾರ್ಕಳ ತಹಶೀಲ್ದಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಶಿಷ್ಟಾಚಾರ ಉಲ್ಲಂಘಿಸಿದ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ಸೂಚಿಸಿದ ಅವರು ಮುಂಬರುವ ದಿನಗಳಲ್ಲಿ ಇದು ಪುನರಾವರ್ತಿತ ಆದಲ್ಲಿ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಶಾಲಾ-ಕಾಲೇಜುಗಳ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು 430 ಕೋಟಿ ರೂ. ವೆಚ್ಚದಲ್ಲಿ 186 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೆ ಈವರೆಗೂ ಸಹ 45 ಕಾಮಗಾರಿಗಳು ಪೂರ್ಣಪ್ರಮಾಣದಲ್ಲಿ ಆಗಿರುವುದಿಲ್ಲ. ಮಳೆಗಾಲ ಪ್ರಾರಂಭಕ್ಕೂ ಮುನ್ನ ಇವುಗಳನ್ನು ಪೂರ್ಣಗೊಳಿಸಬೇಕು ಎಂದ ಅವರು, ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಬಿಸಿಯೂಟದ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ತಜ್ಞ ವೈದ್ಯರ ಕೊರತೆಯಿದೆ. ಈ ಹಿಂದೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ 126 ಕ್ಕೂ ಹೆಚ್ಚು ಹೆರಿಗೆ ಆಗುತ್ತಿತ್ತು. ಆದರೆ ಈಗ ಹೆರಿಗೆ ಸಂಖ್ಯೆ 5-6 ಗೆ ಇಳಿದಿದೆ. ಸರಕಾರಿ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕ ಮಾಡಬೇಕು, ಇಲ್ಲವೇ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಆರೋಗ್ಯ ಸೇವೆಗಳನ್ನು ಒದಗಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸಚಿವರು ತಿಳಿಸಿದರು.
ಸ್ಕ್ಯಾನಿಂಗ್ ಸೇರಿದಂತೆ ಔಷಧಿಗಳಿಗಾಗಿ ಚೀಟಿ ಬರೆದುಕೊಟ್ಟು ಖಾಸಗಿಯಲ್ಲಿ ಪಡೆಯುವಂತೆ ಸೂಚಿಸಲಾಗುತ್ತಿದೆ. ಬಡಜನರು ಹೆಚ್ಚಾಗಿ ಸರಕಾರಿ ಆಸ್ಪತ್ರೆಗಳಿಗೆ ಬರುವುದರಿಂದ ಅವರಿಗೆ ಹಣದ ಕೊರತೆ ಇರುತ್ತದೆ. ಹೀಗಾಗಿ ಅವರ ಕುರಿತು ಕಾಳಜಿ ವಹಿಸಬೇಕೆಂದ ಸಚಿವರು ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ ನಿಗದಿಪಡಿಸಿದಂತೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಬೇಕೆಂದರು. (ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆ ಕುರಿತು ಇತ್ತೀಚೆಗೆ ನ್ಯೂಸ್ ಕಾರ್ಕಳ ವರದಿ ಪ್ರಸಾರ ಮಾಡಿತ್ತು)
ಮುಂಬರುವ ಮಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಅಭಾವ ಆಗದಂತೆ ಸಾಕಷ್ಟು ದಾಸ್ತಾನು ಇಟ್ಟುಕೊಂಡು ರೈತರ ಬೇಡಿಕೆಗೆ ಅನುಗುಣವಾಗಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದ ಅವರು, ಸರಕಾರ ರೈತರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪುಸ್ತಕದಲ್ಲಿ ಅಂಕಿ-ಸಂಖ್ಯೆಗಳನ್ನು ತೋರಿಸುವ ಬದಲು ರೈತರ ಮನೆ ಬಾಗಿಲಿಗೆ ಹೋಗಿ, ಸೌಕರ್ಯಗಳನ್ನು ನೀಡಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ತಾಕೀತು ಮಾಡಿದರು.
ಕಂದಾಯ ಇಲಾಖೆಯಲ್ಲಿ ಜಾಗ ಮಂಜೂರು ಮಾಡಿದರೂ ದಾಖಲಾತಿ ನೀಡಲು ಅನುಕೂಲವಾಗುವಂತೆ 1-5 ಡಾಟಾ ಎಂಟ್ರಿ ಮಾಡಲು 3,652 ಕಡತಗಳು ಬಾಕಿ ಇವೆ. ಇವುಗಳನ್ನು ಆದ್ಯತೆಯ ಮೇಲೆ ಮಾಡಬೇಕು. ಜಾಗ ಕೋರಿ 53-54 ಹಾಗೂ 94 ಸಿ ಗಳಲ್ಲಿ ಅತ್ಯಂತ ಬಡಜನರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಈವರೆಗೂ ಅವುಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳು ಪ್ರತೀ ವಾರ ತಹಶೀಲ್ದಾರರ ಸಭೆ ಕರೆದು ಹಕ್ಕು ಪತ್ರಗಳನ್ನು ನೀಡಲು ಮುಂದಾಗಬೇಕು. ಮುಂದಿನ ಬಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಾಗ 500 ಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಣೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ ಸಚಿವರು ಸರಕಾರದ ಪ್ರಧಾನ ಕಾರ್ಯದರ್ಶಿಗಳು 680 ಕ್ಕೂ ಹೆಚ್ಚು 54-55 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಇವು ಇ-ಪೋರ್ಟಲ್‌ನಲ್ಲಿ ದಾಖಲಿಸದೇ ಇರುವ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಿದ್ದರೂ ಸಹ ಯಾವುದೇ ರೀತಿಯ ಕ್ರಮವಾಗಿಲ್ಲ. ಈ ಬಗ್ಗೆ ಗಮನಹರಿಸಬೇಕು ಎಂದರು.
ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಭೂಮಿಯು ಅರಣ್ಯ ಅಥವಾ ಕಂದಾಯ ಇಲಾಖೆಗೆ ಸೇರಿದೆಯೇ ಎಂಬ ಬಗ್ಗೆ ವರ್ಗೀಕರಿಸಲು ಈಗಾಗಲೇ ಜಂಟಿ ಸರ್ವೆಯನ್ನು ಕೈಗೊಳ್ಳಬೇಕಿತ್ತು. ಸರ್ವೇ ಮಾಡುವುದರಿಂದ ಭೂಮಿಯು ಅರಣ್ಯ ಅಥವಾ ಕಂದಾಯ ಇಲಾಖೆಗೆ ಸೇರಿದೆ ಎಂದು ಗುರುತಿಸಲು ಅವಕಾಶವಿದೆ. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಕೆಲವು ಸರಕಾರಿ ಕಟ್ಟಡಗಳು, ಶಾಲೆಗಳು, ಆಸ್ಪತ್ರೆಗಳು ಸೇರಿವೆ. ಈ ಸರ್ವೇ ಕಾರ್ಯವನ್ನು ಕೈಗೊಳ್ಳಲು ಇರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ, ಕೂಡಲೇ ಸರ್ವೇ ಕಾರ್ಯವನ್ನು ಕೈಗೊಳ್ಳಬೇಕು ಎಂದರು.
ಸಾಮಾಜಿಕ ಭದ್ರತೆಯನ್ನು ಒದಗಿಸುವ ಪಿಂಚಣಿ ಸರ್ವೇ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಅರ್ಹ ಯಾವುದೇ ಒಬ್ಬ ಫಲಾನುಭವಿಗಳು ಕೈತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ತಪ್ಪು ದಾಖಲೆಗಳನ್ನು ಪಡೆದು ಲಾಭ ಪಡೆಯುತ್ತಿದ್ದರೆ ಅವರನ್ನು ಕೈಬಿಡಬೇಕು ಎಂದರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಡಾ. ಮಂಜುನಾಥ್ ಭಂಡಾರಿ, ಕಿಶೋರ್ ಕುಮಾರ್ ಪುತ್ತೂರು, ಶಾಸಕರಾದ ವಿ. ಸುನಿಲ್ ಕುಮಾರ್, ಯಶ್‌ಪಾಲ್ ಎ. ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಡಿ.ಎಫ್.ಓ ರುಥ್ರೇನ್ ಪಿ., ವೈಲ್ಡ್ಲೈಫ್ ಡಿ.ಎಫ್.ಓ. ಶಿವರಾಮ್ ಎಂ. ಬಾಬು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



























