ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಧಿನಿಯಮ – 2017

ಕರ್ನಾಟಕ ರಾಜ್ಯದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ಈ ಉದ್ದೇಶದಿಂದ ಸುರಕ್ಷಿತ ರಸ್ತೆಗಳ ನಿರ್ಮಾಣ ಮತ್ತು ವಾಹನಗಳ ಎಂಜಿನಿಯರಿಂಗ್ ಜಾರಿ ಮತ್ತು ಶಿಕ್ಷಣ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಹಾಗೂ ರಸ್ತೆ ಸುರಕ್ಷತಾ ನಿಧಿಯನ್ನು ಸ್ಥಾಪಿಸುವುದಕ್ಕಾಗಿ ನಮ್ಮ ರಾಜ್ಯದಲ್ಲಿ “ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಧಿನಿಯಮ, 2017” ಎಂಬ ಕಾನೂನು ಜ್ಯಾರಿಯಲ್ಲಿರುತ್ತದೆ.

ಈ ಅಧಿನಿಯಮದ ಪ್ರಕಾರ ನಮ್ಮ ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಮತ್ತು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗಳನ್ನು ರಚಿಸಲಾಗಿದ್ದು ಇಂತಹ ಪ್ರಾಧಿಕಾರ ಮತ್ತು ಸಮಿತಿಗಳ ಮೂಲಕ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು, ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಮತ್ತು ಅಪಘಾತಗಳನ್ನು ನಿಯಂತ್ರಿಸಲು ರಸ್ತೆ ಸುರಕ್ಷತಾ ನಿಧಿಯನ್ನು ಸ್ಥಾಪಿಸಲಾಗಿದೆ. ಮಾತ್ರವಲ್ಲದೇ, ನಮ್ಮ ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪರಿಷತ್ತು ಎಂಬ ಪರಿಷತ್ತನ್ನು ರಚಿಸಲಾಗಿದ್ದು ಈ ರಸ್ತೆ ಸುರಕ್ಷತಾ ಪರಿಷತ್‌ನ ಅಧ್ಯಕ್ಷರಾಗಿ ರಾಜ್ಯದ ಸಾರಿಗೆ ಸಚಿವರು, ಉಪಾಧ್ಯಕ್ಷರಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಮತ್ತು ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ, ಬಂದರುಗಳು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕ, ಇವರುಗಳು ಪದನಿಮಿತ್ತ ಸದಸ್ಯರುಗಳಾಗಿ, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ರಸ್ತೆ ಸುರಕ್ಷತಾ ಆಯುಕ್ತರು ಮತ್ತು ರಾಜ್ಯ ಸರ್ಕಾರವು ನಾಮನಿರ್ದೇಶಿಸಿದ ರಸ್ತೆ ಸುರಕ್ಷತಾ ಕ್ಷೇತ್ರದಲ್ಲಿ ತಜ್ಞರಾಗಿರುವ ಇಬ್ಬರು ವ್ಯಕ್ತಿಗಳು ಸದಸ್ಯರುಗಳಾಗಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಪರ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವು ಪರಿಣಾಮಕಾರಿ ರಸ್ತೆ ಸುರಕ್ಷತಾ ನೀತಿಗಳನ್ನು ರೂಪಿಸುವ, ಹಾಗೂ ಕಾಲಕಾಲಕ್ಕೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಪರಿಯೋಜನೆಗಳನ್ನು, ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸುವ, ರಸ್ತೆ ಸುರಕ್ಷತಾ ಕ್ರಮಗಳನ್ನು ಮತ್ತು ಕಾರ್ಯವಿಧಾನಗಳನ್ನು ನಿಯಮಿಸಿ ಜಾರಿಗೊಳಿಸುವ, ಸಾಮಾನ್ಯವಾಗಿ ರಸ್ತೆಗಳ ಸೂಕ್ತ ಮತ್ತು ಸುರಕ್ಷಿತ ಬಳಕೆಗೆ ಸಂಬಂಧಿಸಿದಂತೆ ವಾಹನ ಚಾಲಕರು, ಮೋಟಾರು ಸವಾರರು ಮತ್ತು ಇತರ ಸಾರ್ವಜನಿಕರನ್ನು ಸುಶಿಕ್ಷತರನ್ನಾಗಿ ಮಾಡುವ ಹಾಗೂ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ, ರಸ್ತೆ ಸುರಕ್ಷತೆ ಕುರಿತು ಸಂಶೋಧನೆ ನಡೆಸುವ, ಮತ್ತು ಯೋಜನೆ, ನೀತಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಅಂಕಿ-ಅಂಶಗಳ ಮೌಲ್ಯಮಾಪನ ಮಾಡುವ, ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕರ್ತವ್ಯಗಳನ್ನು ನಿಭಾಯಿಸುತ್ತಿರುವ ಎಲ್ಲಾ ಏಜನ್ಸಿಗಳ ಮತ್ತು ಸರ್ಕಾರಿ ಇಲಾಖೆಗಳ ಪ್ರಕಾರ್ಯಗಳನ್ನು ಸಮನ್ವಯಗೊಳಿಸುವ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿರ್ವಹಣೆ ಕುರಿತಂತೆ ಹಿತಾಸಕ್ತಿಯುಳ್ಳ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಏಜನ್ಸಿಗಳೊಂದಿಗೆ ಸಂಪರ್ಕ ಸಾಧಿಸುವ, ಅಪಘಾತ ನಡೆಯುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ (ಕೆಎಸ್‌ಆರ್‌ಎಸ್‌ಎ) ಮುಂದಾಳತ್ವದಲ್ಲಿ ಸ್ವ-ಸಹಾಯ ಗುಂಪುಗಳನ್ನು ರೂಪಿಸುವ, ನಿಧಿ ನಿರ್ವಹಣೆ, ರಸ್ತೆ ಸುರಕ್ಷತಾ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಲಕರಣೆಗಳು ಮತ್ತು ಸಾಧನಗಳ ಖರೀದಿಗಾಗಿ ಮತ್ತು ಅಳವಡಿಕೆಗಾಗಿ ಮತ್ತು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳನ್ನು ಕುರಿತ ಅಧ್ಯಯನಗಳು, ಪರಿಯೋಜನೆಗಳು ಮತ್ತು ಸಂಶೋಧನೆಯನ್ನು ನಡೆಸುವುದಕ್ಕಾಗಿ, ದೈಹಿಕ ಅಥವಾ ಮಾನಸಿಕ ಆಘಾತ-ಕಾಳಜಿ ಕಾರ್ಯಕ್ರಮಗಳಿಗೆ ಅಥವಾ ಕಾರ್ಯಚಟುವಟಿಕೆಗಳಿಗೆ ಅಗತ್ಯವಿರುವ ವೆಚ್ಚವನ್ನು ಮತ್ತು ಪ್ರಾಧಿಕಾರದ ಆಡಳಿತಾತ್ಮಕ ವೆಚ್ಚವನ್ನು ಮಂಜೂರು ಮಾಡುವ, ಪೊಲೀಸ್ ಇಲಾಖೆಯ ಮುಖಾಂತರ ಸಮಗ್ರ ರಸ್ತೆ ಅಪಘಾತ ದತ್ತಾಂಶಾಧಾರಿತ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಜವಬ್ದಾರಿ ಮತ್ತು ಅಧಿಕಾರವನ್ನು ಹೊಂದಿರುತ್ತದೆ. ಪ್ರಾಧಿಕಾರವು ಹೊಂದಿರುವ ‘ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿ’ಯನ್ನು ರಸ್ತೆ ಸುರಕ್ಷತಾ ಕಾರ್ಯಕ್ರಮಗಳಿಗೆ, ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಲಕರಣೆಗಳ ಖರೀದಿಗೆ, ಪರಿಯೋಜನೆಗಳು, ತರಬೇತಿಗಳನ್ನು ಕುರಿತ ಅನುಮೋದಿತ ಅಧ್ಯಯನಗಳಿಗೆ ನಿಧಿ ಒದಗಿಸುವುದಕ್ಕಾಗಿ, ದೈಹಿಕ ಅಥವಾ ಮಾನಸಿಕ ಆಘಾತ-ಕಾಳಜಿ ಕಾರ್ಯಕ್ರಮಗಳು ಮತ್ತು ತತ್ಸಂಬಂಧಿ ಕಾರ್ಯಚಟುವಟಿಕೆಗಳಿಗೆ ಮತ್ತು ಪ್ರಾಧಿಕಾರದ ಆಡಳಿತಾತ್ಮಕ ವೆಚ್ಚಗಳು ಇತ್ಯಾದಿಗಳಿಗೆ ವಿನಿಯೋಗಿಸಲಾಗುತ್ತದೆ.































































































error: Content is protected !!
Scroll to Top