ಕಾರ್ಕಳ – ಹೆಬ್ರಿಯಲ್ಲಿ ಕಳೆದ 4 ತಿಂಗಳಲ್ಲಿ 25 ಮಂದಿ ಮೃತ್ಯು

ಕಾರ್ಕಳ : ಕಾರ್ಕಳ – ಹೆಬ್ರಿ ತಾಲೂಕಿನ ಬಹುತೇಕ ರಸ್ತೆಗಳು‌ ಅಭಿವೃದ್ಧಿಗೊಂಡು ಅಗಲೀಕರಣವಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತಿದ್ದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ. ಚಾಲಕರ ನಿರ್ಲಕ್ಷ್ಯ, ಬೇಜವಾಬ್ದಾರಿ, ಪಾನಮತ್ತರಾಗಿ ಚಾಲನೆ, ನಿದ್ದೆ ಮಂಪರು, ಸಂಚಾರ ನಿಯಮಗಳ ಉಲ್ಲಂಘನೆ, ಅತಿಯಾದ ವೇಗ, ಓವರ್‌ ಟೇಕ್‌ ಮಾಡುವ ಧಾವಂತ, ಮೊಬೈಲ್‌ ಬಳಕೆ ಪರಿಣಾಮ ಅಪಘಾತಗಳು ಸಂಭವಿಸುತ್ತಿದ್ದು, ಮೃತ್ಯುವಿಗೆ ದಾರಿಯಾಗುತ್ತಿದೆ.

ಕಳೆದ ನಾಲ್ಕು ತಿಂಗಳಲ್ಲಿ 25 ಮೃತ್ಯು
2026ರ ಜನವರಿಯಿಂದ ಮೇ ವರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 21 ಅಪಘಾತವಾಗಿದ್ದು ಇದರಲ್ಲಿ 8 ಮಂದಿ ಬಲಿಯಾಗಿದ್ದಾರೆ, 47 ಮಂದಿ ಗಾಯಗೊಂಡಿದ್ದಾರೆ. ನಗರ ಠಾಣಾ ವ್ಯಾಪ್ತಿಯಲ್ಲಿ 23 ಅಪಘಾತವಾಗಿದ್ದು, 27 ಮಂದಿಗೆ ಗಾಯ ಹಾಗೂ 15 ಮಂದಿ ಸಾವೀಗೀಡಾಗಿದ್ದಾರೆ. ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ 3 ಅಪಘಾತವಾಗಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಹೆಬ್ರಿ ಪೊಲೀಸ್‌ ಠಾಣಾ 13 ಅಪಘಾತ ಸಂಭವಿಸಿದ್ದು, 17 ಮಂದಿ ಗಾಯಗೊಂಡಿದ್ದು, 2 ಮಂದಿ ಸಾವನಪ್ಪಿದ್ದಾರೆ.

ಅನೇಕ ಬಾರಿ ವಾಹನ ಚಾಲಕರ, ದ್ವಿಚಕ್ರ ಸವಾರರ ನಿರ್ಲಕ್ಷ್ಯತನ ಇನ್ಯಾರಾದೋ ಪ್ರಾಣಕ್ಕೆ ಎರವಾಗುತ್ತಿದೆ. ಅದೆಷ್ಟೋ ಬಾರಿ ಅಮಾಯಕ ಪಾದಚಾರಿಗಳು ವಾಹನ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಮರಳು, ಕಲ್ಲು, ಇನ್ಯಾವುದೋ ಸಾಮಾಗ್ರಿ ಸಾಗಾಟ ಮಾಡುವ ಲಾರಿಗಳು, ಟಿಪ್ಪರ್‌ಗಳು ಶರವೇಗದಲ್ಲಿ ಸಾಗುತ್ತಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ.

ಬಸ್ ವೇಗಕ್ಕೆ ಅಮಾಯಕರ ದುರ್ಮರಣ
ಇನ್ನು ಬಸ್‌ ಡ್ರೈವರ್‌ಗಳ ಟೈಮಿಂಗ್ಸ್‌ ಹುಚ್ಚಾಟ, ಅತಿರೇಕದಿಂದ ಕೂಡಿದ ಅವಿವೇವಿಕತನ ಚಾಲನೆಗೆ ಅಮಾಯಕರು ಬಲಿಯಾಗುತ್ತಿರುವುದು ದುರಂತ. ಜ. 23ರಂದು ಗುಲ್ಬರ್ಗಾದ ಒಂದೇ ಕುಟುಂಬದ 12 ಮಂದಿ ಹಾಗೂ ಡ್ರೈವರ್‌ ಸೇರಿದಂತೆ 13 ಮಂದಿ ತೂಫಾನ್‌ ವಾಹನದಲ್ಲಿ ದೇವರ ದರ್ಶನಕ್ಕೆ ಬಂದಿದ್ದು, ಧರ್ಮಸ್ಥಳಕ್ಕೆ ಹೋಗುವಾಗ ಮಿಯ್ಯಾರಿನಲ್ಲಿ ಧರ್ಮಸ್ಥಳದಿಂದ ಕಾರ್ಕಳಕ್ಕೆ ಬರುತ್ತಿದ್ದ ಪ್ರೈಸ್‌ ದಿ ಲಾರ್ಡ್‌ (ವರುಣ್) ಬಸ್‌ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಾಲ್ವರು ಮೃತಪಟ್ಟು, 9 ಮಂದಿ ಗಾಯಗೊಂಡಿದ್ದರು.

ವಿದ್ಯಾರ್ಥಿಗಳ ಬೇಜವಾಬ್ದಾರಿ
ಇನ್ನು ಕೆಲ ವಿದ್ಯಾರ್ಥಿಗಳು, ಯುವಕರ ಮೋಜು ಮಸ್ತಿ, ಮಿತಿ ಇಲ್ಲದ ವೇಗಕ್ಕೆ, ನಿರ್ಲಕ್ಷ್ಯತನಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ದುರ್ದೈವ. ಇತ್ತೀಚೆಗೆ ನಿಟ್ಟೆಯಲ್ಲಿ ವಿದ್ಯಾರ್ಥಿಗಳ ಅಜಾಗರೂಕತೆ, ಬೇಜವಾಬ್ದಾರಿತನಕ್ಕೆ ತಂದೆ – ಮಗಳು ಸಾವನ್ನಪ್ಪಿದ್ದಾರೆ. ಎ. 24ರಂದು ಬಜಕಳ ನಿವಾಸಿ ನವೀನ್‌ಚಂದ್ರ ಅವರು ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಮಗಳು ಪ್ರೇರಣ ಮೂಲ್ಯಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾರ್ಕಳದಿಂದ ನಿಟ್ಟೆಯತ್ತ ವಿದ್ಯಾರ್ಥಿಗಳು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ ಎಸೆಯಲ್ಪಟ್ಟಿದ್ದು ನವೀನ್‌ಚಂದ್ರ ಹಾಗೂ ಪ್ರೇರಣ ಇಬ್ಬರಿಗೂ ಗಂಭೀರ ಸ್ವರೂಪದ ಗಾಯವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನವೀನ್‌ಚಂದ್ರ ಅವರು ಅಂದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು. ಮೂರು ದಿನಗಳ ಬಳಿಕ ಐಸಿಯುವಿನಲ್ಲಿದ್ದ ಪ್ರೇರಣಾ ಮೃತಪಟ್ಟಿದ್ದರು.

ಸುರಕ್ಷತಾ ಕ್ರಮ
ಸರಕಾರ ಪ್ರತಿ ವಾಹನಕ್ಕೆ ಸ್ಪೀಡ್ ಗವರ್ನರ್ ಅಳವಡಿಕೆ ನಿಯಮ ಜಾರಿಗೊಳಿಸುವುದು ಇಂದಿನ ಅವಶ್ಯ. ರಸ್ತೆ ಅಪಘಾತಕ್ಕೆ ಕಾರಣೀಕರ್ತರ ವಿರುದ್ಧ ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಕಠಿಣ ಕ್ರಮ ಕೈಗೊಂಡಲ್ಲಿ ಬೇಜವಾಬ್ದಾರಿತನದ ಚಾಲನೆಗೆ ಕಡಿವಾಣ ಹಾಕಬಹುದು.

ವರದಿ : ನಳಿನಿ ಎಸ್‌. ಸುವರ್ಣ





























































































error: Content is protected !!
Scroll to Top