ಕಾರ್ಕಳ : ರಸ್ತೆ ಬದಿ ಸ್ವಚ್ಛಗೊಳಿಸುವಾಗ ಕಸದ ರಾಶಿಯಲ್ಲಿ ದೊರೆತ ಮಾಹಿತಿ ಆಧಾರದ ಮೇರೆಗೆ ವ್ಯಕ್ತಿಯೋರ್ವರಿಗೆ ಮರ್ಣೆ ಗ್ರಾ. ಪಂ. ದಂಡ ವಿಧಿಸಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ಮೇ 12ರಂದು ಅಜೆಕಾರು ಪೇಟೆಯಿಂದ ಎಣ್ಣೆಹೊಳೆಯವರೆಗೆ ಸ್ವಚ್ಚತಾ ಕಾರ್ಯ ನಡೆಯಿತು. ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸುರೇಂದ್ರನಾಥ್ ಎಂ.ವಿ. ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಲಯನ್ಸ್ ಕ್ಲಬ್ ಅಜೆಕಾರು, ಶೌರ್ಯ ವಿಪತ್ತು ಘಟಕ ಅಜೆಕಾರು ವಲಯ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಜನನಿ ಸಂಜೀವಿನಿ ಒಕ್ಕೂಟ ಅಜೆಕಾರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಎಸೆದಿದ್ದ ಕಸದಲ್ಲಿದ್ದ ವೋಚೆರ್ ಮೂಲಕ ಮಾಹಿತಿ ಸಂಗ್ರಹಿಸಿ ವ್ಯಕ್ತಿಗೆ ಒಂದು ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ಗ್ರಾಮದ ಸ್ವಚ್ಚತೆ ಪ್ರತಿಯೊಬ್ಬ ಗ್ರಾಮಸ್ಥನ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಪಂಚಾಯತ್ ವತಿಯಿಂದ ನಿರಂತರವಾಗಿ ನಡೆಯುತ್ತಿದೆ. ಸಾರ್ವಜನಿಕವಾಗಿ ಕಸ ಹಾಕುವುದು ಕಂಡುಬಂದಲ್ಲಿ ಗ್ರಾಮ ಪಂಚಾಯತ್‌ನಿಂದ 5000 ರೂ. ದಂಡವಿಧಿಸುವ ಕ್ರಮವನ್ನು ಕೈಗೊಳ್ಳಲಾಗಿದೆ.
–ಅಂಕಿತಾ ನಾಯಕ್, ಪಂಚಾಯತ್ ಅಭಿವೃದ್ದಿ ಅಧಿಕಾರಿ







































