ಮೋದಿ ಮಾಡಿದ ತಪ್ಪಿಗೆ ಜನರೇಕೆ ಶಿಕ್ಷೆ ಅನುಭವಿಸಬೇಕು ?

ಸರ್ಕಾರ ನಡೆಸುವವರು ವಿರೋಧ ಪಕ್ಷದ ನಾಯಕರ ಮಾತಿಗೂ ಮನ್ನಣೆ ನೀಡಬೇಕು – ಶುಭದ ರಾವ್

ಕಾರ್ಕಳ : ಮಧ್ಯಪ್ರಾಚ್ಯ ಯುದ್ದದ ಕಾರಣದಿಂದಾಗಿ ದೇಶದ ಉತ್ಪಾದನಾ ಕ್ಷೇತ್ರದಲ್ಲಿ ಮತ್ತು ಜನಜೀವನದ ಮೇಲೆ ಮುಂದೆ ಭಾರಿ ದುಷ್ಪರಿಣಾಮಗಳು ಬೀಳಲಿವೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಯುದ್ಧದ ಆರಂಭದ ದಿನಗಳಿಂದಲೂ ಸರ್ಕಾರವನ್ನು ಎಚ್ಚರಿಸುತ್ತಾ ಬಂದಿದ್ದಾರೆ. ಆದರೆ, ಆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಮಾತನ್ನು ಕೇಳದೆ ಪ್ರಧಾನಿ ಮೋದಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸಿದ ಕಾರಣದಿಂದಾಗಿ ದೇಶಕ್ಕೆ ಇಂದು ಆರ್ಥಿಕ ದಿಗ್ಭಂದನದಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಹೇಳಿದ್ದಾರೆ.

ಅಂದು ರಾಹುಲ್ ಗಾಂಧಿ ಮಾತಿಗೆ ಅಪಹಾಸ್ಯ ಮಾಡಿದ ಮೋದಿಯವರು ಇಂದು ದೇಶದ ಜನರಿಗೆ ಚಿನ್ನ ಖರೀದಿಸಬೇಡಿ, ಕಾರಲ್ಲಿ ಓಡಾಟ ಮಾಡಬೇಡಿ, ವಿದೇಶ ಪ್ರಯಾಣ ಮಾಡಬೇಡಿ, ರಸಗೊಬ್ಬರ ಖರೀದಿ ಮಾಡಬೇಡಿ, ಮನೆಯಿಂದ ಹೊರಗೆ ಬರಬೇಡಿ ಎನ್ನುವ ಬಿಟ್ಟಿ ಸಲಹೆಯನ್ನು ನೀಡಿದ್ದಾರೆ. ಪ್ರಧಾನಿ ಮೋದಿಯವರು ಮಾಡಿದ ತಪ್ಪಿಗೆ ದೇಶದ ಜನರು ಯಾಕೆ ಶಿಕ್ಷೆ ಅನುಭವಿಸಬೇಕು ಶುಭದ ರಾವ್ ಖಾರವಾಗಿ ಪ್ರಶ್ನಿಸಿದ್ದಾರೆ.

ಸರ್ಕಾರ ನಡೆಸುವವರು ವಿರೋಧ ಪಕ್ಷಗಳ ನಾಯಕರ ಮಾತಿಗೂ ಮನ್ನಣೆ ನೀಡಬೇಕು. ವಿರೋಧ ಪಕ್ಷದ ನಾಯಕರ ಮಾತಿನಲ್ಲಿ ದೇಶದ ಜನರ ಹಿತ ಅಡಗಿದೆ ಎನ್ನುವುದನ್ನು ಈಗಲಾದರೂ ಪ್ರಧಾನಿ ಮೋದಿಯವರು ಅರ್ಥ ಮಾಡಿಕೊಳ್ಳಲಿ. ದೇಶಕ್ಕೆ ಸಂಕಟ ಬಂದಾಗ ಆಡಳಿತ ಪಕ್ಷಗಳು ಮತ್ತು ವಿರೋಧ ಪಕ್ಷಗಳು ಜೊತೆಯಾಗಿ ದೇಶದ ಜನರಿಗಾಗಿ ಕೆಲಸ ಮಾಡುವುದು ಇದು ಪ್ರಜಾಪ್ರಭುತ್ವದ ಪ್ರಧಾನ ಆಶಯವಾಗಿದೆ. ಆದರೆ, ಸರ್ವಾಧಿಕಾರಿ ಧೋರಣೆಯ ನರೇಂದ್ರ ಮೋದಿಯವರು ಇಂದು ಯಾರ ಮಾತನ್ನು ಕೇಳದೆ ದೇಶವನ್ನು ಆರ್ಥಿಕ ದಿಗ್ಬಂಧನಕ್ಕೆ ಕೊಂಡೊಯ್ದಿದ್ದಾರೆ. ದೇಶಕ್ಕೆ ಇಂತಾ ಪರಿಸ್ಥಿತಿಯನ್ನು ತಂದೊದಗಿಸಿದ ಪ್ರಧಾನಿ ಮೋದಿ ದೇಶದ ಜನರ ಬಳಿ ಕ್ಷಮೆ ಯಾಚಿಸಬೇಕು ಎಂದು ಶುಭದ ರಾವ್‌ ಹೇಳಿದ್ದಾರೆ.

ದೇಶದ ಪ್ರಜೆಗಳು ಯಾವ ರೀತಿಯ ಬಟ್ಟೆಯನ್ನು ತೊಡಬೇಕು, ಯಾವ ರೀತಿಯ ಕೇಶವಿನ್ಯಾಸ ಮಾಡಿಸಿಕೊಳ್ಳಬೇಕು, ಯಾವ ರೀತಿಯ ಆಭರಣಗಳನ್ನ ತೊಡಬೇಕು, ಯಾವ ರೀತಿಯ ವಾಹನಗಳಲ್ಲಿ ಓಡಾಟ ಮಾಡಬೇಕು, ಯಾವ ದೇಶಗಳಿಗೆ ಪ್ರವಾಸ ಮಾಡಬೇಕು ಎಂದು ಆಡಳಿತ ನಡೆಸುವವರೇ ನಿರ್ಧಾರ ಮಾಡುವುದು ಇದು ಉತ್ತರ ಕೋರಿಯಾದ ಸರ್ವಾಧಿಕಾರಿ ಶೈಲಿಯಾಗಿದೆ. ಪ್ರಧಾನಿ ಮೋದಿಯವರ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶಕ್ಕೆ ಇಂತಾ ಪರಿಸ್ಥಿತಿ ಎದುರಾಗಿದೆ. ಪ್ರಧಾನಿಯವರು ಇನ್ನಾದರೂ ತಜ್ಞರ ಅಭಿಪ್ರಾಯವನ್ನು ಪಡೆದು ದೇಶದ ಜನರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲಿ ಎಂದು ಶುಭದ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.





























































































error: Content is protected !!
Scroll to Top