ಭಾರಿ ಗಾಳಿ ಮಳೆಗೆ ಹೆಬ್ರಿ ತಾಲೂಕು ಆಡಳಿತ ಕಚೇರಿಗೆ ಹಾನಿ – ಧರೆಗುರುಳಿದ ವಿದ್ಯುತ್‌ ಕಂಬಗಳು

ಕಾರ್ಕಳ : ಮಂಗಳವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಕಾರ್ಕಳ – ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರಿ ಗಾಳಿ ಮಳೆಯಾಗಿದೆ. ಪರಿಣಾಮವಾಗಿ ಹೆಬ್ರಿ ತಾಲೂಕು ಕಚೇರಿ ಸೇರಿದಂತೆ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಹಲವೆಡೆ ವಿದ್ಯುತ್‌ ಕಂಬಗಳು ಮುರಿದು ಬಿದ್ದಿದೆ.

ಕಾರ್ಕಳ ತಾಲೂಕಿನ ಅಜೆಕಾರು, ಶಿರ್ಲಾಲು, ಕೆರ್ವಾಶೆ, ಮಾಳ, ನೂರಲ್‌ ಬೆಟ್ಟು, ಹೆರ್ಮುಂಡೆ, ಜಾರ್ಕಳ ಮುಂಡ್ಲಿ, ಕೆರ್ವಾಶೆ, ಬಜಗೋಳಿ, ತೆಳ್ಳಾರು ಕಾರ್ಕಳ ನಗರ ಭಾಗದಲ್ಲಿ ಗುಡುಗು-ಮಿಂಚಿನೊಂದಿಗೆ ಭಾರಿ ಮಳೆಯಾಗಿದೆ. ಅಜೆಕಾರು ಗುಡ್ಡೆಯಂಗಡಿಯಲ್ಲಿ ಬಸ್‌ ನಿಲ್ದಾಣದ ಮೇಲ್ಛಾವಣಿಯ ಹಂಚುಗಳು ಹಾರಿ ಹೋಗಿದೆ. ಹಲವೆಡೆ ಮರಗಳು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೂ ಸಮಸ್ಯೆಯಾಗಿದೆ.

ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಹೆಬ್ರಿ, ಮುನಿಯಾಲು, ಅಂಡಾರು, ಮುದ್ರಾಡಿ, ಕಬ್ಬಿನಾಲೆ ಸೇರಿದಂತೆ ವಿವಿಧೆಡೆ ಭಾರಿ ಗಾಳಿ ಮಳೆಯಾಗಿದೆ. ಹೆಬ್ರಿ ತಾಲೂಕು ಆಡಳಿತ ಕಚೇರಿಯ ಮೇಲ್ಛಾವಣಿಯ ಹಂಚುಗಳು ಹಾರಿ ಹೋಗಿದೆ. ಇನ್ನು ಹಲವೆಡೆ ವಿದ್ಯುತ್‌ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್‌ ವ್ಯತ್ಯಯವಾಗಿದೆ.

ಮರ್ಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುಡ್ಡೆಯಂಗಡಿಯ ಆನಂದ ಅವರ ಮನೆಗೆ ಹಾನಿಯಾಗಿ 5 ಸಾ. ರೂ. ನಷ್ಟ, ಬಸವರಾಜ ಮನೆ ಹಾನಿಗೊಳಗಾಗಿ 2 ಸಾ. ರೂ. ನಷ್ಟ, ದೆಪ್ಪುತ್ತೆಯ ಸುಜಾತ ಅವರ ಮನೆ ಹಾನಿಗೀಡಾಗಿ 15 ಸಾ. ರೂ. ನಷ್ಟ, ಅಮ್ಮಣ್ಣಿ ಅವರ ಮನೆಯ ಶೀಟ್‌ ಹಾನಿಯಾಗಿ 5 ಸಾ.ರೂ. ನಷ್ಟ, ಗಣೇಶ್‌ ಜೋಗಿಯ ಮನೆ ಹಾನಿಗೊಳಗಾಗಿ 8 ಸಾ.ರೂ. ನಷ್ಟ ಹಾಗೂ ಸೀತಾ ಆಚಾರ್ಯ ಅವರಿಗೆ 15 ಸಾ. ರೂ.ಯಷ್ಟು ಹಾನಿಯಾಗಿದೆ. ಕಡ್ತಲ ಗ್ರಾಮದ ಕಂಬ್ಳಗುಡ್ಡೆಯ ಕುಸುಮ ಮನೆಗೆ ಮರ ಬಿದ್ದು 8 ಸಾ. ರೂ. ನಷ್ಟ ಉಂಟಾಗಿದೆ.





























































































error: Content is protected !!
Scroll to Top