ಎ. 19 : ಮಹಾಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ

ಕಾರ್ಕಳ : ವಿಶ್ವವಿಖ್ಯಾತ ಕಾರ್ಕಳ ಬಾಹುಬಲಿ ಸ್ವಾಮಿಯ 2027ರ ಮಹಾಮಸ್ತಕಾಭಿಷೇಕ ಮಹೋತ್ಸವದ ದಿನಾಂಕ ಘೋಷಣೆ ಮತ್ತು ಸಮಿತಿಯ ಕಾರ್ಯಾಲಯ ಉದ್ಘಾಟನಾ ಸಮಾರಂಭವು ಏ. 19ರ ಭಾನುವಾರ ಪೂರ್ವಾಹ್ನ 10.30ಕ್ಕೆ ಕಾರ್ಕಳದ ದಾನಶಾಲೆ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಸಮಿತಿಯ ಅಧ್ಯಕ್ಷರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಹೋತ್ಸವದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದರು.

ಗಣ್ಯರ ಉಪಸ್ಥಿತಿ
ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಮಿತಿಯ ಕಾರ್ಯಾಲಯವನ್ನು ಉದ್ಘಾಟಿಸಲಿದ್ದಾರೆ. ಯೋಜನೆ ಮತ್ತು ಸಾಂಖಿಕ ಇಲಾಖೆ ಸಚಿವ ಹಾಗೂ ಸಮಿತಿಯ ಗೌರವ ಸಂರಕ್ಷಕ ಡಿ. ಸುಧಾಕರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ. ಸುನಿಲ್ ಕುಮಾರ್, ಅದಾನಿ ಗ್ರೂಪ್ ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಅಳ್ವ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಭಾಗವಹಿಸಲಿದ್ದಾರೆ.

ಅನುದಾನ
ಮಹೋತ್ಸವಕ್ಕಾಗಿ ಒಟ್ಟು ರೂ. 82,37,52,000 ವೆಚ್ಚದ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೇ ಸರ್ಕಾರವು ಮೊದಲ ಕಂತಾಗಿ ರೂ. 1,19,25,000 ಬಿಡುಗಡೆಗೊಳಿಸಿದ್ದು, ಇದರಿಂದ ಅಟ್ಟಳಿಗೆ ನಿರ್ಮಾಣ, ತ್ಯಾಗಿ ಭವನ, ಮಾತಾಜಿ ಭವನ ಹಾಗೂ ಸಭಾಂಗಣ ನವೀಕರಣ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ರಾಜೇಂದ್ರ ಕುಮಾರ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಸಮಿತಿ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಕೋಶಾಧಿಕಾರಿ ಎ. ಮೋಹನ್ ಪಡಿವಾಳ್, ಸಮಿತಿಯ ಪ್ರಮುಖರಾದ ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ. ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.























error: Content is protected !!
Scroll to Top