​ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಚಾಟನೆ

​ಹರಿಹರ : ಹನಗವಾಡಿ ಸಮೀಪದ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಚಾಟಿಸಲಾಗಿದೆ. ಸೋಮವಾರ ನಡೆದ ಪೀಠದ ಧರ್ಮದರ್ಶಿಗಳ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸ್ವಾಮೀಜಿಯವರನ್ನು ಪದಚ್ಯುತಗೊಳಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
​ಪೀಠದ ಆವರಣದಲ್ಲಿ ನಡೆದ 12 ಮಂದಿ ಧರ್ಮದರ್ಶಿಗಳ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಟ್ರಸ್ಟಿ ಬಸವರಾಜ ದಿಂಡೂರ, ಪೀಠದ ಹಿತದೃಷ್ಟಿಯಿಂದ ಮತ್ತು ಸಮಾಜದ ಆಶಯದಂತೆ ಈ ಅಂತಿಮ ತೀರ್ಮಾನಕ್ಕೆ ಬರಲಾಗಿದೆ ಎಂದರು.

​ಪದಚ್ಯುತಿಗೆ ಮುಖ್ಯ ಕಾರಣ
​ಟ್ರಸ್ಟಿಗಳ ಮಾಹಿತಿ ಪ್ರಕಾರ ವಚನಾನಂದ ಶ್ರೀಗಳ ಉಚ್ಚಾಟನೆಗೆ ಪ್ರಮುಖವಾಗಿ ‘ದ್ವಂದ್ವ ಪೀಠ’ದ ವಿವಾದ ಕಾರಣವಾಗಿದೆ ಎನ್ನಲಾಗಿದೆ. ವಚನಾನಂದ ಶ್ರೀಗಳು ಈ ಹಿಂದೆ ಸ್ಥಾಪಿಸಿದ್ದ ‘ಶ್ವಾಸಪೀಠ’ ಅಥವಾ ‘ಹರಿಹರ ಪಂಚಮಸಾಲಿ ಪೀಠ’ ಇವೆರಡರಲ್ಲಿ ಒಂದನ್ನು ಮಾತ್ರ ಆಯ್ದುಕೊಳ್ಳುವಂತೆ ಟ್ರಸ್ಟ್ ಸೂಚಿಸಿತ್ತು. ​ಯಾವುದಾದರೂ ಒಂದು ಪೀಠಕ್ಕೆ ಸೀಮಿತವಾಗಿ ಕಾರ್ಯನಿರ್ವಹಿಸುವಂತೆ ಶ್ರೀಗಳಿಗೆ ತಿಳಿಸಲಾಗಿತ್ತು. ಆದರೆ, ಅವರು ಶ್ವಾಸಗುರು ಪೀಠವನ್ನು ತ್ಯಜಿಸಲು ಒಪ್ಪಿರಲಿಲ್ಲ. ಟ್ರಸ್ಟ್‌ನ ನಿರ್ಧಾರಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಅವರನ್ನು ಉಚ್ಚಾಟಿಸುವುದು ಅನಿವಾರ್ಯವಾಯಿತು ಎಂದು ದಿಂಡೂರ ಸ್ಪಷ್ಟಪಡಿಸಿದರು.

​ಕಳೆದ ಕೆಲವು ಸಮಯದಿಂದ ಪೀಠದ ಆಡಳಿತ ಮಂಡಳಿ ಮತ್ತು ಶ್ರೀಗಳ ನಡುವೆ ಶೀತಲ ಸಮರ ನಡೆಯುತ್ತಿತ್ತು. ಈಗ ಅಧಿಕೃತವಾಗಿ ಪದಚ್ಯುತಿಗೊಳಿಸಿರುವುದು ಪಂಚಮಸಾಲಿ ಸಮಾಜದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಭೆಯಲ್ಲಿ ಕೈಗೊಂಡಿರುವ ಈ ನಿರ್ಧಾರದ ಕುರಿತು ವಚನಾನಂದ ಶ್ರೀಗಳು ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ಉತ್ತರಾಧಿಕಾರಿಗಳ ಆಯ್ಕೆ ಹಾಗೂ ಪೀಠದ ಭವಿಷ್ಯದ ಕುರಿತು ಸಮಾಜದ ಮುಖಂಡರು ಸದ್ಯದಲ್ಲೇ ಮತ್ತೊಂದು ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.







































error: Content is protected !!
Scroll to Top