ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವ ಕುರಿತು ಸ್ವತಃ ಅಣ್ಣಾಮಲೈಯವರೇ ಪ್ರತಿಕ್ರಿಯಿಸಿದ್ದು, ಚುನಾವಣೆಗೆ ಸ್ಪರ್ಧಿಸದ ನಿರ್ಧಾರ ತಮ್ಮದೇ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಣ್ಣಾಮಲೈ, ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಕೋರ್ ಕಮಿಟಿಗೆ ಲಿಖಿತವಾಗಿ ತಿಳಿಸಿದ್ದೆ. ಆದ್ದರಿಂದ ನನಗೆ ಟಿಕೆಟ್ ನೀಡಲಾಗಲಿಲ್ಲ ಎನ್ನುವುದು ಸರಿಯಲ್ಲ. ನಾನು ಸ್ಪರ್ಧಿಸಲು ಇಚ್ಛಿಸಲಿಲ್ಲ ಎಂಬುದೇ ಸತ್ಯ ಎಂದರು. ನಾನು ಸ್ಪರ್ಧಿಸಲು ಇಚ್ಛಿಸದಿದ್ದಾಗ ನಾಯಕತ್ವವು ನನಗೆ ಟಿಕೆಟ್ ಹೇಗೆ ನೀಡಬಹುದು ಎಂದು ಪ್ರಶ್ನಿಸಿದ ಅವರು ಈ ವಿಷಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆ ಸ್ಪಷ್ಟಪಡಿಸುತ್ತಿದ್ದೇನೆ ಎಂದರು.
ತನ್ನ ನಿರ್ಧಾರವನ್ನು ಪಕ್ಷದ ಕೇಂದ್ರ ನಾಯಕತ್ವವು ಗೌರವಿಸಿದೆ. ಅದಕ್ಕಾಗಿ ಧನ್ಯವಾದ ತಿಳಿಸಿದ ಅವರು, ಎನ್ಡಿಎ ಮೈತ್ರಿಯ ಅಭ್ಯರ್ಥಿಗಳ ಪರ ರಾಜ್ಯದಲ್ಲಿ ಪ್ರಚಾರ ನಡೆಸುವುದಾಗಿ ಹೇಳಿದರು. ರಾಜ್ಯದ ಮೈತ್ರಿ ಅಭ್ಯರ್ಥಿಗಳಿಗೆ ಸಕ್ರಿಯವಾಗಿ ಬೆಂಬಲ ನೀಡುತ್ತೇನೆ ಎಂದು ಅವರು ಹೇಳಿದರು.





































