ಪ್ರತ್ಯೇಕ ಎರಡು ಪ್ರಕರಣ ದಾಖಲು
ಪಡುಬಿದ್ರೆ : ಹೆಜಮಾಡಿ ಟೋಲ್‌ಗೇಟ್ ಬಳಿ ಪಟಾಕಿ ಸಿಡಿಸಿ ಪುಂಡಾಟಿಕೆ ಮೆರೆದಿದ್ದ ಕೇರಳದ ವಿದ್ಯಾರ್ಥಿಗಳ ಬಸ್ ಮರುದಿನ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಪಲ್ಟಿಯಾಗಿದೆ. ಎರಡು ಘಟನೆ ಸಂಬಂಧಿಸಿದಂತೆ ಕಾರ್ಕಳ ಮೂಲದ ಬಸ್ ಚಾಲಕ ಗಣೇಶ್ ವಿರುದ್ಧ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ.
ಕೇರಳದ ಗುರುವಾಯೂರಿನ ಶ್ರೀ ಕೃಷ್ಣ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ 32 ಮಂದಿ ಹಂಪಿಗೆ ಹೋಗಬೇಕೆಂದು ಮಂಗಳೂರಿಗೆ ಬಂದಿದ್ದು ಫೆ.3ರಂದು ರಾತ್ರಿ ಹೆಜಮಾಡಿ ಟೋಲ್ ಗೇಟ್ ಬಳಿ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಬಸ್ಸನ್ನು ನಿಲ್ಲಿಸಿ, ರಸ್ತೆಯಲ್ಲಿ ಬೆಂಕಿ ಉಗುಳುವ ಪಟಾಕಿಯನ್ನು ಸಿಡಿಸಿ ಕುಣಿದು ಕುಪ್ಪಳಿಸಿದ್ದರು. ಈ ಮೂಲಕ ರಸ್ತೆಯಲ್ಲಿ ಹೋಗುವ ವಾಹನದ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದರೆಂದು ದೂರಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಕೂಡಲೇ ಸ್ಥಳಕ್ಕೆ ತೆರಳಿದ ಪಡುಬಿದ್ರಿ ಪೊಲೀಸ್ ಠಾಣೆ ಪೊಲೀಸರು, ಬಸ್‌ನ ಮಾಹಿತಿ ಸಂಗ್ರಹಿಸಿ, ಬಸ್ಸಿನ ಚಾಲಕ ಗಣೇಶ್ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಸ್ ಪಲ್ಟಿ
ಇದೇ ಬಸ್ ಮರುದಿನ (ಫೆ.4)ಬೆಳಗ್ಗೆ 5-30ಕ್ಕೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮ್ಮನ ಕೇರಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಶಿಕ್ಷಕಿ ಸೇರಿದಂತೆ ಹಲವರಿಗೆ ಗಾಯಾಗಳಾಗಿದ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.


















