ಮಣಿಪಾಲ ಜ್ಞಾನಸುಧಾ : ಸಂಸ್ಥಾಪಕರ ದಿನಾಚರಣೆ – ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ : ಜ್ಞಾನಸುಧಾ ವಿದ್ಯಾಸಂಸ್ಥೆ ಅತ್ಯುತ್ತಮ ಶಿಕ್ಷಣ ಮಾತ್ರವಲ್ಲದೇ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಹೆತ್ತವರ ಮೇಲೆ ಭಕ್ತಿ, ಪ್ರೀತಿ ಮೈಗೂಡಿಸುವಲ್ಲಿ ಮಹತ್ವದ ಕಾರ್ಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮತ್ತವರ ತಂಡದ ಕಾರ್ಯ ಶ್ಲಾಘನೀಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಅವರು ಜ. 10ರಂದು ಮಣಿಪಾಲ ವಿದ್ಯಾಸಂಸ್ಥೆ ಆವರಣದಲ್ಲಿ ಮಣಿಪಾಲ ಜ್ಞಾನಸುಧಾ ಹಾಗೂ ಉಡುಪಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸಂಸ್ಥಾಪಕರ ದಿನಾಚರಣೆ, ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವರು ಮಣಿಪಾಲ ವಿದ್ಯಾನಗರ ಗ್ರೀನ್ಸ್‌ನಲ್ಲಿ ಅಜೆಕಾರ್‌ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಆಯೋಜಿಸಿರುವ ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆಯ ಎರಡನೇ ಹಂತದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದರು.

ಭಾರತವಿಂದು ಸಮರ್ಥ, ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಒಂದು ಕಾಲದಲ್ಲಿ ಸಾಲಕ್ಕಾಗಿ ಚಿನ್ನವನ್ನು ಅಡವಿಟ್ಟ ಭಾರತವಿಂದು ಜಗತ್ತಿನ 70 ರಾಷ್ಟ್ರಗಳಿಗೆ ಸಾಲ ನೀಡುವ ದೇಶವಾಗಿ ಬೆಳೆದು ನಿಂತಿದೆ. ವೈದ್ಯಕೀಯ, ತಂತ್ರಜ್ಞಾನದಲ್ಲೂ ದೇಶ ಅಗಾಧವಾಗಿ ಬೆಳೆದಿದೆ. ದೇಶಕ್ಕೆ ಒಂದೇ ವರ್ಷದಲ್ಲಿ 227 ವೈದ್ಯರನ್ನು ನೀಡಿದ ಕೀರ್ತಿ ಹೆಮ್ಮೆಯ ಜ್ಞಾನಸುಧಾ ಸಂಸ್ಥೆಯದ್ದು ಎಂದವರು ಹೇಳಿದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಶಿಕ್ಷಣ ಕಾಶಿ ಎಂಬ ಹೆಸರು ಪಡೆದ ಉಡುಪಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ಜ್ಞಾನಸುಧಾ ಮಾಡುತ್ತಿದೆ. ವಿದ್ಯಾರ್ಥಿಗಳ ಔದ್ಯೋಗಿಕ ಕ್ಷೇತ್ರಕ್ಕೆ ಸೇರುವ ಕನಸನ್ನು ನನಸು ಮಾಡುವ ಕೆಲಸ ಮಾಡುತ್ತಿದೆ ಎಂದರು.

ಉಡುಪಿ ಆದರ್ಶ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಮಾತನಾಡಿ, ಜ್ಞಾನಸುಧಾ ಹೇಳಿದ್ದನ್ನು ಸಾಧಿಸಿ ತೋರಿಸಿದ ಸಂಸ್ಥೆ. ಇಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ದೇಶಭಕ್ತಿ, ಹೆತ್ತವರಿಗೆ ಗೌರವ ನೀಡುವ ಮೌಲ್ಯಭರಿತ ಶಿಕ್ಷಣ ದೊರೆಯುತ್ತಿದೆ ಎಂದರು.

ಕೆನರಾಕನ್‌ಸ್ಯುಮರ್ ಪ್ರೋಡಕ್ಟ್ಸ್‌ನ ನಿರ್ದೇಶಕಿ ಜಯಾ ಸುಧಾಕರ ಪೈ ಮಾತನಾಡಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಇನ್ನೂ ಹೆಚ್ಚಿನ ಯಶಸ್ಸು ಸಾಧಿಸುವಂತಾಗಲಿ ಎಂದು ಹಾರೈಸಿದರು.

ಭಾರತವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೆ ಮುಂಚೂಣಿಯಲ್ಲಿದೆ. ಜ್ಞಾನಸುಧಾದಂತಹ ಸಂಸ್ಥೆಗಳು ಈ ಉತ್ತಮ ರೀತಿಯ ಸಾಧನೆಯನ್ನು ಮಾಡುತ್ತಿರುವುದರಿಂದ ದೇಶ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಕಾಣಲು ಸಾಧ್ಯವಾಗುವುದು. ನಾವು ಮಾಡುವ ಕೆಲಸವನ್ನು ಸಂತೋಷದಿಂದ ಮಾಡಬೇಕು ಆಗ ಎಲ್ಲ ಸಾಧನೆಯು ಸುಲಭ ಸಾಧ್ಯವಾಗುವುದು.
ಟಿ. ಸುಧಾಕರ ಪೈ

ವಿನಯ ಹೆಗ್ಡೆ ಸಂಸ್ಮರಣೆ
ಇತ್ತೀಚೆಗೆ ಅಗಲಿದ ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಎನ್.‌ ವಿನಯ್ ಹೆಗ್ಡೆ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಇದರ ಅಂಗವಾಗಿ ಅನ್ನದಾನ ಮಾಡಲಾಗಿದ್ದು 3 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್‌ ಶೆಟ್ಟಿ ಅವರು ವಿನಯ ಹೆಗ್ಡೆ ಅವರ ವ್ಯಕ್ತಿತ್ವ, ಸಾಧನೆ ಕುರಿತು ಮೆಲಕು ಹಾಕಿದರು.

ಸೇನೆಗೆ ದೇಣಿಗೆ – ವಿದ್ಯಾರ್ಥಿ ವೇತನ
ಉಡುಪಿ ಮತ್ತು ಮಣಿಪಾಲ ಜ್ಞಾನಸುಧಾದಿಂದ ನೀಟ್-2025ರ ಮೂಲಕ ಎಂಬಿಬಿಎಸ್‌ಗೆ ಸೇರ್ಪಡೆಯಾದ 56 ವಿದ್ಯಾರ್ಥಿಗಳ ಪರವಾಗಿ ಒಂದು ಲಕ್ಷದ ಹನ್ನೆರಡು ಸಾವಿರ ರೂ. ಚೆಕ್ಕನ್ನು ಭಾರತೀಯ ಸೇನೆಗೆ ಹಸ್ತಾಂತರಿಸಲಾಯಿತು. ಮಣಿಪಾಲ ಹಾಗೂ ಉಡುಪಿ ಜ್ಞಾನಸುಧಾ ಸಾಧಕ ವಿದ್ಯಾರ್ಥಿಗಳಿಗೆ 4.90ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು
ಕಳೆದ ಡಿ. 28ರಂದು ಕಾರ್ಕಳ ಜ್ಞಾನಸುಧಾದಲ್ಲಿ ನಡೆದ ಮೊದಲ ಹಂತದ ಪ್ರತಿಭಾ ಪುರಸ್ಕಾರದಲ್ಲಿ 13.05ಲಕ್ಷ ರೂ. ವಿದ್ಯಾರ್ಥಿವೇತನ, ಕಾರ್ಕಳ ಜ್ಞಾನಸುಧಾದಿಂದ ನೀಟ್-2025ರ ಮೂಲಕ ಎಂಬಿಬಿಎಸ್‌ಗೆ ಸೇರ್ಪಡೆಯಾದ 171 ವಿದ್ಯಾರ್ಥಿಗಳ ಪರವಾಗಿ 3.42 ಲಕ್ಷದ ಚೆಕ್ಕನ್ನು ಭಾರತೀಯ ಸೇನೆಗೆ ನೀಡಲಾಗಿತ್ತು.
ಎಂ.ಬಿ.ಬಿ.ಎಸ್.ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು, ಜೆ.ಇ.ಇ. ಮೈನ್ ಮೂಲಕ ಎನ್.ಐ.ಟಿ. ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು, ಕೆ.ಸಿ.ಇ.ಟಿ ಇಂಜಿನಿಯರಿಂಗ್‌ನಲ್ಲಿ 1 ಸಾವಿರದೊಳಗಿನ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು, ರಾಷ್ಟ್ರ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ, ಎನ್‌ಡಿಎ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಶಮಿತಾ ನಿರೂಪಿಸಿ, ವಂದಿಸಿದರು.









































































































error: Content is protected !!
Scroll to Top