ಅನ್ಯ ಸಮುದಾಯದ ಗುಂಪಿನಿಂದ ಕಾರ್ಕಳದಲ್ಲಿ ಸದಾ ಅಶಾಂತಿ

ಕಾರ್ಕಳ : ಕಾರ್ಕಳ ಅತ್ಯಂತ ಸೌಹಾರ್ದ ಮತ್ತು ಶಾಂತಿಯ ಪ್ರದೇಶ. ಯಾವುದೇ ರೀತಿಯ ಅಕ್ರಮ ಅಥವಾ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡದೆ ಶಾಂತಿಯುತವಾಗಿರುವ ಈ ತಾಲೂಕಿನಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಬಹುಸಂಖ್ಯಾತ ಹಿಂದೂಗಳ ಪವಿತ್ರ ನಂಬಿಕೆಯ ಮೇಲೆ ಹಾಗೂ ಭಾವನೆಗೆ ದಕ್ಕೆ ತರುವ ಅನೇಕ ಘಟನೆಗಳು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆರೋಪಿಸಿರುವ ವಿಶ್ವಹಿಂದೂ ಪರಿಷತ್‌ ಬಜರಂಗದಳ ಹಾಗೂ ಹಿಂದು ಜಾಗರಣ ವೇದಿಕೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಜ.12ರಂದು ತಹಶೀಲ್ದಾರರಿಗೆ ಆಗ್ರಹ ಪತ್ರ ಸಲ್ಲಿಸಿದೆ.

ಪತ್ರದಲ್ಲಿ ಶಿರ್ಲಾಲಿನಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ಮನೆಯ ಹಟ್ಟಿಯಿಂದ ಗೋವುಗಳ ಕಳ್ಳತನ, ಕೆರ್ವಾಶೆ ಮಾಳ ಬಜಗೋಳಿ ಹೊಸ್ಮಾರು ಭಾಗದಲ್ಲಿ ಅವ್ಯಾಹತವಾಗಿ ಗೋವುಗಳನ್ನು ಕದ್ದುಕೊಂಡು ಹೋಗುವ ಗೋ ಕಳ್ಳರು, ತೆಳ್ಳಾರಿನಲ್ಲಿ ಎಷ್ಟೋ ವರ್ಷಗಳಿಂದ ನಿರಂತರವಾಗಿ ಅಕ್ರಮ ಕಸಾಯಿಖಾನೆ, ಕೆಲವು ತಿಂಗಳ ಹಿಂದೆಯಷ್ಟೇ ಮುಸ್ಲಿಂ ಸಮುದಾಯದ ಮನೆಯೊಂದರಲ್ಲಿ ಜಿಂಕೆ ಮಾಂಸ ಪತ್ತೆ, ತೆಳ್ಳಾರು, ದುರ್ಗ, ಮುಂಡ್ಲಿ ಭಾಗದಲ್ಲಿ ಗೋವುಗಳ ರುಂಡ ಮತ್ತು ಅವಶೇಷಗಳು ನದಿಯಲ್ಲಿ ಪತ್ತೆಯಾಗಿರುತ್ತದೆ. ಇನ್ನು ನಲ್ಲೂರಿನ ಮುಸ್ಲಿಂ ಸಮುದಾಯದ ಮನೆಯಲ್ಲಿ ಅಕ್ರಮ ಕಸಾಯಿಖಾನೆ ಮೂಲಕ ಕೆಜಿ ಗಟ್ಟಲೆ ಗೋ ಮಾಂಸ ಪತ್ತೆ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ ಎಂದು ಉಲ್ಲೇಖಿಸಿರುವ ಅವರು ಈ ಎಲ್ಲಾ ಕೋಮು ಸೂಕ್ಷ್ಮ ವಿಚಾರಗಳನ್ನು ಪೋಲಿಸ್ ಇಲಾಖೆ ಹಾಗೂ ಕಾನೂನಿನ ಮೇಲೆ ನಂಬಿಕೆ ಇರಿಸಿರುವ ಹಿಂದೂ ಸಂಘಟನೆಗಳು ಕಾನೂನು ಪ್ರಕಾರವೇ ಎದುರಿಸಿದೆ ಹೊರತು ಎಲ್ಲಿಯೂ ಕೋಮು ಸಂಘರ್ಷಕ್ಕೆ ಅನುವು ಮಾಡಿಕೊಟ್ಟಿಲ್ಲ. ಆದರೆ ಇಲ್ಲಿ ಉಲ್ಲೇಖಿಸಿರುವ ಯಾವುದೇ ಪ್ರಕರಣದಲ್ಲಿಯೂ ಕೂಡ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದ ಪರಿಣಾಮವಾಗಿ ಆರೋಪಿಗಳು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಶಾಂತಿಗೆ ನೇರ ಕಾರಣ
ಪೋಲಿಸ್ ಇಲಾಖೆ ನಮಗೆ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಮತ್ತು ಆರೋಪಿಗಳು ಎಂದು ಗುರುತಿಸಿಕೊಂಡಿರುವ ವ್ಯಕ್ತಿಗಳು ಮತ್ತೆ ಮತ್ತೆ ಅದೇ ರೀತಿಯ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸುತ್ತಿರುವುದು ಸಮಾಜದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗುತ್ತಿದೆ. ಈ ಎಲ್ಲಾ ವಿಚಾರಗಳ ಮುಂದುವರಿದ ಭಾಗವಾಗಿ ಕಾರ್ಕಳ ಬೈಲೂರು ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮುಸ್ಲಿಂ ಸಮುದಾಯದವರಿಂದ ಕಳ್ಳತನ ನಡೆದಿದೆ. ಹೀಗೆ ವ್ಯವಸ್ಥಿತವಾಗಿ ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ಒಂದು ಅನ್ಯ ಸಮುದಾಯದ ಗುಂಪು ಶಾಂತಿಯಿಂದಿರುವ ಕಾರ್ಕಳದಲ್ಲಿ ಸದಾ ಅಶಾಂತಿಗೆ ನೇರ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಎಲ್ಲ ಘಟನೆಗಳ ಬಗ್ಗೆ ಸ್ಪಷ್ಟನೆ ಕೋರಿದ ವಿಶ್ವಹಿಂದೂ ಪರಿಷತ್‌ ಬಜರಂಗದಳ-ಹಿಂದು ಜಾಗರಣ ವೇದಿಕೆ ತಮ್ಮ ಸ್ಪಷ್ಟನೆ ಆಧಾರದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಾದ ನಾವು ಮುಂದಿನ ಹೆಜ್ಜೆಯನ್ನು ಇಡಲಿದ್ದೇವೆ. ತಾವು ನಮ್ಮ ಆಗ್ರಹಕ್ಕೆ ಶೀಘ್ರವಾಗಿ ಸಕರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ತಾಳ್ಮೆಯ ಕಟ್ಟೆಯೊಡೆದು ತೀವ್ರತರದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗಿ ಬರಬಹುದು ಎಂದು ಆಗ್ರಹ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭ ವಿಶ್ವ ಹಿಂದೂ ಪರಿಷತ್‌ ಮುಖಂಡ ಸುನಿಲ್‌ ಕೆ.ಆರ್.‌‌, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಮುಖರಾದ ರತ್ನಾಕರ್‌ ಅಮೀನ್, ರಮೇಶ್ ಕಲ್ಲೊಟ್ಟೆ, ಉಮೇಶ್ ನಾಯ್ಕ, ಗುರುಪ್ರಸಾದ್ ಸೂಡ, ತಾಲೂಕು ಸಂಯೋಜಕ ಸುಜಿತ್ ಸಫಲಿಗ, ಹರೀಶ್‌ ಕಿಚ್ಚ, ರಾಘವೇಂದ್ರ ಕುಲಾಲ್‌, ಪ್ರಸಾದ್‌ ನಿಟ್ಟೆ, ಜಗದೀಶ್‌, ಮನೀಶ್ ಕುಲಾಲ್, ರವಿ ಪ್ರವೀಣ್ ಶೆಟ್ಟಿ ಈದು, ಉಮೇಶ್‌, ಪ್ರಾಣೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.









































































































error: Content is protected !!
Scroll to Top