ಮುಖ್ಯ ರಸ್ತೆ ಬದಿ ಜಾಗ ಖರೀದಿ ವೇಳೆ ಇರಲಿ ಜಾಗರೂಕತೆ

ಕಾರ್ಕಳ : ಮುಖ್ಯ ರಸ್ತೆ ಬದಿ ಜಾಗ ಖರೀದಿ ಸಂದರ್ಭ ಜಾಗ ಕೊಂಡುಕೊಳ್ಳುವವರು ಜಾಗರೂಕತೆ ವಹಿಸುವುದು ಅತಿ ಅಗತ್ಯ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲ ಸರಕಾರಿ ಜಮೀನು ಆಗಿದಲ್ಲಿ 40 ಮೀಟರ್,‌ ಪಟ್ಟಾ ಭೂಮಿಯಾಗಿದಲ್ಲಿ 6 ಮೀಟರ್‌ ರೋಡ್‌ ಮಾರ್ಜಿನ್‌ಗೆ ಒಳಪಟ್ಟಿರುತ್ತದೆ. ಹೀಗಿರುವಾಗ ರಸ್ತೆ ಬದಿಯ ತನ್ನ ಜಾಗದಿಂದ 6 ಮೀಟರ್‌ ರಸ್ತೆ ಮಾರ್ಜಿನ್‌ ಬಿಟ್ಟು ಜಾಗ ಖರೀದಿಗೆ ಏನು ಸಮಸ್ಯೆಯಿರಲಿಲ್ಲ. ಆದರೆ, ಇದೀಗ ಮನೆ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರ ಏಕನಿವೇಶನ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವುದಿಲ್ಲ.

ನಿಗದಿತ ರಸ್ತೆ ಮಾರ್ಜಿನ್‌ ಬಿಟ್ಟು ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದರೂ ಪ್ರಾಧಿಕಾರ ಮಾತ್ರ ಅವಕಾಶ ನೀಡುವುದಿಲ್ಲ. ತಿಂಗಳಾನುಗಟ್ಟಲೆ ಸ್ಥಳೀಯಾಡಳಿತ, ಪ್ರಾಧಿಕಾರ ಕಚೇರಿ ಎಂದು ಓಡಾಟ, ಸುತ್ತಾಟ, ಅಲೆದಾಟ ಬಳಿಕ ಜಮೀನು ಮಾಲಕನಿಗೆ ಅರಿವಾಗುವುದು ರಾಜ್ಯ, ರಾಷ್ಟ್ರೀಯ ಹೆದ್ದಾರಿ ರಸ್ತೆ ಮಧ್ಯದಿಂದ 40 ಮೀಟರ್‌ ವ್ಯಾಪ್ತಿಯೊಳಗೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲದಿರುವುದು. ಪ್ರಾಧಿಕಾರದ ಅನುಮೋದನೆ ದೊರೆಯದಿದ್ದಲ್ಲಿ 9/11 ಸರ್ಟಿಫಿಕೇಟ್‌ ದೊರೆಯದು. 9/11 ಆಗದಿದ್ದಲ್ಲಿ ಬ್ಯಾಂಕ್‌ ಸಾಲ ಆಗಲಿ ಅಥವಾ ಮನೆಗೆ ವಿದ್ಯುತ್‌ ಸಂಪರ್ಕವಾಗಲಿ ಸಾಧ್ಯವಿಲ್ಲ. ಇದೇ ನಿಯಮ ಲೋಕೋಪಯೋಗಿ ರಸ್ತೆಯಾಗಿದಲ್ಲಿ 25 ಮೀಟರ್‌ವರೆಗೆ ಅನ್ವಯವಾಗಲಿದೆ.

ಮನೆ ಕನಸು ನುಚ್ಚುನೂರು
ತನ್ನ ಜೀವಿತಾವಧಿಯಲ್ಲಿ ಸುಂದರ ಮನೆಯೊಂದನ್ನು ನಿರ್ಮಿಸಬೇಕೆಂಬ ಕನಸು ಕಂಡು ಮುಖ್ಯ ರಸ್ತೆ ಬದಿ ನಿವೇಶನಕ್ಕಾಗಿ ಜಾಗ ಖರೀದಿ ಮಾಡಿದಾತನ ಪರಿಸ್ಥಿತಿ ದಯನೀಯವಾದುದು. ತಾನು ಖರೀದಿ ಮಾಡಿದ 10 ಸೆಂಟ್ಸ್‌ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ದೊರೆಯದೇ ಆಮೇಲೆ ಆತ ಮೇಲೆ ನೋಡುವ ಪರಿಸ್ಥಿತಿ ಎದುರಾಗುವುದು. ಈ ಹಿಂದೆ ಪಟ್ಟಾ ಜಮೀನು ಆಗಿದ್ದಲ್ಲಿ ರಸ್ತೆ ಬದಿಯ ತನ್ನ ಜಾಗದ ಅಂಚಿನಿಂದ 6 ಮೀಟರ್‌ ಬಿಟ್ಟು ಮನೆ, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ದೊರೆಯುತ್ತಿತ್ತು. ಆದರೆ, ಕಾರ್ಕಳ ವ್ಯಾಪ್ತಿಯೂ ಪ್ರಾಧಿಕಾರಕ್ಕೆ ಒಳಪಟ್ಟ ಬಳಿಕ ಅಂದರೆ 2024ರ ಆಗಸ್ಟ್‌ ಅನಂತರ ಮನೆ, ಕಟ್ಟಡ ನಿರ್ಮಾಣಕ್ಕೆ ತೊಡಕಾಗಿ ಪರಿಣಮಿಸಿದೆ.

ಕಾಪುವಿನಲ್ಲಿ ಕಚೇರಿ
ಏಕ ವಿನ್ಯಾಸ ನಕ್ಷೆ ಅನುಮೋದನೆಗಾಗಿ ಕಾರ್ಕಳದ ಜನತೆ ಕಾಪು ಪ್ರಾಧಿಕಾರ ಕಚೇರಿಯನ್ನು ಅವಲಂಬಿಸಬೇಕಿದೆ. ಕಾಪು ಕಚೇರಿ ಸಂಪರ್ಕಿಸುವುದೂ ತ್ರಾಸದಾಯಕ. ಕಾರ್ಕಳ ತಾಲೂಕಿನ ಈದು, ನಲ್ಲೂರು, ಹೊಸ್ಮಾರು, ಬಜಗೋಳಿ ಭಾಗದ ಜನತೆ ಕಾಪು ಸಂಪರ್ಕಿಸಲು ಮೂರು ಬಸ್‌ನಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆಯಿದೆ. ಒಂದು ದಿನ ರಜೆ ಮಾಡಿ ಕಾಪು ತೆರಳಿದರೂ ತಮ್ಮ ಕಾರ್ಯ ಕೈಗೂಡದು. ನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿಗೆ ಕಾಪು ಮಾತ್ರವಲ್ಲದೇ ಕುಂದಾಪುರ, ಉಡುಪಿ ನಗರ, ಬಂಟ್ವಾಳ ವ್ಯಾಪ್ತಿಯೂ ಒಳಪಡುವುದು. ಅರ್ಜಿ ಸಲ್ಲಿಕೆಯಾಗುವ ಪ್ರತಿಯೊಂದು ನಿವೇಶನವನ್ನು ಆತನೇ ಭೇಟಿ ಮಾಡಿ ರಿಪೋರ್ಟ್ ಮಾಡಬೇಕಿದೆ. ಹೀಗಾಗಿ ಸಾವಿರಾರು ಮಂದಿಯ ಫೈಲ್‌ ಕಥೆ ಏನು ?

ಕಾರ್ಮಿಕರ ವಲಸೆ
ಒಂದು ಕಡೆ ಪ್ರಾಧಿಕಾರದ ನಿಯಮದಿಂದ ಗುತ್ತಿಗೆದಾರರು, ಮನೆ, ಕಟ್ಟಡ ಕಟ್ಟಲು ಮುಂದಾಗುವವರಿಗೆ ಸಂಕಷ್ಟವಾದರೆ ಮತ್ತೊಂದು ಕಡೆ ಕಾರ್ಮಿಕರಿಗೂ ಪ್ರಾಧಿಕಾರದ ನಿಯಮದ ಬಿಸಿ ತಟ್ಟುತ್ತಿದೆ. ಬಿಜಾಪುರ, ಬಾಗಲಕೋಟೆ, ಹಾವೇರಿ ಮೊದಲಾದ ಕಡೆಯಿಂದ ಬಂದು ಕಾರ್ಕಳದಲ್ಲಿ ನೆಲೆಸಿದ್ದ ಕಾರ್ಮಿಕರೂ ಇದೀಗ ಕೆಲಸವಿಲ್ಲದೇ ಬೇರೆಡೆ ತೆರಳುತ್ತಿದ್ದಾರೆ.

5 ತಾಲೂಕಿಗೆ ಓರ್ವ ಅಧಿಕಾರಿ
ಕಾರ್ಕಳದ ಜನತೆ ಏಕವಿನ್ಯಾಸ ನಕ್ಷೆ ಅನುಮೋದನೆಗಾಗಿ ದೂರದ ಕಾಪುವಿಗೆ ಅಲೆದಾಟ ಮಾಡಬೇಕಿದೆ. ಒಂದು ಕಡೆ ಪ್ರಾಧಿಕಾರದ ನಿಯಮದ ಕಿರಿಕಿರಿ. ಸರಕಾರಿ ಇಲಾಖೆಯಲ್ಲಿ ಸಾಮಾನ್ಯವಾಗಿ ಕಂಡುಬರುವಂತೆ ಇಂಟರ್‌ನೆಟ್‌ ಸಮಸ್ಯೆ, ಪ್ರಾಧಿಕಾರದ ಅಧಿಕಾರಿಗೆ ಬೆಂಗಳೂರು ಮೀಟಿಂಗ್‌, ಮದುವೆ ಕಾರ್ಯಕ್ರಮ, ಮತ್ತೊಂದು, ಮಗದೊಂದು ಸೇರಿದಾಗ ನಿಯಮದಂತೆ ಜನರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಅಲ್ಲದೇ ಓರ್ವ ಅಧಿಕಾರಿಗೆ 5 ತಾಲೂಕಿನ ಉಸ್ತುವಾರಿ ಇರುವ ಕಾರಣ ಸಾರ್ವಜನಿಕರು ವರ್ಷಾನುಗಟ್ಟಲೆ ಅಲೆಯುವಂತಾಗಿದೆ.
ಮುಷ್ತಾಫ್ ಜಾರ್ಕಳ







































error: Content is protected !!
Scroll to Top