ಮೌನಕ್ರಾಂತಿ ಮೂಲಕ ಸಮಾಜ ಸುಧಾರಣೆ ಮಾಡಿದ ಮಹಾನ್ ಚೇತನ – ಸುನಿಲ್ ಕುಮಾರ್
ಕಾರ್ಕಳ : ಸಂಘರ್ಷಕ್ಕೆ ಎಡೆಮಾಡಿಕೊಡದೆ ಮೌನಕ್ರಾಂತಿಯ ಮೂಲಕ ಸಮಾಜದಲ್ಲಿ ಬದಲಾವಣೆ ತಂದ ಮಹಾನ್ ಚೇತನ ನಾರಾಯಣ ಗುರುಗಳು ದೂರದೃಷ್ಟಿಯ ಕಲ್ಪನೆಯೊಂದಿಗೆ ಶಿಕ್ಷಣದ ಮಹತ್ವ ಸಾರಿದವರು. ಸಮಾಜದಲ್ಲಿನ ಮೌಢ್ಯಗಳನ್ನು ಹೋಗಾಲಾಡಿಸಲು ಜೀವನವನ್ನೇ ಮುಡಿಪಾಗಿಟ್ಟ ಗುರುಗಳ ಮೌಲ್ಯಗಳು ಎಂದಿಗೂ ಆದರ್ಶ ಎಂದು ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ಆ. 28 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮ ಸಮಾಜ ನಿರ್ಮಾಣ – ಅಜಿತ್ ಹೆಗ್ಡೆ ಮಾಳ
ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿ, ನಾರಾಯಣ ಗುರುಗಳು ಸಮ ಸಮಾಜ ನಿರ್ಮಾಣದೊಂದಿಗೆ ಸಮಾನತೆಯ ಬದುಕಿಗೆ ಅವಕಾಶ ಕಲ್ಪಿಸಿದ ಮಹಾನ್ ನಾಯಕ. ಅವರ ಆದರ್ಶ ತತ್ವಗಳು ಎಂದಿಗೂ ಮಾದರಿ ಎಂದರು.


ಮಾನವೀಯತೆಯ ಬೆಳಕು ನೀಡಿದ ದಾರ್ಶನಿಕ – ನಳಿನಿ
ಬ್ರಹ್ಮ ಶ್ರೀ ನಾರಾಯಣಗುರುಗಳ ಕುರಿತು ಉಪನ್ಯಾಸ ನೀಡಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಕಾರ್ಕಳ – ಹೆಬ್ರಿ ತಾಲೂಕು ಘಟಕದ ಅಧ್ಯಕ್ಷೆ ನಳಿನಿ, ಅಸ್ಪೃಶ್ಯತೆ, ಮೇಳು – ಕೀಳು, ಮೌಢ್ಯಗಳೇ ತುಂಬಿ ಹೋಗಿದ್ದ ಕಾಲಘಟ್ಟದಲ್ಲಿ ನಾರಾಯಣ ಗುರುಗಳು ಮಾನವೀಯತೆಯ ಸಂದೇಶದೊಂದಿಗೆ ಜಗತ್ತಿಗೆ ಬೆಳಕು ನೀಡಿದ ಮಹಾನ್ ದಾರ್ಶನಿಕ. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ವಿಶ್ವಮಾನವ ಸಂದೇಶದೊಂದಿಗೆ ಜಾತಿ ಸಂಕೋಲೆಯನ್ನು ಶಾಂತಿ ಮಂತ್ರದ ಮೂಲಕ ಹೊಗಲಾಡಿಸಿದ ವಿಶ್ವಗುರು ನಾರಾಯಣ ಗುರುಗಳ ತತ್ವಾದರ್ಶಗಳು ಎಂದಿಗೂ ಅನುಕರಣೀಯ ಎಂದು ಹೇಳಿದರು.
ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಪ್ರವೀಣ್ ಎಂ. ಸುವರ್ಣ ಮಾತನಾಡಿ, ನಾರಾಯಣ ಗುರುಗಳ ತತ್ವಾದರ್ಶಗಳು ಸಮಾಜಕ್ಕೆ ಸದಾ ದಾರಿದೀಪವಾಗಿವೆ. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸುವುದರೊಂದಿಗೆ ಅವರ ಆರಾಧನೆಯಾಗಲಿ ಎಂದು ಹೇಳಿದರು.
ತಹಶೀಲ್ದಾರ್ ಪ್ರದೀಪ್ ಆರ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ. ಪಂ. ಪ್ರಬಾರ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖಾ ಅಧಿಕಾರಿಗಳು, ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘ ಪದಾಧಿಕಾರಿಗಳು, ಯೂತ್ ಬಿಲ್ಲವ ರಿ. ಕಾರ್ಕಳ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಾಮ ಸಹಾಯಕ ಪ್ರಕಾಶ್ ಪ್ರಾರ್ಥಿಸಿದರು. ಕಂದಾಯ ನಿರೀಕ್ಷಕ ರಿಯಾಜ್ ಕಾರ್ಯಕ್ರಮ ನಿರೂಪಿಸಿ, ಉಪತಹಶೀಲ್ದಾರ್ ನಳಿನಿ ರೈ ವಂದಿಸಿದರು.





































