ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿ ಹೇಳಿದ, ಆ ಮೂಲಕ ಸಮಾಜದಲ್ಲಿ ಧರ್ಮ, ಜಾತಿ, ವರ್ಣದ ನೆಲೆಯಲ್ಲಿ ಆಗುತ್ತಿದ್ದ ತಾರತಮ್ಯಗಳನ್ನು ತೊಡೆದು ಹಾಕಲು ಜೀವಮಾನವಿಡೀ ಶ್ರಮಿಸಿದ ಸಂತ ಶ್ರೇಷ್ಠ ನಾರಾಯಣ ಗುರುಗಳು ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ನಾರಾಯಣ ಗುರುಗಳು ಸಮಾಜದಲ್ಲಿ ಮಡುಗಟ್ಟಿ ನಿಂತಿದ್ದ ಅಸ್ಪೃಶ್ಯತೆಯ ಪಿಡುಗನ್ನು ನಿವಾರಿಸಲು ತಮ್ಮದೇ ಆದ ರೀತಿಯಲ್ಲಿ ಪರಿಹಾರಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, ದೇಶಸೇವೆಯೇ ಈಶ ಸೇವೆಯೆಂದು.
ನಾರಾಯಣ ಗುರುಗಳು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದರೂ ಅವರು ಮಠಕ್ಕೆ ಸೀಮಿತರಾಗಿದ್ದ ಸನ್ಯಾಸಿಯಾಗಿರಲಿಲ್ಲ. 19ನೇ ಶತಮಾನದಲ್ಲಿ ಕೇರಳದ ಸಾಮಾಜಿಕ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿ ಬಡವರು, ಕೀಳು ಜಾತಿಯವರು, ಅಸ್ಪೃಶ್ಯರು ಎಂದು ಕರೆಸಿಕೊಳ್ಳುತ್ತಿದ್ದವರ ಪ್ರಾಣ ಹಿಂಡುತ್ತಿದ್ದ ಜಾತಿ ಮತ್ತು ವರ್ಣ ವ್ಯವಸ್ಥೆಯನ್ನು ಬುಡ ಸಹಿತ ಕಿತ್ತುಹಾಕಲು ಅವಿರತವಾಗಿ ಪ್ರಯತ್ನಿಸಿದ ಸಮಾಜ ಸುಧಾರಕರಾಗಿದ್ದರು. ವಿದ್ಯೆ ಮತ್ತು ಆತ್ಮಾಭಿಮಾನವೊಂದೇ ಜನರನ್ನು ಬಡತನದಿಂದ ಮತ್ತು ಜಾತಿ ವ್ಯವಸ್ಥೆಯಿಂದ ಹೊರತರಲು ಇರುವ ಮಾರ್ಗ ಎಂದು ಕಂಡುಕೊಂಡು ಆ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದವರು. ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಠರಾಗಿ ಎಂಬುದೇ ನಾರಾಯಣ ಗುರುಗಳು ನೀಡಿದ ಸಂದೇಶವಾಗಿತ್ತು. ಇದು ಇಂದಿಗೂ ಪರಮ ಸತ್ಯವಾಗಿ ಉಳಿದುಕೊಂಡಿದೆ ಎನ್ನುವುದು ವಿಶೇಷ.
ಜನರಲ್ಲಿರುವ ಮೂಢನಂಬಿಕೆ, ಅಜ್ಞಾನಗಳನ್ನು ಹೋಗಲಾಡಿಸಲು ನಾರಾಯಣ ಗುರುಗಳು ಹಲವಾರು ವಿದ್ಯಾಕೇಂದ್ರಗಳನ್ನು ಪ್ರಾರಂಭಿಸಿದರು. ಕೀಳ್ಜಾತಿಯ ಜನರ ಕಷ್ಟ ಪರಿಹಾರಕ್ಕಾಗಿ ಮೇಲ್ಜಾತಿಯವರ ವಿರುದ್ಧ ಶಾಂತಿಯ ಹೋರಾಟ ನಡೆಸಿದರು. ಮಾನವರೆಲ್ಲರೂ ಒಂದೇ ಎಂಬ ತತ್ವವನ್ನು ಜಗತ್ತಿಗೆ ಸಾರಿ ಸಾರಿ ಹೇಳಿದರು. ದೇವಸ್ಥಾನಗಳಿಗೆ ಕೆಳಜಾತಿಯವರಿಗೆ ಪ್ರವೇಶ ನಿರಾಕರಿಸಿದ್ದ ಸವರ್ಣೀಯ ವ್ಯವಸ್ಥೆಯನ್ನು ಖಂಡಿಸಿ ಹಿಂದುಳಿದ ವರ್ಗದವರಿಗೆ ತಾವೇ ದೇವಾಲಯಗಳನ್ನು ನಿರ್ಮಾಣ ಮಾಡಿಕೊಟ್ಟರು.
ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಶ್ರೀಲಂಕಾ ಮುಂತಾದ ಕಡೆ ಸಂಚಾರ ಮಾಡಿ ಜನರಿಗೆ ಭಕ್ತಿ ಮತ್ತು ಜ್ಞಾನದ ಹೊಸ ಮಾರ್ಗವನ್ನು ತೋರಿಸಿಕೊಟ್ಟರು. ಮಂಗಳೂರಿನ ಕುದ್ರೋಳಿಯಲ್ಲಿ ಸ್ಥಾಪಿಸಿದ ಶ್ರೀ ಗೋಕರ್ಣನಾಥೇಶ್ವರನ ಕ್ಷೇತ್ರವೂ ಸೇರಿ ಹಿಂದುಳಿದವರಿಗಾಗಿ ವಿವಿಧೆಡೆಗಳಲ್ಲಿ ಅವರು ಸ್ಥಾಪಿಸಿದ ದೇಗುಲಗಳ ಸಂಖ್ಯೆ 60ಕ್ಕೂ ಹೆಚ್ಚು.

ಕೇರಳ ಇಂದು ಶೇ.90ಕ್ಕೂ ಅಧಿಕ ಸಾಕ್ಷರತೆ ಸಾಧಿಸಿದ್ದರೆ ಅದರ ಹಿಂದೆ ಹಿಂದುಳಿದವರನ್ನು ವಿದ್ಯಾವಂತರನ್ನಾಗಿ ಮಾಡಲು ನಾರಾಯಣ ಗುರುಗಳು ಹಾಕಿದ ಶ್ರಮವೂ ಇದೆ. ನಾರಾಯಣ ಗುರುಗಳು ಪ್ರಾರಂಭಿಸಿದ ವಿದ್ಯಾಕೇಂದ್ರಗಳು ಕೇರಳದ ಜನರನ್ನು ವಿದ್ಯಾವಂತರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ನಾರಾಯಣ ಗುರುಗಳ ಪ್ರಕಾರ ದೇವಸ್ಥಾನ, ಮಠ, ಮಂದಿರಗಳು ಮಾನವೀಯ ಮೌಲ್ಯಗಳನ್ನು ಹೊಂದಿದ ಚಟುವಟಿಕೆಗಳ ಮೂಲಕ ಮನುಷ್ಯ ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಶ್ರೀಮಂತನಾಗಲು ಸ್ಫೂರ್ತಿ ಕೇಂದ್ರಗಳಾಗಬೇಕು. ಸಮಸ್ತ ಅಸ್ಪೃಶ್ಯ, ನಿಮ್ನ ವರ್ಗದವರನ್ನು ಎಲ್ಲ ಸ್ತರಗಳಲ್ಲಿ ಮೇಲೆ ತರಲು ಮಾಡಿದ ಗುರುಗಳ ಪ್ರಯತ್ನ ಅವರ ಬದುಕಿನ ಮಹತ್ಸಾಧನೆಯೇ ಆಗಿದೆ. ನಾರಾಯಣ ಗುರುಗಳ ಜೀವನ, ಸಂಘಟನೆಯ ಮೂಲಕ ಅವರು ಮಾಡಿದ ಕೆಲಸ ಮತ್ತು ಅವರು ಪ್ರತಿಪಾದಿಸಿದ ಸಾಮಾಜಿಕ ತತ್ವವನ್ನು ಅರ್ಥಮಾಡಿಕೊಳ್ಳುವುದು ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಈ ಕಾಲದಲ್ಲಿ, ನಮಗೆ ಗುರುಗಳ ‘ಮಾನವ ಧರ್ಮ ಮತ್ತು ಮಾನವ ಜಾತಿ’ ಎಂಬ ತತ್ವದ ಅವಶ್ಯಕತೆ ಬಹಳಷ್ಟಿದೆ.
ಥಿಯೋಸೊಫಿಕಲ್ ಸೊಸೈಟಿಯ ಅಧ್ಯಕ್ಷೆಯಾಗಿದ್ದ ಆನಿಬೆಸಂಟ್ ಅವರು ನಾರಾಯಣ ಗುರುಗಳ ಬಗ್ಗೆ ಹೀಗೆ ಬರೆದಿದ್ದಾರೆ- ʼನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪದೋಷಗಳಿರದ ಜನಪರ ಕಾಳಜಿ ಅವರಿಗೆ ಇತ್ತು. ಇತ್ತೀಚೆಗಿನ ಶತಮಾನದಲ್ಲಿ ಇಂತಹ ಗೌರವ, ಮಾನ್ಯತೆಗಳನ್ನು ಪಡೆದ ಸ್ವಾಮಿಗಳು ಯಾರೂ ಇರಲಿಲ್ಲ. ಯೋಗದಲ್ಲಿ ಅವರು ಪತಂಜಲಿ, ಜ್ಞಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲಿ ಏಸುಗಳೆಲ್ಲರಂತೆ ಇದ್ದರು. ಅವರೊಬ್ಬ ದೇವರ ಅವತಾರವೇ ಆಗಿದ್ದರು. ಭವಿಷ್ಯದಲ್ಲಿ ಅವರನ್ನು ದೇವರೆಂದು ಆರಾಧಿಸುವರುʼ.
ಆನಿಬೆಸೆಂಟ್ ಹೇಳಿದ ಮಾತು ಈಗ ಅಕ್ಷರಶಃ ಸತ್ಯವಾಗಿದೆ. ನಾರಾಯಣ ಗುರುಗಳು ಈಗ ಸಮಸ್ತ ಭಾರತೀಯರ ಪಾಲಿನ ದೇವರಾಗಿದ್ದಾರೆ. ನಾರಾಯಣ ಗುರುಗಳನ್ನು ಒಂದು ನಿರ್ದಿಷ್ಟ ಜಾತಿಯ ಗುರುವೆಂದು ಭಾವಿಸುವುದು ಸಂಕುಚಿತ ಮನೋಭಾವದ ಪ್ರತೀಕವೆನಿಸುತ್ತದೆ.
ಮಹಾನ್ ಸಾಮಾಜಿಕ ಕ್ರಾಂತಿಕಾರಿ ನಾರಾಯಣ ಗುರು ಅವರ ಸಂಸ್ಮರಣೆಯ ದಿನದಂದು ಆ ಮಹಾನ್ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನ.



















