ಸಿ.ಎಸ್. ಅಂತಿಮ ಫಲಿತಾಂಶದಲ್ಲಿ ತೇರ್ಗಡೆ
ಕಾರ್ಕಳ : ದೇಶದಲ್ಲಿ ಅತ್ಯಂತ ಉನ್ನತ ಸಂಸ್ಥೆಯಾಗಿರುವ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿಸ್ ಆಫ್ ಇಂಡಿಯಾ ಇವರು ನಡೆಸುವ ಪ್ರತಿಷ್ಠಿತ ಸಿ.ಎಸ್. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಕಾರ್ಕಳ ತಾಲೂಕಿನ ಮಿಯಾರು ಕುಂಟಿಬೈಲು ನಿವಾಸಿಯಾಗಿರುವ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಶಾಂತ್ ಶೆಟ್ಟಿ ಹಾಗೂ ಗೇರು ಬೀಜ ಫ್ಯಾಕ್ಟ್ರಿಯಲ್ಲಿ ದುಡಿಯುತ್ತಿರುವ ಶರ್ಮಿಳಾ ದಂಪತಿಯ ಪುತ್ರಿ ಶ್ರೀಜ ಶೆಟ್ಟಿಯವರು ಅಭೂತ ಪೂರ್ವ ಸಾಧನೆಗೈದಿದ್ದಾರೆ.
ಶ್ರೀಜಾ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿ, ಪದವಿ ಪೂರ್ವ ಶಿಕ್ಷಣವನ್ನು ಗಣಿತ ನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿ, 585 ಅಂಕದೊಂದಿಗೆ 97.5% ಫಲಿತಾಂಶವನ್ನು ತನ್ನದಾಗಿಸಿಕೊಂಡಿದ್ದರು. ತದನಂತರ ಉಡುಪಿಯ ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪೂರೈಸಿರುತ್ತಾರೆ.

ಸಾಮಾನ್ಯ ಕುಟುಂಬದ ಹಿನ್ನಲೆಯಿಂದ ಬಂದ ಇವರು ಇಂದು ದೃಢ ಸಂಕಲ್ಪ, ಪರಿಶ್ರಮ ಮತ್ತು ಛಲದಿಂದ ಸಿ.ಎಸ್. ಅಂತಿಮ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.
ಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಬಹುರಾಷ್ಟ್ರೀಯ ಕಂಪೆನಿಗಳ ಸಿ.ಇ.ಒ ಮತ್ತು ಉನ್ನತ ಹುದ್ದೆಗಳಿಗೆ ಉತ್ತಮ ಅವಕಾಶ ಇರುತ್ತದೆ. ಈ ಪರೀಕ್ಷೆಯಲ್ಲಿ ಮೂರು ಹಂತಗಳಿದ್ದು. ಮೊದಲ ಹಂತದಲ್ಲಿ ಸಿ.ಎಸ್.ಇ.ಇ.ಟಿ., ಎರಡನೇ ಹಂತದಲ್ಲಿ ಸಿ.ಎಸ್. ಎಕ್ಸಿಕ್ಯೂಟಿವ್ ಮತ್ತು ಅಂತಿಮ ಹಂತದಲ್ಲಿ ಸಿ.ಎಸ್. ಪ್ರೊಫೆಶನಲ್ ಪರೀಕ್ಷೆಗಳಿದ್ದು, ಪ್ರತೀ ಪತ್ರಿಕೆಯೂ ಶೇ.40ರಷ್ಟು ಕನಿಷ್ಟ ಅಂಕ ಹಾಗೂ ಒಟ್ಟಾರೆ ಶೇ 50ರಷ್ಟು ಅಂಕವನ್ನು ಪಡೆಯಬೇಕಾಗುತ್ತದೆ.



















