ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಸಾಣೂರು ಇವರ ಸಹಯೋಗದಲ್ಲಿ 22 ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ರಚನಾ ಕಮ್ಮಟ ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಮಹತ್ವವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ, ನಮ್ಮಲ್ಲಿ ಹೆಚ್ಚು ಹೆಚ್ಚು ಸಾಹಿತಿಗಳು ನಿರ್ಮಾಣವಾಗಬೇಕು, ಪುಸ್ತಕಗಳ ಪ್ರಕಟಣೆ ಹೆಚ್ಚಾಗಬೇಕು. ನಮ್ಮ ನೆಲದಲ್ಲಿ ಹೆಚ್ಚು ಹೆಚ್ಚು ಕವಿಗಳು ಹಾಗೂ ಲೇಖಕರು ಹುಟ್ಟಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಬೇಲಾಡಿ ವಿಠಲ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯದ ಮಹತ್ವವನ್ನು ವಿವರಿಸಿದರು. ಕನ್ನಡದಲ್ಲಿ ಬಹುದೊಡ್ಡ ಸಂಸ್ಕೃತಿ ಇದೆ. ಕನ್ನಡ ಮಣ್ಣಿನಲ್ಲಿ ಹುಟ್ಟಬೇಕಾದರೆ ನಾವು ಪುಣ್ಯ ಮಾಡಿರಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಕನ್ನಡ ಸಾಹಿತ್ಯ ನಮ್ಮ ಅವಿಭಾಜ್ಯ ಅಂಗ. ರಾಷ್ಟ್ರೀಯತೆಯ ಬಗ್ಗೆ ತಿಳಿದುಕೊಳ್ಳುವವರು ಸಾಹಿತ್ಯದ ದರ್ಶನವನ್ನು ಮಾಡಿರಬೇಕು. ಸಾಹಿತ್ಯವು ಎಲ್ಲರನ್ನೂ ಒಂದುಗೂಡಿಸುವಂಥದ್ದು, ವಿಭಜನೆ ಮಾಡುವಂಥದ್ದಲ್ಲ. ತಾಲೂಕಿನಲ್ಲಿ ಸಾಹಿತ್ಯದ ಕಂಪನ್ನು ಪಸರಿಸುವ ಕಾರ್ಯವನ್ನು ಈ ಸಮ್ಮೇಳನ ಮಾಡಬೇಕು ಎಂದು ಆಶಿಸಿದರು.
ಯಕ್ಷಗಾನ ಕಲಾರಂಗ, ಕಾರ್ಕಳ ಇದರ ಅಧ್ಯಕ್ಷ ವಿಜಯ ಶೆಟ್ಟಿ ಅವರು ಮಾತನಾಡಿ, ಕನ್ನಡದಲ್ಲಿ ಹೊಸ ಹೊಸ ಸಾಹಿತಿಗಳು ಹುಟ್ಟಬೇಕು ಹಾಗೂ ಕನ್ನಡ ಸಾಹಿತ್ಯ ಮತ್ತಷ್ಟು ಬೆಳೆಯಬೇಕು ಎಂದು ಹೇಳಿದರು.
ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಪ್ರಣವ್ ಭಟ್, ಆಡಳಿತ ಅಧಿಕಾರಿ ದೀಪು ಶೆಟ್ಟಿ, ಕಸಾಪ ಜಿಲ್ಲಾ ಪ್ರತಿನಿಧಿ ಎಸ್. ನಿತ್ಯಾನಂದ ಪೈ ಹಾಗೂ ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲರಾದ ಡಾ. ರಶ್ಮಿ ರಾಜ್ ಉಪಸ್ಥಿತರಿದ್ದರು.
ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಾದ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ವಿವಿಧ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಿಭಾಗದ ಆಸಕ್ತರಿಗೆ ಆಶು ಕವಿತೆ, ಆಶು ಕಥೆ ಮತ್ತು ಚಿತ್ರಕಲಾ ಸ್ಪರ್ಧೆಗಳ ರಚನಾ ಕಮ್ಮಟವನ್ನು ಆಯೋಜಿಸಲಾಯಿತು. ಕಮ್ಮಟದ ಬಳಿಕ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಶಿಕ್ಷಕರು, ಶಿಕ್ಷಕೇತರ ವೃಂದ, ಪೋಷಕರು, ವಿದ್ಯಾರ್ಥಿಗಳು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾಲೋಚನಾ ಸಭೆಯನ್ನೂ ನಡೆಸಲಾಯಿತು. ಸಮ್ಮೇಳನದ ಮುಂದಿನ ಕಾರ್ಯಕ್ರಮಗಳು, ಸಾಹಿತ್ಯ ಚಟುವಟಿಕೆಗಳ ವಿಸ್ತರಣೆ ಹಾಗೂ ತಾಲೂಕಿನಲ್ಲಿ ಕನ್ನಡ ಸಾಹಿತ್ಯದ ಕಂಪನ್ನು ಪಸರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಗೌರವ ಕಾರ್ಯದರ್ಶಿ ದೇವದಾಸ್ ಕೆರೆಮನೆ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಹೊಸ ತಲೆಮಾರಿನಲ್ಲಿ ಆಸಕ್ತಿ ಮೂಡಿಸುವುದರ ಜೊತೆಗೆ, ಹೊಸ ಸಾಹಿತಿಗಳು ಮತ್ತು ಕಲಾವಿದರಿಗೆ ವೇದಿಕೆ ಕಲ್ಪಿಸುವಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ರಚನಾ ಕಮ್ಮಟ ಮತ್ತು ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸಿತು.
ಅಂಬರೀಶ್ ಭಾರದ್ವಾಜ್ ಪ್ರಾರ್ಥಿಸಿದರು. ಪರಿಷತ್ ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರ್ವಹಿಸಿದರು. ಕನ್ನಡ ಉಪನ್ಯಾಸಕಿ ಮಮತಾ ಧನ್ಯವಾದ ಸಮರ್ಪಿಸಿದರು.























