ಕಲೆ ಮತ್ತು ವಿಜ್ಞಾನ ಒಂದೇ ನಾಣ್ಯದ ಮುಖಗಳು: ದೀಪಾ ಫಡ್ಕೆ

ಕಾರ್ಕಳ: ಕಲೆ ಮತ್ತು ವಿಜ್ಞಾನ ಎರಡೂ ಒಂದೇ ನಾಣ್ಯದ ಮುಖವಾಗಿದ್ದು, ಇವುಗಳ ಮಧ್ಯೆ ಹೆಚ್ಚು ವ್ಯತ್ಯಾಸ ಇಲ್ಲ. ಎರಡೂ ಶೋಧನೆಯ ಮಾರ್ಗಗಳಾಗಿದೆ ಎಂದು ಹಿರಿಯ ಲೇಖಕಿ ದೀಪಾ ಫಡ್ಕೆ ತಿಳಿಸಿದರು.

ಕಾರ್ಕಳದ ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದ ವಿದುಷಿ ವರ್ಷಾ ಕಾಕತ್ಕರ್ ಅವರ ರಂಗಪ್ರವೇಶ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಲೆ ಮತ್ತು ವಿಜ್ಞಾನ ಎರಡೂ ಮನುಷ್ಯ ನನ್ನು ಹೆಚ್ಚು ಯೋಚನೆಗೆ ಒಳಪಡಿಸುತ್ತವೆ. ಸಾವಿರಾರು ವರ್ಷಗಳಿಂದ ಇದು ದೃಢಪಟ್ಟಿದ್ದು, ಅನೇಕ ದೇವಾಲಯಗಳ ವಾಸ್ತುಶಿಲ್ಪಗಳಲ್ಲಿ ಕಲೆ ಮತ್ತು ವಿಜ್ಞಾನ ಸಂಯೋಜನೆಗೊಂಡು ಒಟ್ಟಿಗೆ ಹೆಜ್ಜೆ ಇಟ್ಟಿರುವುದನ್ನು ಗಮನಿಸಬಹುದಾಗಿದೆ. ವಿಜ್ಞಾನ ಎನ್ನುವುದು ನಮ್ಮನ್ನು ನಾಗರಿಕತೆಯ ಸೌಲಭ್ಯಗಳಿಗೆ ತೆರೆದಿಟ್ಟರೆ, ಕಲೆ ನಮ್ಮ ಒಳಗಿನ ಅಂತರಂಗದ ಭಾವನೆಗಳಿಗೆ ಶಕ್ತಿ, ಸಾಂತ್ವನ ತುಂಬುತ್ತದೆ ಎಂದು ವಿಶ್ಲೇಷಿಸಿದರು.

ಕಲೆ ಮತ್ತು ವಿಜ್ಞಾನ ಮಾನವನ ಭೌತಿಕ ವಿಕಾಸಕ್ಕೆ ಹಿಡಿದ ಕನ್ನಡಿ. ಕಲೆ ಎಂದರೆ ಕೇವಲ ಕುಣಿತವಲ್ಲ. ಕಲೆ ಕಲಾವಿದ ಸಹೃದಯರ ಒಂದು ಬೆಸುಗೆ. ಹೀಗಾಗಿ ಕಲಾವಿದರನ್ನು ಗಂಧರ್ವರು ಎಂದು ಕರೆಯುತ್ತಾರೆ. ಕಲೆಗೆ ಸಾಂತ್ವನ, ನೆಮ್ಮದಿ ನೀಡುವ ಶಕ್ತಿ ಇದ್ದು, ಪ್ರೇಕ್ಷಕನನ್ನು ಹಿಡಿದಿಟ್ಟು ಧನ್ಯತೆ ಮೂಡಿಸುವುದೇ ಕಲೆಗಾರನ ದೊಡ್ಡ ಜವಾಬ್ದಾರಿ ಎಂದು ತಿಳಿಸಿದರು.

ಇಂದು ಡ್ಯಾನ್ಸ್ ಕಲಿಕೆ,ರಂಗಪ್ರವೇಶ ಸೇರಿದಂತೆ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ಗಮನಿಸಿದಾಗ ಸ್ವತಂತ್ರ ಭಾರತದಲ್ಲಿ ಎಲ್ಲವೂ ಬದಲಾಗುತ್ತಿರುವುದನ್ನು ಕಾಣಬಹುದಾಗಿದೆ ಹಿಂದೆ ಹೇಗಿತ್ತು , ಇಂದು ಹೇಗಿದೆ ಎಂದು ಅವಲೋಕಿಸಿದಾಗ ಅದಕ್ಕೆ ಮುಖ್ಯ ಕಾರಣ ಶಿಕ್ಷಣ ಎನ್ನುವುದು ಅರ್ಥವಾಗುತ್ತದೆ. ಇಂದು ನಮ್ಮ ಮಕ್ಕಳು ಡ್ಯಾನ್ಸ್, ರಂಗಪ್ರವೇಶ ಎಲ್ಲದನ್ನು ಕಲಿಯುತ್ತಿದ್ದಾರೆ. ಡ್ಯಾನ್ಸ್ ಅಂದರೆ ಕುಣಿತವೇ?, ಕಸರತ್ತೇ? ಟಿ.ವಿ. ಮಾಧ್ಯಮದಲ್ಲಿ ಬರುತ್ತಿರುವುದು ಸರಿಯಾಗಿದೆಯೇ ಎಂದು ಪ್ರಶ್ನಿಸಿ ಗಮನಿಸಿದಾಗ ಎಲ್ಲವೂ ಒಂದು ರೀತಿಯ ವಿದ್ಯಾಭ್ಯಾಸ‌ ಎನ್ನುವುದು ದೃಢವಾಗುತ್ತದೆ ಎಂದು ಹೇಳಿದರು. ಹೆಣ್ಣು, ಗಂಡು ಜಾತಿ ಮತ ಪಂಥ ಎಲ್ಲದನ್ನು ಬದಿಗಿಟ್ಟು ಕಲಿಯಲು ಮುಕ್ತ ಅವಕಾಶ ಇರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಕಲಿತದ್ದನ್ನು ಸಾದರಪಡಿಸುವ ಅವಕಾಶಗಳ ಜೊತೆಗೆ ಅದರ ಅವಲೋಕನವು ಮುಖ್ಯ. ಶಿಕ್ಷಣ ಎಂದರೆ ನಾಗರಿಕ ಸಮಾಜಕ್ಕೆ ನಮ್ಮನ್ನು ಒಪ್ಪಿಸುವ ಪ್ರಬಲ ಮಾಧ್ಯಮವಾದರೆ, ಕಲೆ ಮನುಷ್ಯನನ್ನು ಸುಸಂಸ್ಕೃತಗೊಳಿಸುವ ಉನ್ನತ ಮಾಧ್ಯಮ. ಕಲೆಯ ಉದ್ದೇಶವೇನು, ಅದಕ್ಕೆ ಜವಾಬ್ದಾರಿಗಳು ಇದೆಯಾ ಎನ್ನುವ ಪ್ರಶ್ನೆಯೂ ಮೂಡುತ್ತದೆ ಎಂದರು.

ವಿದುಷಿ ವರ್ಷಾ ಕಾಕತ್ಕರ್ ಮಾತನಾಡಿ, ನೃತ್ಯ ಕ್ಷೇತ್ರದಲ್ಲಿ ನಡೆಸಿದ ಪಯಣವನ್ನು ತೆರೆದಿಟ್ಟು ಗುರುಗಳು, ಪೋಷಕರು ಹಾಗೂ ವಿಶೇಷವಾಗಿ ಪತಿ ಚಿದಾನಂದ ನೀಡಿದ ಸಲಹೆ ಸಹಕಾರ ಮಾರ್ಗದರ್ಶನವನ್ನು ವಿವರಿಸಿದರು.

ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಅವರಿಗೆ ಗುರುಕಾಣಿಕೆ ಸಲ್ಲಿಸಿದ ಸನ್ನಿವೇಶ ಭಾವುಕ-ಹೃದಯಸ್ಪರ್ಶಿ ಕ್ಷಣಗಳಿಗೆ ಸಾಕ್ಷಿ ಆಯಿತು.

ವೇದಿಕೆಯಲ್ಲಿ ಸನಾತನ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ್ ಶೆಟ್ಟಿ, ವರ್ಷಾ ಅವರ ತಂದೆ ವಿಶ್ವನಾಥ್ ಕಾಕತ್ಕರ್, ತಾಯಿ ಊರ್ಮಿಳಾ ಕಾಕತ್ಕರ್, ಮಾವ ಶಂಕರ, ಅತ್ತೆ ಚಂದ್ರಕಲಾ ಉಪಸ್ಥಿತರಿದ್ದರು.

ಪದ್ಮನಾಭ ಮರಾಠೆಯವರ ವೇದಘೋಷ, ದೀಪ ಬೆಳಗಿಸುವ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಪುಷ್ಪಾಂಜಲಿ, ಗಣಪತಿ ಕೌತುವಂ, ಶಿವ ನಾಮಾಮೃತ, ಪದವರ್ಣ, ದೇವರ ನಾಮ, ತಿಲ್ಲಾನ ನೃತ್ಯ ಪ್ರದರ್ಶನ ಸುಮಾರು 2 ಗಂಟೆಗಳ ಕಾಲ ಪ್ರೇಕ್ಷಕರನ್ನು ಸೆರೆ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಹಲವು ವರ್ಷಗಳ ಬಳಿಕ ಕಾರ್ಕಳದಲ್ಲಿ ನಡೆದ ರಂಗಪ್ರವೇಶ ಇದಾಗಿದ್ದು ಹೆಚ್ಚಿನ ಸಂಖ್ಯೆಯ ಕಲಾ ಪ್ರೇಮಿಗಳ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿತು.

ನಟುವಾಂಗಂ :ಕರ್ನಾಟಕ ಕಲಾ ವಿದುಷಿ ಶಾರದಾ ಮಣಿ ಶೇಖರ್, ಕೊಳಲು : ಡಾ. ವಿನೀತ್ ಪುರವಂಕರ್ , ಮೃದಂಗ: ವಿಕ್ರಂ ಭಾರದ್ವಾಜ್, ಕೊಳಲು: ಕೆ. ಮುರಳಿಧರ್ ಉಡುಪಿ, ಮೋರ್ ಸಿಂಗ್: ಎಂ. ಸುಧಾಮ ಆಚಾರ್ಯ ನಡೆಸಿಕೊಟ್ಟರು.

ಮಂಜುಳಾ ಸುಬ್ರಮಣ್ಯ ನಿರೂಪಿಸಿದರು.















































error: Content is protected !!
Scroll to Top