ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಅಂಬಿಕಾ ಎನ್. ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ.
ಅಂಬಿಕಾ ಅವರು ಎ.ಜೆ. ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಶಾಂತಾ ಕುಮಾರಿ ಕೆ. ಅವರ ಮಾರ್ಗದರ್ಶನದಲ್ಲಿ ನಡೆಸಿದ ಸಂಶೋಧನೆ ಮತ್ತು ಮಹಾಪ್ರಬಂಧ “ಕಾಂಟ್ರಿಬ್ಯುಶನ್ಸ್ ಟು ದ ಥಿಯರಿ ಆಫ್ ಜನರಲೈಸ್ಡ್ ಹೈಪೆರ್ ಜಿಯೋಮೆಟ್ರಿಕ್ ಫಂಕ್ಷನ್ ವಿದ್ ದೆಯರ್ ಅಪ್ಲಿಕೇಷನ್ಸ್” ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು ಪಿಎಚ್‌ಡಿ ಪದವಿಯನ್ನು ಘೋಷಿಸಿದೆ.
ಅಂಬಿಕಾ ಅವರು ಮುಂಡೋಳಿ ದಿ. ನಾರಾಯಣ ಶರ್ಮ ಮತ್ತು ದಿ. ಶಶಿಕಲಾ ದಂಪತಿ ಪುತ್ರಿ. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಕೆದುಕೋಡಿ ರಾಜೇಂದ್ರ ರಾವ್ ಕೆ. ಅವರ ಪತ್ನಿ.
























