ಆರೋಗ್ಯವೇ ಭಾಗ್ಯ

“ಶರೀರಮಾದ್ಯಂ ಖಲು ಧರ್ಮ ಸಾಧನಂ”
ಅಂದರೆ, ಎಲ್ಲಾ ಧರ್ಮ, ಕರ್ತವ್ಯ ಮತ್ತು ಸುಖಗಳನ್ನು ಪಡೆಯಲು ಮೊದಲು ಬೇಕಾಗಿರುವುದು ಆರೋಗ್ಯಕರ ಶರೀರ. ಹಣವಿದ್ದರೂ, ಮನೆ ಇದ್ದರೂ, ವಿದ್ಯೆ ಇದ್ದರೂ ಆರೋಗ್ಯ ಇಲ್ಲದಿದ್ದರೆ ಜೀವನದಲ್ಲಿ ಸುಖವೇ ಇರುವುದಿಲ್ಲ. ಅದಕ್ಕಾಗಿಯೇ ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂದು ಹೇಳಿದ್ದಾರೆ.

ಆರೋಗ್ಯ ಎಂದರೇನು?
ಆಯುರ್ವೇದದ ಪ್ರಕಾರ ಆರೋಗ್ಯ ಎಂದರೆ ಕೇವಲ ರೋಗ ಇಲ್ಲದಿರುವುದು ಮಾತ್ರವಲ್ಲ.
ಸಮದೋಷಃ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ | ಪ್ರಸನ್ನಾತ್ಮೇಂದ್ರಿಯ ಮನಃ ಸ್ವಸ್ಥ ಇತ್ಯಭಿಧೀಯತೇ ||

ಅಂದರೆ, ತ್ರಿದೋಷಗಳು ಸಮತೋಲನದಲ್ಲಿದ್ದು, ಜಠರಾಗ್ನಿ ಸರಿಯಾಗಿದ್ದು, ಏಳು ಧಾತುಗಳು ಮತ್ತು ಮಲಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮನಸ್ಸು, ಇಂದ್ರಿಯಗಳು ಮತ್ತು ಆತ್ಮ ಪ್ರಸನ್ನವಾಗಿದ್ದರೆ ಅವನೇ ಸ್ವಸ್ಥ. ಇದು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮೂರು ಕೂಡಿ ಆರೋಗ್ಯ ಎಂದು ತಿಳಿಸಿದ್ದರೆ.
ಆರೋಗ್ಯ ಏಕೆ ಮುಖ್ಯ?

  1. ಸುಖಕ್ಕೆ ಮೂಲ- ಚಿಕ್ಕ ನೋವು ಬಂದರೂ ನಮಗೆ ಊಟ ನಿದ್ದೆ ಹಾಳಾಗುತ್ತದೆ. ಹಾಗಾದರೆ ದೊಡ್ಡ ರೋಗ ಬಂದರೆ? ಆರೋಗ್ಯ ಇದ್ದರೆ ಮಾತ್ರ ನಾವು ನಮ್ಮ ಕುಟುಂಬ, ಕೆಲಸ, ಸ್ನೇಹಿತರೊಂದಿಗೆ ನಿಜವಾದ ಸುಖ ಅನುಭವಿಸಬಹುದು.
  2. ಕೆಲಸ ಮತ್ತು ಸಾಧನೆಗೆ ಶಕ್ತಿ ನೀಡುತ್ತದೆ. ವಿದ್ಯಾರ್ಥಿಯಾಗಿರಲಿ, ಕೆಲಸಗಾರನಾಗಿರಲಿ, ಕ್ರೀಡಾಪಟುವಾಗಿರಲಿ – ಶಕ್ತಿ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ.
  3. ಮಾನಸಿಕ ಶಾಂತಿಗೆ ಇದು ಅಗತ್ಯ. ಅನಾರೋಗ್ಯ ಬಂದಾಗ ಚಿಂತೆ, ಆತಂಕ, ಕೋಪ ಎಲ್ಲವೂ ಬರುತ್ತದೆ. ಆರೋಗ್ಯವಾಗಿದ್ದಾಗ ಮನಸ್ಸು ಶಾಂತವಾಗಿರುತ್ತದೆ ಮತ್ತು ಸಕಾರಾತ್ಮಕವಾಗಿ ಯೋಚಿಸಲು ಸಾಧ್ಯವಾಗುತ್ತದೆ.
  4. ಹಣ ಉಳಿತಾಯವಾಗುತ್ತದೆ. ರೋಗ ಬರದಂತೆ ತಡೆದರೆ ಲಕ್ಷ ಲಕ್ಷ ರೂಪಾಯಿ ಆಸ್ಪತ್ರೆ ಖರ್ಚು ತಪ್ಪುತ್ತದೆ. ತಡೆಗಟ್ಟುವುದೇ ಅತ್ಯಂತ ಅಗ್ಗದ ಚಿಕಿತ್ಸೆ. Prevention is always better than cure.

ಆರೋಗ್ಯವನ್ನು ಕಾಪಾಡಿಕೊಳ್ಳುವ ಉಪಾಯಗಳು ಹೀಗಿವೆ.

  1. ದಿನಚರ್ಯಾ ಪಾಲನೆ.
    ಬೇಗ ಏಳುವುದು, ಸಮಯಕ್ಕೆ ಊಟ, ಸಮಯಕ್ಕೆ ನಿದ್ರೆ. ರಾತ್ರಿ 10 ರೊಳಗೆ ಮಲಗಿ ಬೆಳಗ್ಗೆ 6 ರೊಳಗೆ ಏಳುವುದು. ಇದು ವಾತ-ಪಿತ್ತ-ಕಫವನ್ನು ಸಮತೋಲನದಲ್ಲಿಡುತ್ತದೆ. ಉಗುರು ಬೆಚ್ಚಗಿನ ನೀರು ಕುಡಿಯುವುದು ಜೀರ್ಣಶಕ್ತಿಗೆ ಅಮೃತ.
  2. ಆಹಾರವೇ ಔಷಧಿ.
    ಹಸಿವಾದಾಗ ಮಾತ್ರ ತಿನ್ನಿ. ಅತಿಯಾಗಿ ತಿನ್ನಬೇಡಿ. ತಾಜಾ, ಮನೆಯ ಆಹಾರ ತಿನ್ನಿ. ಫಾಸ್ಟ್ ಫುಡ್, ಪ್ಯಾಕೆಟ್ ಫುಡ್, ತಣ್ಣನೆಯ ಪಾನೀಯ ಕಡಿಮೆ ಮಾಡಿ.
    ಮಧ್ಯಾಹ್ನ 12-2 ರ ನಡುವೆ ಊಟ ಮಾಡಿ. ರಾತ್ರಿಯ ಆಹಾರ ಮಿತವಾಗಿರಲಿ. ಹಾಲು ಮತ್ತು ಹುಳಿ, ಮೀನು ಮತ್ತು ಮೊಸರನ್ನು ಒಟ್ಟಿಗೆ ಬೆರೆಸಬೇಡಿ. ವಿರುದ್ಧ ಆಹಾರವನ್ನು ಸೇವಿಸಬೇಡಿ.
  3. ವ್ಯಾಯಾಮ ಮತ್ತು ವಿಶ್ರಾಂತಿ ಅಗತ್ಯ.
    ದಿನಕ್ಕೆ 30-45 ನಿಮಿಷ ನಡಿಗೆ, ಯೋಗ ಅಥವಾ ಆಟ ಆಡಿ. ಆದರೆ ಅರ್ಧ ಶಕ್ತಿಯಷ್ಟು ಮಾತ್ರ. ಅತಿಯಾದರೆ ವಾತ ಹೆಚ್ಚುತ್ತದೆ. ರಾತ್ರಿ 7-8 ಗಂಟೆ ಗಾಢ ನಿದ್ರೆ ಅತ್ಯವಶ್ಯಕ. ನಿದ್ದೆಯಿಂದ ನಮ್ಮ ದೇಹ ಮತ್ತು ಮನಸ್ಸು ಉಲ್ಲಾಸದಿಂದಿರುತ್ತದೆ.

4.ಮನಸ್ಸಿನ ಆರೋಗ್ಯ ಬಹಳ ಮುಖ್ಯ.
ಆಯುರ್ವೇದದಲ್ಲಿ ಶರೀರದ ಜೊತೆ ಮನಸ್ಸಿಗೂ ಸಮಾನ ಮಹತ್ವ ನೀಡಿದೆ. ದಿನಕ್ಕೆ 10 ನಿಮಿಷ ಧ್ಯಾನ, ಪ್ರಾರ್ಥನೆ ಅಥವಾ ಇಷ್ಟವಾದ ಹಾಡು ಕೇಳಿ. ಕೋಪ, ಅಸೂಯೆ, ದ್ವೇಷ ಇವು ದೇಹದಲ್ಲಿ ವಿಷವನ್ನು ಉತ್ಪತ್ತಿ ಮಾಡುತ್ತವೆ. ಸಂತೋಷ, ಕೃತಜ್ಞತೆ ಮತ್ತು ಪ್ರೀತಿ ಇರುವಲ್ಲಿ ರೋಗಗಳು ಕಡಿಮೆ.

5. ಋತುಚರ್ಯಾ ಪಾಲನೆ.
ಆಯುರ್ವೇದದಲ್ಲಿ ಹೇಳಿರುವಂತಹ ಋತುಗಳ ತಕ್ಕಂತೆ ಆಹಾರ ವಿಹಾರ ಪಾಲಿಸಿ. ಬೇಸಿಗೆಯಲ್ಲಿ ತಂಪಾದ ಆಹಾರ, ಚಳಿಗಾಲದಲ್ಲಿ ಬಿಸಿ ಆಹಾರ, ಮಳೆಗಾಲದಲ್ಲಿ ಜೀರ್ಣಕ್ಕೆ ಸುಲಭವಾದ ಆಹಾರ. ಪ್ರಕೃತಿಯ ಜೊತೆ ಹೊಂದಿಕೊಂಡು ಬದುಕಿದರೆ ರೋಗಗಳು ಹತ್ತಿರವೂ ಬರುವುದಿಲ್ಲ.

    ಇಂದಿನ ಜೀವನಶೈಲಿ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತಿದೆ. ಮೊಬೈಲ್, ಟಿವಿ, ಜಂಕ್ ಫುಡ್, ಕೆಲಸದ ಒತ್ತಡ, ನಿದ್ರಾಹೀನತೆ – ಇವೆಲ್ಲವೂ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತಿವೆ. ಡಯಾಬಿಟಿಸ್, ಬಿಪಿ, ಸ್ಥೂಲಕಾಯ, ಖಿನ್ನತೆ – ಇವೆಲ್ಲ 20-30 ವರ್ಷದವರಲ್ಲೂ ಕಾಣಿಸುತ್ತಿವೆ.

    ಆದರೆ ಭಯಪಡುವ ಅಗತ್ಯವಿಲ್ಲ. ಸಣ್ಣ ಬದಲಾವಣೆಯಿಂದ ಶುರು ಮಾಡಿ.

    1. ಮೊಬೈಲ್ ಅನ್ನು ಮಲಗುವ ಒಂದು ಗಂಟೆ ಮೊದಲು ದೂರ ಇಡಿ.
    2. ದಿನಕ್ಕೆ ಒಂದು ಲೀಟರ್ ನೀರು ಕುಡಿಯಿರಿ.
    3. ವಾರಕ್ಕೆ ಐದು ದಿನ ಮೂವತ್ತು ನಿಮಿಷ ನಡೆಯಿರಿ.
    4. ವಾರದಲ್ಲಿ ಒಂದು ದಿನ ಮಾತ್ರ ಹೊರಗಿನ ಆಹಾರ ಸೇವಿಸಿ.

    ಹಣ ಹೋದರೆ ಸಂಪಾದಿಸಬಹುದು. ಮನೆ ಕಳೆದುಕೊಂಡರೆ ಮತ್ತೆ ಕಟ್ಟಬಹುದು. ಆದರೆ ಹೋದ ಆರೋಗ್ಯ ಮತ್ತೆ ಬರುವುದು ಕಷ್ಟ. ಆರೋಗ್ಯವೇ ಭಾಗ್ಯ ಎಂಬುದು ಕೇವಲ ಗಾದೆಯಲ್ಲ, ಇದು ಜೀವನದ ಸತ್ಯ.

    ಆರೋಗ್ಯ ಇದ್ದರೆ ನಾವು ನಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಕುಟುಂಬವನ್ನು ನೋಡಿಕೊಳ್ಳಬಹುದು. ದೇಶಕ್ಕೆ ಸೇವೆ ಮಾಡಬಹುದು. ರೋಗ ಬಂದ ಮೇಲೆ ಅಳುವುದಕ್ಕಿಂತ, ಬರದಂತೆ ನೋಡಿಕೊಳ್ಳುವುದೇ ಬುದ್ಧಿವಂತಿಕೆ.







































    error: Content is protected !!
    Scroll to Top