ವಿದ್ಯಾರ್ಥಿಗಳ ಹಿತದೃಷಿಯಿಂದ

ನಮ್ಮ ಪ್ರತಿಭಟನೆ ಹಕ್ಕುಗಳಿಗಾಗಿ ಇರಬೇಕೆ ಹೊರತು – ವಿದ್ಯಾರ್ಥಿಗಳ ವಿರುದ್ಧ ಅಲ್ಲ

ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರೇ ನಮ್ಮ ನಡೆ ಸರಿಯೇ? ಪ್ರತಿಭಟನೆ, ಹೋರಾಟ ಸಂವಿಧಾನ ನೀಡಿರುವ ಹಕ್ಕು. ಹಾಗಾಗಿ ಮುಷ್ಕರ ತಪ್ಪಲ್ಲ. ಆದರೆ ಕೊರೋನ ಮಹಾಮಾರಿಯಿಂದ ಹಳಿತಪ್ಪಿದ ಶಿಕ್ಷಣದಿಂದ ವಂಚಿತರಾಗಿರುವ ಅದೆಷ್ಟೋ ವಿದ್ಯಾರ್ಥಿಗಳು ಒಂದು ಹಂತದಲ್ಲಿ ಇದೀಗ ಕಲಿಕಾಕ್ರಮಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಕಲಿಕಾಚೇತರಿಕೆಯಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳು ಬೆಳವಣಿಗೆಯಲ್ಲಿದ್ದಾರೆ.

ನಮ್ಮ ಪ್ರತಿಭಟನೆ ಸರಕಾರಕ್ಕೆ ಹಕ್ಕುಗಳಿಗಾಗಿ ಇರಬೇಕೆ ಹೊರತು, ವಿದ್ಯಾರ್ಥಿಗಳ ವಿರುದ್ಧ ಅಲ್ಲ. ಮುಖ್ಯವಾಗಿ ಇದೀಗ ಪ್ರಥಮ ಪಿಯುಸಿಯ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಡಿಢೀರನೆ ಪರೀಕ್ಷೆಯನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ಇಕ್ಕಟಿಗೆ ಸಿಲುಕಿಸಿದಂತಾಯಿತು. ಕಾರಣ, ಪ್ರಥಮ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ಎರಡೇ ವಿಷಯಗಳು ಉಳಿದಿರುವ ಸಮಯದಲ್ಲಿ ನಮ್ಮ ನಡೆ ಚರ್ಚೆಗೀಡಾಗಿದೆ. ಕೊನೆಕ್ಷಣದಲ್ಲಿ ಪರೀಕ್ಷೆಯು ರದ್ದಾದ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಯದೆ ಕಾಲೇಜಿಗೆ ಹೋಗಿ ಹಿಂದುರುಗಿದ ಚಿತ್ರಣವು ಸಾಮಾನ್ಯವಾಗಿ ಕಂಡು ಬಂತು. ಈ ಸಂದರ್ಭ ಬುದ್ಧಿ ಹೇಳಿಕೊಡುವ ಶಿಕ್ಷಕರಾದ ನಾವೇ ಗೊಂದಲಕ್ಕೆ ಈಡಾಗಿರುವುದು ಖೇದಕರ ಸಂಗತಿ.

ವೈದ್ಯಕೀಯ ಸಿಬ್ಬಂದಿಗಳು ಕಪ್ಪುಬಟ್ಟೆಯನ್ನು ಧರಿಸಿ ಕೆಲಸಕ್ಕೆ ಹಾಜರಾದ ರೀತಿಯೇ ಶಿಕ್ಷಕ ಮಿತ್ರರು ಇದೇ ರೀತಿ ಸೌಜನ್ಯತೆ ತೋರಬಹುದಿತ್ತು. ಈ ಮೂಲಕ ಪೋಷಕರ ಮೆಚ್ಚುಗೆಗೆ ಪಾತ್ರವಾಗಬಹುದಿತ್ತು. ಕೊನೇ ಪಕ್ಷ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮುಗಿಯುವವರೆಗೆ ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ತಪ್ಪಿಸುವ ಅವಕಾಶವಿತ್ತು.

ಸರಕಾರದ ಕೆಲಸ ದೇವರ ಕೆಲಸ ಎನ್ನುವ ದ್ಯೇಯದಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಇಂದಿನ ನಡೆಯು ಸರಕಾರದ ವಿರುದ್ಧ ಪ್ರತಿಭಟನೆ ಕೈಗೊಂಡಿರುವುದು ವ್ಯವಸ್ಥೆಯ ವ್ಯಂಗ್ಯವಿರಬಹುದು. ಉಜ್ವಲ ಭವಿಷ್ಯವನ್ನು ರೂಪಿಸುವ ಬೋಧಕರು ವಿದ್ಯಾರ್ಥಿಗಳ ಭವಿಷ್ಯದ ನಡುವೆ ಚೆಲ್ಲಾಟ ಸರಿಯಲ್ಲ ಎಂಬುದೇ ಸಾರ್ವಜನಿಕರ ಅಭಿಪ್ರಾಯ.

✒️ಸಂತೋಷ ನೆಲ್ಲಿಕಾರು





























































































error: Content is protected !!
Scroll to Top