ಜನಗಣತಿ ರಾಷ್ಟ್ರೀಯ ಕರ್ತವ್ಯ : ರಜೆಯಲ್ಲಿರುವ ಶಿಕ್ಷಕರನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ

ಜನಗಣತಿ ನಿಯೋಜನೆ ಪ್ರಶ್ನಿಸಿ ಕೋರ್ಟ್‌ ಮೊರೆ ಹೋದ ಪ್ರಾಂಶುಪಾಲರಿಗೆ ಹಿನ್ನಡೆ

ಬೆಂಗಳೂರು : ಜನಗಣತಿ ರಾಷ್ಟ್ರೀಯ ಕರ್ತವ್ಯ, ಅದಕ್ಕಾಗಿ ಬದ್ಧರಾಗಿರಬೇಕು. ರಜೆಯಲ್ಲಿರುವ ಶಿಕ್ಷಕರು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ ಜನಗಣತಿ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಬೆಂಗಳೂರಿನ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
ಶಿಕ್ಷಕರನ್ನು ಜನಗಣತಿಗೆ ನಿಯೋಜನೆ ಮಾಡದ ಶಾಲೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಧಾನ ಜನಗಣತಿ ಅಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಜೆ.ಪಿ. ನಗರದ 7ನೇ ಹಂತದಲ್ಲಿರುವ ದಿ ಬ್ರಿಗೇಡ್‌ ಶಾಲೆ ಪ್ರಾಂಶುಪಾಲ ಶುಭಾ ಜೈನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಮುಂದಿನ ಒಂದು ವಾರದಲ್ಲಿ ಎಲ್ಲ ಶಿಕ್ಷಕರನ್ನು ಹಿಂದಿರುಗುವಂತೆ ಸೂಚನೆ ನೀಡಿ, ಜನಗಣತಿ ಆಯುಕ್ತರ ಮುಂದೆ ವರದಿ ಮಾಡಿಕೊಳ್ಳುವುದನ್ನು ಖಾತರಿಪಡಿಸಬೇಕೆಂಬ ಷರತ್ತಿನೊಂದಿಗೆ ಶಾಲೆಯ ಪ್ರಾಂಶುಪಾಲರ ವಿರುದ್ಧ ಜನಗಣತಿ ಕಾಯಿದೆಯ ಸೆಕ್ಷನ್‌ 11ರಡಿ ಎಫ್‌ಐಆರ್‌ ದಾಖಲಿಸುವಂತಹ ಕ್ರಮಕ್ಕೆ ಮುಂದಾಗಬಾರದು ಎಂದು ನ್ಯಾಯಾಲಯ ತಿಳಿಸಿದೆ.
ಸುಮಾರು 10ರಿಂದ 11 ವರ್ಷಗಳಿಗೊಮ್ಮೆ ಜನಗಣತಿ ನಡೆಯಲಿದೆ. ಪ್ರತಿ ಮನೆ ಮನೆಗೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಲಿಖಿತವಾಗಿ ದಾಖಲಿಸಿಕೊಳ್ಳಬೇಕಾಗುತ್ತದೆ. ಹೀಗಿರುವಾಗ ಶಾಲೆಯ ಮುಖ್ಯಸ್ಥರು ಈ ರೀತಿ ವರ್ತಿಸಲು ಆರಂಭಿಸಿದರೆ, ಸರಕಾರ ಗಣತಿ ಕಾರ್ಯ ಪೂರ್ಣಗೊಳಿಸುವುದಾದರೂ ಹೇಗೆ ? ಅಲ್ಲದೆ, ಮುಂದಿನ ವಿಚಾರಣೆ ವೇಳೆ ಅರ್ಜಿದಾರರ ಶಾಲೆಯಲ್ಲಿ ಲಭ್ಯವಿರುವ ಶಿಕ್ಷಕರ ಪಟ್ಟಿಯನ್ನು ಒದಗಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ದೇಶದಾದ್ಯಂತ ಮೊದಲ ಹಂತದ ಗಣತಿ ಕಾರ್ಯ ಏ. 1ರಿಂದ ಸ್ವಯಂ ಗಣತಿಯೊಂದಿಗೆ ಆರಂಭವಾಗಿದೆ. ಎರಡನೇ ಹಂತವಾಗಿ ಏ. 16ರಿಂದ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಕುಟುಂಬದವರ ವಿವರ ಪಡೆದುಕೊಳ್ಳಬೇಕಾಗುತ್ತದೆ. ಸೆಪ್ಟೆಂಬರ್ ಅಂತ್ಯಕ್ಕೆ ಗಣತಿ ಕಾರ್ಯ ಪೂರ್ಣಗೊಳ್ಳಬೇಕಾಗಿದೆ.‌

































































































error: Content is protected !!
Scroll to Top