ಗೃಹಪ್ರವೇಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ ನವೀನ್‌ಚಂದ್ರ

ನಿಟ್ಟೆ ಅಪಘಾತದಲ್ಲಿ ಸಾವಿಗೀಡಾದ ಅಮಾಯಕ – ಪುತ್ರಿಯೂ ಗಂಭೀರ

ಉಡುಪಿ : ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರ ಬಳಿ ಎ. 24ರಂದು ಸಂಭವಿಸಿದ ಅಪಘಾತದಲ್ಲಿ ನಿಧನರಾದ ಬಜಕಳ ನವೀನ್‌ಚಂದ್ರ ಮೂಲ್ಯರ ಗೃಹಪ್ರವೇಶ ಮೇ 6ರಂದು ನಿಗದಿಯಾಗಿತ್ತು. ವೆಲ್ಡರ್‌ ಆಗಿದ್ದ ನವೀನ್‌ಚಂದ್ರ ಕುಟುಂಬ ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದು ಇತ್ತೀಚೆಗೆ ನೂತನ ಮನೆ ನಿರ್ಮಾಣ ಮಾಡಿದ್ದರು. ಕಷ್ಟಪಟ್ಟು ಕಟ್ಟಿದ ಮನೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಮೇ 6ರಂದು ಗೃಹಪ್ರವೇಶದ ಸಂಭ್ರಮಕ್ಕೆ ಅಣಿಯಾಗಿತ್ತು. ಆದರೆ, ವಿಧಿಲಿಖಿತ ಬೇರೆಯೇ ಆಗಿತ್ತು.

ನವೀನ್‌ಚಂದ್ರ ಅವರಿಗೆ ಪ್ರೇರಣಾ ಏಕೈಕ ಪುತ್ರಿ. ಸಿಇಟಿ ಪರೀಕ್ಷೆ ಬರೆಯಲು ತೆರಳಿದ್ದ ಮಗಳನ್ನು ಪರೀಕ್ಷಾ ಕೇಂದ್ರದಿಂದ ತನ್ನ ಬೈಕ್‌ನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ನಿಟ್ಟೆಯಲ್ಲಿ ಅಜಾಗರೂಕತೆ, ಮಿತಿಮೀರಿದ ವೇಗದಲ್ಲಿ ಕಾರು ಚಾಲನೆ ಮಾಡಿಕೊಂಡು ಬಂದಿರುವ ನಿಟ್ಟೆ ಇಂಜಿನೀಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್‌ ಆದೀಫ್‌ ಡಿಕ್ಕಿ ಹೊಡೆದಿರುತ್ತಾನೆ. ಕಾರಿನಲ್ಲಿ ಮತ್ತೊರ್ವ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿಯಿದ್ದನು. ಡಿಕ್ಕಿಯ ರಭಸಕ್ಕೆ ತಂದೆ, ಮಗಳು ಇಬ್ಬರೂ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿರುತ್ತಾರೆ. ಕೂಡಲೇ ಅವರನ್ನು ಆಸ್ಪತ್ರೆ ಕರೆದೊಯ್ಯಲಾಗಿದ್ದು, ಈ ವೇಳೆ ನವೀನ್‌ಚಂದ್ರ ಮೂಲ್ಯ ಅವರ ಪ್ರಾಣ ಪಕ್ಷಿ ಹಾರಿ ಹೋಯಿತು. ಇದೀಗ ಪ್ರೇರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಗೂ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ತಿಳಿದುಬಂದಿದೆ.























































error: Content is protected !!
Scroll to Top