ದಾಳಿಯ ಹಿಂದೆ ಕ್ರಿಶ್ಚಿಯನ್ ವಿರೋಧಿ ಉದ್ದೇಶ ಅಡಗಿತ್ತು ಎಂದ ಟ್ರಂಪ್
ವಾಷಿಂಗ್ಟನ್ : ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಗೆ ಯತ್ನಿಸಿದ ಕೋಲ್ ಥಾಮಸ್ ಅಲೆನ್ ಘಟನೆಗೂ ಮುನ್ನ ತನ್ನ ಕುಟುಂಬ ಸದಸ್ಯರಿಗೆ ಆಡಳಿತ ವಿರೋಧಿ ಮತ್ತು ಅಶಾಂತಿಕರ ಘೋಷಣಾ ಪತ್ರವನ್ನು ಕಳುಹಿಸಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಅಲೆನ್ ತಾನೇ ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್ ಎಂದು ಕರೆದುಕೊಂಡಿದ್ದು, ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡ ಯೋಜನೆಯನ್ನು ವಿವರಿಸಿದ್ದಾನೆ. ಈ ಸಂದೇಶವನ್ನು ಗುಂಡಿನ ದಾಳಿ ನಡೆಯುವ ಸುಮಾರು 10 ನಿಮಿಷಗಳ ಮುನ್ನ ತನ್ನ ಕುಟುಂಬಕ್ಕೆ ಕಳುಹಿಸಿದ್ದಾನೆ ಎಂದು ವರದಿಯಾಗಿದೆ. ಅಲೆನ್ ಬರೆದಿರುವುದರಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ವಿರುದ್ಧ ಸ್ಪಷ್ಟ ಮತ್ತು ಹಿಂಸಾತ್ಮಕ ಉದ್ದೇಶ ವ್ಯಕ್ತವಾಗಿದೆ. ಆರೋಪಿಯು ಕ್ಯಾಲಿಫೋರ್ನಿಯಾದಿಂದ ರೈಲಿನಲ್ಲಿ ಪ್ರಯಾಣಿಸಿ, ಕಾರ್ಯಕ್ರಮ ನಡೆದ ವಾಷಿಂಗ್ಟನ್ ಹೊಟೇಲ್ ನಲ್ಲಿ ಕೆಲವು ದಿನಗಳ ಹಿಂದೆ ಅತಿಥಿಯಾಗಿ ನೋಂದಾಯಿಸಿಕೊಂಡಿದ್ದನು.

ದಾಳಿಯ ಹಿಂದೆ ಕ್ರಿಶ್ಚಿಯನ್ ವಿರೋಧಿ ಉದ್ದೇಶ ಅಡಗಿತ್ತು ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಲೆನ್ ಬಹಳಷ್ಟು ದ್ವೇಷವನ್ನು ಹೊಂದಿದ್ದನು. ಇದೊಂದು ಧಾರ್ಮಿಕ ವಿಷಯ. ಪ್ರಬಲವಾದ ಕ್ರಿಶ್ಚಿಯನ್ ವಿರೋಧಿಯಾಗಿದ್ದನು ಎಂದು ಫಾಕ್ಸ್ ನ್ಯೂಸ್‌ಗೆ ಟ್ರಂಪ್ ತಿಳಿಸಿದ್ದಾರೆ.






























































