ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ

25 ವರ್ಷಗಳಿಂದ ಯಕ್ಷಗಾನ – ತಾಳಮದ್ದಳೆ ಆಯೋಜನೆ

ಕಳೆದ 25 ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಆಯೋಜಿಸಿಕೊಂಡು ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾದ ತಂಡ ತಂಡ ಅಜೆಕಾರು ಕಲಾಭಿಮಾನಿ ಬಳಗ. ಈ ಬಳಗದ ಸಾರಥ್ಯ ವಹಿಸಿದವರು ಕಾರ್ಕಳ ತಾಲೂಕು ಅಜೆಕಾರಿನ ಬಾಲಕೃಷ್ಣ ಶೆಟ್ಟಿ. ಯಕ್ಷಗಾನದ ಅಭಿಮಾನಿಯಾಗಿ ಮುಂಬಯಿಯಲ್ಲಿ ಯಕ್ಷಗಾನಕ್ಕೆ ಹೊಸ ಮೆರುಗು ನೀಡಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ನಮ್ಮೂರ ಸಾಧಕರು ಇಂದಿನ ಅತಿಥಿ.

1965ರಲ್ಲಿ ಅಜೆಕಾರು ಕಲ್ಕುಡಮಾರ್ ಮನೆಯ ಸುಬ್ಬಯ್ಯ ಶೆಟ್ಟಿ ಮತ್ತು ಸಂಪ ಶೆಟ್ಟಿ ದಂಪತಿ ಪುತ್ರನಾಗಿ ಜನಿಸಿದ ಬಾಲಕೃಷ್ಣ ಶೆಟ್ಟಿಯವರು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಳಿಕ 1977ರಲ್ಲಿ ಉದ್ಯೋಗ ಅರಸಿ ದೂರದ ಮುಂಬಯಿ ಸೇರಿದರು. ಅಲ್ಲಿ ಹಗಲು ಹೊಟೇಲ್‌ನಲ್ಲಿ ದುಡಿಯುತ್ತಾ ರಾತ್ರಿ ಬಂಟರ ಸಂಚಾಲಿತ ನಿತ್ಯಾನಂದ ನೈಟ್ ಹೈಸ್ಕೂಲಿನಲ್ಲಿ ಶಿಕ್ಷಣ ಮುಂದುವರಿಸಿದರು. ಆ ವೇಳೆಯಲ್ಲೇ ರಾತ್ರಿಯಿಡೀ ಜರುಗುತ್ತಿದ್ದ ಯಕ್ಷಗಾನ ಕಲೆಯತ್ತ ಆಕರ್ಷಿತರಾದರು ಬಾಲಕೃಷ್ಣ ಶೆಟ್ಟಿ ಅವರು.

ಹೊಟೇಲ್‌ ಉದ್ಯೋಗದ ಜೊತೆಯಲ್ಲಿ ಯಕ್ಷಗಾನ ಕಲಾವಿದನೂ ಆಗಬೇಕೆಂಬ ಬಯಕೆಯಿಂದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಂದ ಯಕ್ಷನಾಟ್ಯದ ತರಬೇತಿ ಪಡೆದರು. 1980ರಲ್ಲಿ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಗೆಜ್ಜೆ ಕಟ್ಟಿದರು. ಅನಂತರ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರ ಪ್ರೋತ್ಸಾಹ, ಸಹಕಲಾವಿದರ ಸಹಕಾರದಿಂದ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡರು. 1986ರಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮೇಳದಲ್ಲಿ ಒಂದು ವರುಷ ತಿರುಗಾಟ ನಡೆಸಿ ಯಕ್ಷ ಕಲೆಯ ಸೂಕ್ಷ್ಮಾತಿ ಸೂಕ್ಷ್ಮ ಸಂಗತಿ ಅರಿತರು. ಬಳಿಕ ಊರಿನ ತಿರುಗಾಟಕ್ಕೆ ವಿದಾಯ ಹೇಳಿ ಮತ್ತೆ ಮುಂಬಯಿಗೆ ಬಂದರು. ಬಂದವರು ಗೀತಾಂಬಿಕಾ ಯಕ್ಷಗಾನ ಮಂಡಳಿಯಲ್ಲಿ ಕಲಾವಿದರಾಗಿ, ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಯಕ್ಷಗಾನದ ಮೇಲಿನ ತನ್ನ ಅಪ್ಪಟ ಅಭಿಮಾನದಿಂದಾಗಿ 2002ರಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಅಸ್ತಿತ್ವಕ್ಕೆ ಬಂತು. ಪ್ರಾರಂಭದ ಒಂದೆರಡು ವರುಷ ಮುಂಬಯಿಯ ಕಲಾಭಿಮಾನಿಗಳಿಗೆ ಬಳಗವು ಯಕ್ಷಗಾನ ತಾಳಮದ್ದಳೆಯ ಪರಿಚಯ ಮಾಡಿಸಿತು. ಆ ಬಳಿಕ ನಿರಂತರವಾಗಿ ಮುಂಬಯಿಯಲ್ಲಿ ಯಕ್ಷಗಾನ, ತಾಳಮದ್ದಳೆ, ಸನ್ಮಾನ ಕಾರ್ಯಕ್ರಮ ಆಯೋಜಿಸಿಕೊಂಡು ಮುಂಬಯಲ್ಲಿ ಜನಾನುರಾಗಿಯಾಗಿತು.

ಯಕ್ಷರಕ್ಷಾ ಪ್ರಶಸ್ತಿ
ಬಳಗದ ವತಿಯಿಂದ ಪ್ರತಿವರ್ಷ ಯಕ್ಷರಕ್ಷಾ ಪ್ರಶಸ್ತಿ ಕೊಡಮಾಡಲಾಗುತ್ತಿದೆ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಜಯಪ್ರಕಾಶ ಶೆಟ್ಟಿ ಪರ್ಮುದೆ, ವಿಟ್ಲ ಶಂಭು ಶರ್ಮ, ಪಟ್ಲ ಸತೀಶ್ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಗಣೇಶ್ ಕೊಲೆಕಾಡಿ, ಉಜಿರೆ ಅಶೋಕ್ ಭಟ್ ಅವರಿಗೆ ನಗದಿನೊಂದಿಗೆ ಯಕ್ಷರಕ್ಷಾ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

ಸಹಕಾರ
ಸಂಸ್ಥೆಯ ದಶಮಾನೋತ್ಸವದ ಸಂದರ್ಭ ಊರಿನ ಮತ್ತು ಮುಂಬಯಿಯ ಹಿರಿಯ ಕಲಾವಿದರಿಗೆ ತಲಾ ಹತ್ತು ಸಾವಿರ ರೂ. ವಿನಂತೆ 20 ಮಂದಿ ಕಲಾವಿದರಿಗೆ, 15ನೇ ವರ್ಷದ ಸಂಭ್ರಮದಲ್ಲಿ ಹತ್ತು ಸಾವಿರ ರೂ. ವಿನಂತೆ 15 ಮಂದಿ ಕಲಾವಿದರನ್ನು ಸನ್ಮಾನಿಸಲಾಗಿದೆ. ಯಕ್ಷಗಾನ ಕಲಾವಿದರು ಮಾತ್ರವಲ್ಲದೇ ನಾಟಕ ಕಲಾವಿದರು, ಸಾಹಿತಿಗಳು, ಕವಿಗಳು, ಪತ್ರಕರ್ತರು, ಕಲಾಪೋಷಕರು, ಸಂಘಟಕರಿಗೂ ಪ್ರಶಸ್ತಿ ನೀಡುತ್ತ ಬಂದಿದೆ ಅಜೆಕಾರು ಕಲಾಭಿಮಾನಿ ಬಳಗ. ಬಾಲಕೃಷ್ಣ ಶೆಟ್ಟಿ ಅವರು ಯಕ್ಷಗಾನ ಗುರುಗಳಾಗಿಯೂ ಪ್ರಸಿದ್ಧರು. ನೂರಾರು ವಿದ್ಯಾರ್ಥಿಗಳು ಇವರಿಂದ ಯಕ್ಷಗಾನ ಕಲಿತಿದ್ದಾರೆ.

ಗ್ರಂಥ ಪ್ರಕಟ
ಅಜೆಕಾರು ಕಲಾಭಿಮಾನಿ ಬಳಗ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗಳಲ್ಲದೇ ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಪಟ್ಟ 15ಕ್ಕೂ ಮಿಕ್ಕಿ ಗ್ರಂಥಗಳನ್ನು ಪ್ರಕಟಿಸಿದೆ. ಪೊಲ್ಯರ – ನಾದಲೋಲ, ಚೆನ್ನಪ್ಪ ಶೆಟ್ಟರ ಸಂಸ್ಮರಣ ಗ್ರಂಥ – ಯಕ್ಷರ ಚಿನ್ನ, ಡಾ. ದಿನೇಶ್ ಶೆಟ್ಟಿ ರೇಂಜಾಳ-ಚಿನ್ನದ ಚೆಂಡು( ಮಕ್ಕಳ ಸಾಹಿತ್ಯ), ಯಕ್ಷರಕ್ಷಾ (ದಶಮಾನೋತ್ಸವ ಸಮಾರಂಭ), ಸಂಪೂರ್ಣದೇವಿ ಮಹಾತ್ಮೆ, ಮಾನಿಷಾದ, ಪಾಂಚಜನ್ಯ, ಭಾರತೀಯ ಚಿಂತನಾ ವಿಧಾನ ಇವು ಬಳಗದ ವತಿಯಿಂದ ಪ್ರಕಟಿತ ಕೃತಿಗಳು.

ಅರಸಿ ಬಂದ ಪ್ರಶಸ್ತಿ
ಬಾಲಕೃಷ್ಣ ಶೆಟ್ಟಿ ಅವರಿಗೆ ಕುಬೆವೂರು ಪುಟ್ಟಣ್ಣ ಶೆಟ್ಟಿ ಮತ್ತು ಭಾಗವತ ಕೆಂಚನಕೆರೆ ದೂಜ ಶೆಟ್ಟರ ಪ್ರಶಸ್ತಿ ಮತ್ತು ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿ ಸುರತ್ಕಲ್‌ ಇವರು ಯಕ್ಷರಕ್ಷಕಾ ಎಂಬ ಬಿರುದನ್ನು ನೀಡಿ ಸನ್ಮಾನಿಸಿದ್ದಾರೆ. ಬಾಲಕೃಷ್ಣ ಅವರ ಯಕ್ಷ ಸೇವೆಗೆ ಅವರ ಪತ್ನಿ ಆಶಾ ಬಿ. ಶೆಟ್ಟಿ, ಮಕ್ಕಳಾದ ಅನಿಶಾ ಮತ್ತು ಅನುಷಾ ಸಹಕಾರ ನೀಡುತ್ತಿದ್ದಾರೆ.

ಮೇ 3ರಂದು ಅಜೆಕಾರಿನಲ್ಲಿ ಯಕ್ಷಗಾನ
ಅಜೆಕಾರು ಕಲಾಭಿಮಾನಿ ಬಳಗದ ಆಯೋಜನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ವತಿಯಿಂದ ಬಾಲಕೃಷ್ಣ ಶೆಟ್ಟಿ ಅವರ ಅಜೆಕಾರಿನ ಮನೆಯಲ್ಲಿ ಯಕ್ಷಗಾನ ನಡೆಯಲಿದೆ. ಬರುವ ಅಕ್ಟೋಬರ್‌ 24 ಹಾಗೂ 25ರಂದು ಬಂಟರ ಸಂಘ ಕುರ್ಲಾ ಮುಂಬೈ ಇಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬೈ ಇವರ ಆಯೋಜನೆಯಲ್ಲಿ ಯಕ್ಷಗಾನ ಸಮ್ಮೇಳನ ನಡೆಯಲಿದೆ.









































































error: Content is protected !!
Scroll to Top