ಅಂಬೇಡ್ಕರ್ ಭವನ ಸ್ಫೂರ್ತಿಯ ಕೇಂದ್ರವಾಗಲಿ – ಸುನಿಲ್ ಕುಮಾರ್
ಕಾರ್ಕಳ : ಸ್ವಾತಂತ್ರ್ಯ ಬಂದು 79 ವರ್ಷ ಕಳೆದರೂ ದಲಿತ ಸಮುದಾಯ ನಿರೀಕ್ಷಿತ ಏಳಿಗೆ ಕಂಡಿಲ್ಲ. ಸಮಾಜದ ಬಂಧುಗಳನ್ನು ಒಟ್ಟುಗೂಡಿಸಿ, ಆ ಮೂಲಕ ಸಮಾಜದ ಉದ್ಧಾರಕ್ಕಾಗಿ ಕಾರ್ಕಳದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಯುವ ವೇದಿಕೆ ಅಸ್ತಿತ್ವಕ್ಕೆ ಬಂದಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ಎ. 27ರಂದು ಕಾರ್ಕಳ ಕಾಬೆಟ್ಟು ಅಂಬೇಡ್ಕರ್ ಭವನದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಯುವ ವೇದಿಕೆ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿವಿಧ ಸಂದರ್ಭಗಳಲ್ಲಿ ದಲಿತ ಸಂಘಟನೆಗಳು ಅಸ್ತಿತ್ವಕ್ಕೆ ಬಂದಿವೆ. ಸಮಾಜದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುವ ಯುವ ವೇದಿಕೆಯಲ್ಲಿ ತಾಲೂಕಿನ ದಲಿತ ಸಮಾಜದವರೆಲ್ಲರೂ ತೊಡಗಿಸಿಕೊಳ್ಳುವಂತಾಗಬೇಕೆಂದರು.

ಯಾವುದೇ ತಾಲೂಕು ಕೇಂದ್ರದಲ್ಲಿ ಕಾರ್ಕಳದಂತಹ ಸುಸಜ್ಜಿತ, ಸುಂದರ ಅಂಬೇಡ್ಕರ್ ಭವನ ಇರಲು ಸಾಧ್ಯವಿಲ್ಲ. ಇದು ಕೇವಲ ಕಟ್ಟಡವಲ್ಲ. ಇದು ಸ್ಫೂರ್ತಿ, ಪ್ರೇರಣೆಯ ಕೇಂದ್ರವಾಗಬೇಕು. ಸಮಾಜದ ಬಂಧುಗಳು ಇದರ ಪ್ರಯೋಜನ ಪಡೆಯುವಂತಾಗಬೇಕೆಂದು ಸುನಿಲ್ ಕುಮಾರ್ ಹೇಳಿದರು.
ಸತ್ಯಸಾರಮಣಿ, ಮುಗೆರ್ಕಳ ದೈವಸ್ಥಾನಗಳ ದಾಖಲೆ ಸರಿಪಡಿಸುವ ಕಾರ್ಯ ಮಾಡುವಂತೆ ನಾನು ಸದನದಲ್ಲಿ ಸರಕಾರದ ಗಮನ ಸೆಳೆದಿದ್ದೆ. ಅದರ ಪರಿಣಾಮವಾಗಿ ದಾಖಲೆ ಸರಿಪಡಿಸುವ ಕಾರ್ಯವಾಗಿದ್ದು, ಬಳಿಕ ದೈವಸ್ಥಾನಗಳಿಗೆ ಸರಕಾರದ ಅನುದಾನ ದೊರೆಯುವಂತಾಯಿತು ಎಂದು ಸುನಿಲ್ ಕುಮಾರ್ ಹೇಳಿದರು.
ವಿರೋಧಿಸುವ ಕಾರ್ಯವಾಗಲಿ
ದಲಿತ ಸಮಾಜಕ್ಕೆ ಮೀಸಲಿಟ್ಟ ಅನುದಾನವನ್ನು ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗೆ ಬಳಸಿದೆ. ಕಾನೂನು ನಿಯಮದಡಿ ಅನ್ಯಉದ್ದೇಶಕ್ಕೆ ಆ ಹಣ ಬಳಸುವಂತಿಲ್ಲ. ಈ ಕುರಿತು ದಲಿತ ಕುಂದು ಕೊರತೆ ಸಭೆ ಸೇರಿದಂತೆ ಎಲ್ಲ ಕಡೆಯೂ ಗಟ್ಟಿಧ್ವನಿಯಲ್ಲಿ ವಿರೋಧ ವ್ಯಕ್ತಪಡಿಸುವ ಕಾರ್ಯವಾಗಬೇಕಿದೆ ಎಂದರು.
ಕರ್ನಾಟಕ ಆದಿದ್ರಾವಿಡ ಸಮಾಜದ ಉಡುಪಿ ಜಿಲ್ಲಾಧ್ಯಕ್ಷ ಶೇಖರ್ ಕಂಪನ್ ಮಾತನಾಡಿ, ಎಲ್ಲರನ್ನು ಒಳಗೊಂಡ ಸಂಘಟನೆ ಯುವ ವೇದಿಕೆ ಆಗಿದೆ. ಶಿಕ್ಷಣ ಹಾಗೂ ಧಾರ್ಮಿಕವಾಗಿಯೂ ಸಮಾಜ ಮುಂದುವರಿಯುತ್ತಿದ್ದು, ನಿರಂತರವಾಗಿ ಸಮಾಜಮುಖಿ ಕಾರ್ಯಗಳಾಗಲಿ ಎಂದರು.
ಕಾರ್ಕಳ ಮುಗೇರ ಸಂಘದ ಗೌರವಾಧ್ಯಕ್ಷ ಸದಾಶಿವ ಮೊಗೇರ ನಕ್ರೆ ಮಾತನಾಡಿ, ಸರ್ವರೂ ಒಪ್ಪುವಂತಹ ಸಂವಿಧಾನ ನಿರ್ಮಾಣ ಮಾಡಿರುವ ಡಾ. ಬಿ.ಆರ್. ಅಂಬೇಡ್ಕರ್ ಹಾದಿಯಲ್ಲಿ ನಾನು ಮುನ್ನಡೆಯಬೇಕಿದೆ. ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನು ನೀಡಿದ್ದೇವೆ ಎನ್ನುವುದನ್ನು ಆತ್ಮವಲೋಕನ ಮಾಡಬೇಕಿದೆ ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಿನಕರ್ ಬಾಬು ಮಾತನಾಡಿ, ಸಮಾಜದ ಬಂಧುಗಳು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂಚೂಣಿಗೆ ಬರುವಂತಾಗಬೇಕು. ಯುವ ವೇದಿಕೆ ಮೂಲಕ ಸರಕಾರದ ಸೌಲಭ್ಯ ಜನರಿಗೆ ತಲುಪುವಂತಾಗಬೇಕೆಂದರು.
ಸನ್ಮಾನ
ನಿವೃತ್ತ ಯೋಧ ಆನಂದ್ ಕಬ್ಬಿನಾಲೆ, ದೈವರಾಧನೆ ಕ್ಷೇತ್ರದ ಸಾಧಕ ಚುಕುಡ ಪರವ, ಮೊಗೇರ ಸಮುದಾಯದ ಹಿರಿಯರಾದ ಅಣ್ಣು, ಸಂಗೀತ ಕ್ಷೇತ್ರದ ಸಾಧಕಿ ನಮಿತಾ ಬೋಳ, ಕಂಬಳ ಓಟಗಾರ ಶಿವಾನಂದ ರೆಂಜಾಳ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪರವ ಸಮುದಾಯದ ಹಿರಿಯರಾದ ಉಗ್ಗಪ್ಪ ಪರವ ಕೆರ್ವಾಶೆ, ಶೇಷಪ್ಪ ಪಾನರ ಹೀರ್ಗಾನ, ಸುಂದರ್ ಬಿ. ಉಪಸ್ಥಿತರಿದ್ದರು. ನಮಿತಾ ಬೋಳ ಪ್ರಾರ್ಥಿಸಿದರು, ಶ್ರೀನಿವಾಸ ಕಾರ್ಕಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಭಿಷೇಕ್ ಬಜಗೋಳಿ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ರಾಣೆ ಸ್ವಾಗತಿಸಿ, ವಂದಿಸಿದರು.





































