ಬೆಂಗಳೂರು : ಹವಾಮಾನ ಇಲಾಖೆಯು ಎ. 30ರಂದು ಬೆಂಗಳೂರು ನಗರ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಇಂದು ಮತ್ತು ನಾಳೆ ರಾಜ್ಯದ ಹಲವೆಡೆ ಆಲಿಕಲ್ಲು ಮಳೆ ಹಾಗೂ ಭಾರೀ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಹಾಸನ, ಕೊಡಗು, ತುಮಕೂರು, ಶಿವಮೊಗ್ಗ, ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮುಂದಿನ 5 ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುಡುಗು ಮತ್ತು ಮಿಂಚಿನ ಸಂದರ್ಭದಲ್ಲಿ ಮರದ ಕೆಳಗೆ ಅಥವಾ ಹಳೆಯ ಕಟ್ಟಡಗಳ ಕೆಳಗೆ ಆಶ್ರಯ ಪಡೆಯದಂತೆ, ವಿದ್ಯುತ್ ಕಂಬಗಳಿಂದ ದೂರವಿರುವಂತೆ, ವಾಹನ ಸವಾರರು ರಸ್ತೆಯಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರುವಂತೆ, ಆಲಿಕಲ್ಲು ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳಾದ ಮಾವು, ಬಾಳೆ ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆಯೂ ಹವಾಮಾನ ಇಲಾಖೆ ಸಲಹೆ ನೀಡಿದೆ.
ಮುಂದಿನ 5 ದಿನ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್





