ಸ್ವಯಾರ್ಜಿತ ಆಸ್ತಿ ಮತ್ತು ಜಂಟಿ ಹಕ್ಕಿನ ಆಸ್ತಿ

ಸಾಮಾನ್ಯವಾಗಿ ಸ್ಥಿರಾಸ್ತಿ ಅಂದರೆ ಭೂಮಿ ಅಥವಾ ಕಟ್ಟಡದ ಮೇಲಿನ ಮಾಲೀಕತ್ವದ ಹಕ್ಕಿನ ಸ್ವರೂಪವು ಮುಖ್ಯವಾಗಿ ಎರಡು ವಿಧಗಳನ್ನು ಹೊಂದಿರುತ್ತದೆ. ಮೊದಲನೇಯದಾಗಿ ಸ್ವಯಾರ್ಜಿತ ಆಸ್ತಿ ಅಂದರೆ ಒಂದು ಆಸ್ತಿಯ ಮೇಲೆ ಸಂಬಂಧಪಟ್ಟ ವ್ಯಕ್ತಿಯು ನೇರವಾಗಿ ಸ್ವಂತ ಮತ್ತು ಸಂಪೂರ್ಣ ಮಾಲೀಕತ್ವವನ್ನು ಹೊಂದಿರುವುದು. ಒಬ್ಬ ವ್ಯಕ್ತಿ ತನ್ನ ಸ್ವಂತ ಗಳಿಕೆಯ ಹಣದಿಂದ ಸ್ಥಿರಾಸ್ತಿಯನ್ನು ಖರೀದಿಸಿದಾಗ ಆತ ನೇರವಾಗಿ ತಾನು ಖರೀದಿಸಿದ ಸ್ಥಿರಾಸ್ತಿಯ ಮೇಲೆ ಸ್ವಂತ ಮತ್ತು ಸಂಪೂರ್ಣ ಮಾಲೀಕತ್ವದ ಹಕ್ಕನ್ನು ಹೊಂದುತ್ತಾನೆ. ಇದೇ ರೀತಿಯಾಗಿ ಇತರ ಯಾವುದೇ ಕಾನೂನು ಬದ್ಧ ಸ್ವರೂಪದ ದಾಖಲೆ ಮುಖಾಂತರ ಒಬ್ಬ ವ್ಯಕ್ತಿ ತನ್ನೊಬ್ಬನ ಹೆಸರಲ್ಲಿ ಸ್ಥಿರಾಸ್ತಿಯನ್ನು ಹೊಂದಿದಾಗ ಸಹಾ ಅಂತಹ ಆಸ್ತಿಯನ್ನು ಆತನ ಸ್ವಂತ ಮತ್ತು ಸಂಪೂರ್ಣ ಇಚ್ಛಾನುಸಾರದ ಆಸ್ತಿ ಎಂಬುದಾಗಿ ಪರಿಗಣಿಸಬೇಕಾಗುತ್ತದೆ. ಸ್ವಯಾರ್ಜಿತ ಆಸ್ತಿಯ ಮಾಲೀಕನು ತನ್ನ ಆಸ್ತಿಯ ಮೇಲೆ ತಾನು ಹೊಂದಿರುವ ಹಕ್ಕನ್ನು ತನ್ನ ಇಚ್ಛಾನುಸಾರವಾಗಿ ಅಂದರೆ ತನ್ನ ವಾರಿಸುದಾರರ ಒಪ್ಪಿಗೆ ರಹಿತವಾಗಿ ತನ್ನ ಮನಸ್ಸಿನ ಸಂಕಲ್ಪದಂತೆ ಯಾರಿಗೂ ಪರಾಧೀನ ಅಂದರೆ ವರ್ಗಾವಣೆ ಮಾಡುವ ಕಾನೂನುಬದ್ಧ ಅಧಿಕಾರವನ್ನು ಹೊಂದಿರುತ್ತಾನೆ.

ಎರಡನೇಯದಾಗಿ ಯಾವುದೇ ಒಂದು ಸ್ಥಿರಾಸ್ತಿಯ ಮೇಲೆ ಇಬ್ಬರು ಅಥವಾ ಇಬ್ಬರಿಗಿಂತ ಜಾಸ್ತಿ ವ್ಯಕ್ತಿಗಳು ಜಂಟಿಯಾಗಿ ಹಕ್ಕನ್ನು ಹೊಂದಿದ್ದಲ್ಲಿ ಅಂತಹ ಆಸ್ತಿಯನ್ನು ಜಂಟಿ ಹಕ್ಕಿನ ಆಸ್ತಿ (ಜೋಯಿಂಟ್ ರೈಟ್ ಪ್ರಾಪರ್ಟಿ) ಎನ್ನಲಾಗುವುದು. ಉದಾಹರಣೆಗೆ ಇಬ್ಬರು ಅಥವಾ ಅದಕ್ಕಿಂತ ಅಧಿಕ ವ್ಯಕ್ತಿಗಳು ಒಟ್ಟು ಸೇರಿ ತಮ್ಮ ಜಂಟಿ ಹೆಸರಲ್ಲಿ ಆಸ್ತಿಯನ್ನು ಖರೀದಿಸಿದ ಸಂದರ್ಭದಲ್ಲಿ ಅಥವಾ ಪಿತ್ರಾರ್ಜಿತ ಆಸ್ತಿಯ ಮೂಲ ಹಕ್ಕುದಾರರು ಮೃತಪಟ್ಟಾಗ ಅವರ ವಾರಿಸುದಾರರು ಜಂಟಿಯಾಗಿ ಹಕ್ಕನ್ನು ಹೊಂದುವ ಸಂದರ್ಭದಲ್ಲಿ ಆಸ್ತಿಯ ಮಾಲೀಕತ್ವವು ಜಂಟಿ ಸ್ವರೂಪದ್ದಾಗಿರುತ್ತದೆ ಮತ್ತು ಈ ರೀತಿಯಾಗಿ ಜಂಟಿ ಹಕ್ಕನ್ನು ಹೊಂದುವ ವ್ಯಕ್ತಿಗಳನ್ನು ಜಂಟಿ ಹಕ್ಕುದಾರರು ಅಥವಾ ಜೋಯಿಂಟ್ ಓನರ್ಸ್‌ (ಕೋ-ಓನರ್ಸ್‌) ಎಂಬುದಾಗಿ ಉಲ್ಲೇಖಿಸಲಾಗುತ್ತದೆ. ಜಂಟಿ ಹಕ್ಕಿನ ಸ್ಥಿರಾಸ್ತಿಯು ಎಲ್ಲಾ ಜಂಟಿ ಹಕ್ಕುದಾರರ ಒಪ್ಪಿಗೆಯೊಂದಿಗೆ ಕಾನೂನು ಬದ್ಧವಾಗಿ ವಿಂಗಡಣೆ ಅಥವಾ ವಿಭಜನೆ ಆಗುವವರೆಗೆ ಅಥವಾ ಜಂಟಿ ಹಕ್ಕುದಾರರು ತಾವು ಹೊಂದಿರುವ ಅವಿಭಾಜ್ಯ ಹಕ್ಕನ್ನು ನೋಂದಾಯಿತ (ರಿಜಿಸ್ಟ್ರಿ) ದಾಖಲೆ ಮೂಲಕ ಇತರರಿಗೆ ಲಿಖಿತವಾಗಿ ಬಿಟ್ಟುಕೊಡುವವರೆಗೆ ಎಲ್ಲಾ ಜಂಟಿ ಹಕ್ಕುದಾರರು ಸಹಜವಾಗಿ ಮತ್ತು ಕಾನೂನು ಸಮ್ಮತವಾಗಿ ಸ್ವತ್ತಿನ ಯಾವುದೇ ಮತ್ತು ಎಲ್ಲಾ ಅಂಶದಲ್ಲಿ ಅವಿಭಾಜ್ಯ ಹಕ್ಕನ್ನು ಹೊಂದಿರುತ್ತಾರೆ. ಕಾನೂನಿನ ನಿಯಮಾನುಸಾರದ ಪ್ರಕಾರ ಜಂಟಿ ಹಕ್ಕಿನ ಆಸ್ತಿಗೆ ಸಂಬಂಧಪಟ್ಟ ಆಸ್ತಿಯ ಸ್ವಾಧೀನತೆಯು ಜಂಟಿ ಹಕ್ಕುದಾರರ ಪೈಕಿ ಯಾರಾದರೂ ಒಬ್ಬರ ಸ್ವಾಧೀನತೆ ಇರುವ ಸಂದರ್ಭದಲ್ಲಿ ಸಹಾ ಎಲ್ಲಾ ಜಂಟಿ ಹಕ್ಕುದಾರರು ಸಮಾನ ರೀತಿಯ ಹಕ್ಕು ಮತ್ತು ಹಿತಾಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಕಾನೂನಿನ ಪ್ರಕಾರ ಎಲ್ಲಾ ಜಂಟಿ ಹಕ್ಕುದಾರರು ಕಾನೂನುಬದ್ಧವಾಗಿ ಜಂಟಿ ಸ್ವಾಧೀನತೆಯನ್ನು ಹೊಂದಿರುವ ಬಗ್ಗೆ ಪೂರ್ವಭಾವನೆಯನ್ನು ಹೊಂದಬೇಕಾಗುತ್ತದೆ.

ಜಂಟಿ ಹಕ್ಕಿನ ಆಸ್ತಿಗೆ ಅಥವಾ ಅದರಲ್ಲಿರುವ ಕಟ್ಟಡಕ್ಕೆ ಸಂಬಂಧಪಟ್ಟ ಆರ್.ಟಿ.ಸಿ. ಅಥವಾ ಇತರ ಯಾವುದೇ ಕಂದಾಯ ದಾಖಲೆಗಳು ಜಂಟಿ ಹಕ್ಕುದಾರರ ಪೈಕಿ ಯಾರಾದರೂ ಒಬ್ಬರ ಹೆಸರಿಗೆ ನಮೂದು ಆಗಿರುವ ಏಕ ಮಾತ್ರ ಕಾರಣದಿಂದ ಅಥವಾ ಜಂಟಿ ಆಸ್ತಿಯಲ್ಲಿ ಜಂಟಿ ಹಕ್ಕುದಾರರ ಪೈಕಿ ಕೆಲವರು ಮಾತ್ರ ವಾಸ ಮಾಡಿಕೊಂಡು ಬರುವ ಕಾರಣದಿಂದ ಉಳಿದ ಜಂಟಿ ಹಕ್ಕುದಾರರು ಅಥವಾ ಅವರ ವಾರೀಸುದಾರರು ಸ್ಥಿರಾಸ್ತಿ ಅಥವಾ ಕಟ್ಟಡದ ಮೇಲಿನ ತಮ್ಮ ನ್ಯಾಯ ಸಮ್ಮತವಾದ ಜಂಟಿ ಹಕ್ಕನ್ನು ಕಳೆದುಕೊಳ್ಳುವುದಿಲ್ಲ, ಮಾತ್ರವಲ್ಲದೇ ಯಾವುದೇ ಸಂದರ್ಭದಲ್ಲಿ ಕಾಲಮಿತಿ ರಹಿತವಾಗಿ ತನಗೆ ಸಿಗಬೇಕಾದ ನ್ಯಾಯಬದ್ದವಾದ ಸಮಪಾಲನ್ನು ಪಡೆಯು ಹಕ್ಕನ್ನು ಎಲ್ಲಾ ಜಂಟಿ ಹಕ್ಕುದಾರರು ಕಾನೂನಾತ್ಮಕವಾಗಿ ಹೊಂದಿರುತ್ತಾರೆ. ಸ್ವತ್ತು ವರ್ಗಾವಣೆ ಅಧಿನಿಯಮ 1882 (ಟ್ರಾನ್ಸ್ಫರ್ ಆಫ್ ಪ್ರಾಪರ್ಟಿ ಆಕ್ಟ್ 1882) ಕಾನೂನಿನ ನಿಯಮಾನುಸಾರದ ಪ್ರಕಾರ ಜಂಟಿ ಹಕ್ಕಿನ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿ ಜಂಟಿ ಹಕ್ಕುದಾರರ ಪೈಕಿ ಯಾರಾದರೂ ಕಟ್ಟಡ ಕಾಮಗಾರಿ, ಕೃಷಿ ಕೃತ ಮುಂತಾದ ರೀತಿಯ ಅಭಿವೃದ್ಧಿ ಕಾರ್ಯವನ್ನು ಮಾಡಬಯಸಿದಲ್ಲಿ ಆತನು ಎಲ್ಲಾ ಜಂಟಿ ಹಕ್ಕುದಾರರ ಲಿಖಿತ ಒಪ್ಪಿಗೆಯನ್ನು ಪಡೆಯಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಇಲ್ಲವಾದಲ್ಲಿ ಮುಂದಕ್ಕೆ ಆಸ್ತಿ ವಿಭಜನೆಯ ಸಂದರ್ಭದಲ್ಲಿ ಜಂಟಿ ಆಸ್ತಿ ಅಥವಾ ಕುಟುಂಬದ ಆಸ್ತಿಯಲ್ಲಿ ಇರುವ ಕಟ್ಟಡ, ಕೃಷಿ, ಕೃತಗಳನ್ನು ಎಲ್ಲಾ ಜಂಟಿ ಹಕ್ಕುದಾರರಿಗೆ ಸಮಾನವಾಗಿ ಹಂಚಬೇಕಾಗಿರುವುದು ಕಾನೂನಿನ ನಿಯಮವಾಗಿರುತ್ತದೆ.































































































error: Content is protected !!
Scroll to Top