ಬೆಂಗಳೂರು : ನನ್ನ ನಾಯಕತ್ವದಲ್ಲೇ ಜನತೆ 136 ಶಾಸಕರನ್ನು ಗೆಲ್ಲಿಸಿರುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿರುವುದು ಕಾಂಗ್ರೆಸ್ ಪಾಳಯದಲ್ಲಿ ಸಂಚಲನವನ್ನುಂಟು ಮಾಡಿದೆ.
2023ರ ವಿಧಾನಸಭೆ ಚುನಾವಣೆ ವೇಳೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೆ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಇಬ್ಬರೂ ರಾಜ್ಯಾದ್ಯಂತ ಪ್ರವಾಸ ಮಾಡಿ ಚುನಾವಣಾ ಪ್ರಚಾರ ನಡೆಸಿದ್ದರು. ಇಬ್ಬರು ನಾಯಕರ ನೇತೃತ್ವದಲ್ಲೇ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಿತ್ತು.
ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿ.ಕೆ. ಶಿವಕುಮಾರ್, ಕರ್ನಾಟಕದ ಜನತೆ 136 ಶಾಸಕರನ್ನು ನನ್ನ ನಾಯಕತ್ವದಲ್ಲಿ ಗೆಲ್ಲಿಸಿದ್ದಾರೆ. ನಾಯಕತ್ವ ಬದಲಾವಣೆಗೆ ಕಾಲವೇ ಉತ್ತರ ನೀಡಲಿದೆ. ನಾವು ಭರವಸೆ ಮತ್ತು ಆಕಾಂಕ್ಷೆಗಳೊಂದಿಗೆ ಬದುಕುತ್ತಿದ್ದೇವೆ. ನಾಯಕತ್ವ ವಿಚಾರವಾಗಿ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಎಂಬಿ ಪಾಟೀಲ್, ಡಿ.ಕೆ. ಶಿವಕುಮಾರ್ ಪಕ್ಷದ ಸಂಘಟನೆ ಮಾಡಿದ್ದಾರೆ. ಸಿದ್ದರಾಮಯ್ಯ ನಾಯಕತ್ವ, ಡಿಕೆಶಿ ಸಂಘಟನೆ ಇದೆ. ನಾಯಕರು ಕಾರ್ಯಕರ್ತರು ಶ್ರಮಪಟ್ಟಿದ್ದಾರೆ. ಬೂತ್ ಏಜೆಂಟ್ ಕೂಡ ಶ್ರಮಪಟ್ಟಿದ್ದಾರೆ. ಸಿದ್ದರಾಮಯ್ಯನವರ ವರ್ಚಸ್ಸು, ಡಿಕೆಶಿಯವರ ಸಂಘಟನಾ ಚತುರತೆ, ಸತೀಶ್ ಜಾರಕಿಹೊಳಿ, ಮುನಿಯಪ್ಪ ಎಲ್ಲರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.






