ಮುದ್ರಾಡಿಯ ಹೆಸರನ್ನು ಬೆಳಗಿಸಿದ ‘ಅಕ್ಷರ’ದ ಸಾಧಕ

ಮುದ್ರಾಡಿಯ ಹೆಸರನ್ನು ನಾಡಿನ ಉದ್ದಗಲಕ್ಕೂ ಪಸರಿಸಿದ ಅಂಬಾತನಯ

ಅವಿಭಜಿತ ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ಜನಿಸಿದ ಅಂಬಾತನಯರು ಸಾಹಿತ್ಯಲೋಕಕ್ಕೆ ನೀಡಿದ ಕೊಡುಗೆ ಅನುಪಮವಾದುದು. ದೈವೀಶಕ್ತಿಯನ್ನು ಹೊಂದಿರುವ ಈ ನೆಲದಲ್ಲಿ ಸಾಹಿತ್ಯ, ಕಲೆ, ಧರ್ಮಜಾಗೃತಿಯನ್ನೇ ಉಸಿರಾಗಿಸಿಕೊಂಡು ಮುದ್ರಾಡಿಯ ಹೆಸರನ್ನು ರಾಜ್ಯದ ಉದ್ದಗಲಕ್ಕೂ ಪಸರಿಸಿದವರು ಅಂಬಾತನಯರು. ‘ಅಕ್ಷರ’ದ ನಿವಾಸಿಯಾಗಿರುವ ಅಂಬಾತನಯರು ಅಕ್ಷರಶ: ಅಕ್ಷರಲೋಕವನ್ನು ಶ್ರೀಮಂತಗೊಳಿಸಿದವರು. ಮೃದುಭಾಷಿ, ಮೃದುಹೃದಯಿ ಅಂಬಾತನಯರ ಮೂಲ ಹೆಸರು ಕೇಶವ ಶೆಟ್ಟಿಗಾರ್. ಮುದ್ರಾಡಿ ಗ್ರಾಮದ ಭಕ್ರೆಮಠದ ಭದ್ರಕಾಳಿಯ ಅನನ್ಯ ಆರಾಧಕರಾಗಿರುವ ಇವರು ಅಂಬಿಕೆಯ ವರಪ್ರಸಾದದಿಂದ ಅಂಬಾತನಯ ಕಾವ್ಯನಾಮದಿಂದಲೇ ಪ್ರಸಿದ್ಧಿಯನ್ನು ಪಡೆದವರು. ಕೇವಲ ಎಂಟನೆಯ ತರಗತಿಯ ವಿದ್ಯಾಭ್ಯಾಸವನ್ನು ಮಾತ್ರ ಪಡೆದಿದ್ದರೂ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ತಪಸ್ಸು ವಿಶಿಷ್ಟವಾದುದು. ನಿವೃತ್ತರಾದರೂ ಪ್ರವೃತ್ತಿಗೆ ನಿವೃತ್ತಿಯಿಲ್ಲ ಎನ್ನುವಂತೆ, ನಿವೃತ್ತಿಯ ಅನಂತರ ಅವರು ಏರಿದ ಎತ್ತರಕ್ಕೆ ಅವರೇ ಸಾಟಿ. ಸ್ವಂತ ಸಾಧನೆಯ ಮೂಲಕ ಒಬ್ಬ ವ್ಯಕ್ತಿ ಎಷ್ಟು ಎತ್ತರಕ್ಕೆ ಏರಬಹುದು ಎಂಬುದಕ್ಕೆ ಅವರೇ ಜ್ವಲಂತ ನಿದರ್ಶನ.
ಮುದ್ರಾಡಿಯವರದ್ದು ಬಹುಮುಖ ವ್ಯಕ್ತಿತ್ವ. ಶಿಕ್ಷಕರಾಗಿ, ಕವಿಯಾಗಿ, ಲೇಖಕರಾಗಿ, ಚಿಂತಕರಾಗಿ, ಪ್ರವಚನಕಾರರಾಗಿ, ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ, ನಾಟಕಕಾರರಾಗಿ, ಯಕ್ಷಗಾನ ಕಲಾವಿದರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಹರಿಕಥಾದಾಸರಾಗಿ, ಜಿನದಾಸರಾಗಿ, ಆಶುಕವಿತೆಗಳ ರಚನಕಾರರಾಗಿ, ಸಾಹಿತ್ಯ ಸಂಘಟಕರಾಗಿ, ನೃತ್ಯರೂಪಕ ಮತ್ತು ಶಿಶುಗೀತೆಗಳ ರಚನಕಾರರಾಗಿ, ಪ್ರಸಂಗಕರ್ತರಾಗಿ, ಅಂಕಣಕಾರರಾಗಿ, ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ವಿದ್ವಾಂಸರಾಗಿ, ಉತ್ತಮ ವಾಗ್ಮಿಯಾಗಿ ನಿರಂತರ ಸೇವೆಯನ್ನು ಸಲ್ಲಿಸಿದವರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಶಿಕ್ಷಕವಾಣಿ, ಶಿಕ್ಷಣರಂಗ, ಹೆಬ್ಬೇರಿ ಮಾಸಪತ್ರಿಕೆಗಳ ಸಂಪಾದಕರಾಗಿ, ಹೆಬ್ರಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾಗಿ, ಕಾರ್ಕಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಧೀಮಂತ ವ್ಯಕ್ತಿತ್ವ ಅವರದ್ದು. ಅವರ ಅವಧಿಯಲ್ಲಿ ಎಂಟು ಬಾರಿ ತಾಲೂಕು ಸಾಹಿತ್ಯ ಸಮ್ಮೇಳನ ಮತ್ತು ಒಂದು ಬಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿರುವುದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.
ರಾಜ್ಯದ ಅನೇಕ ಹಿರಿಯ ವಿದ್ವಾಂಸರಾದ ತನ್ನ ಗುರುಗಳಾದ ಎಂ.ಮರಿಯಪ್ಪ ಕಲ್ಕೂರ್, ಕೋಟ ಶಿವರಾಮ ಕಾರಂತ, ಬನ್ನಂಜೆ ಗೋವಿಂದಾಚಾರ್ಯ, ಪಳಕಳ ಸೀತಾರಾಮ ಭಟ್ಟ, ಪಾದೆಕಲ್ಲು ವಿಷ್ಣುಭಟ್ಟ, ಎಂ. ಪ್ರಭಾಕರ ಜೋಶಿ, ಮಲ್ಪೆ ರಾಮದಾಸ ಸಾಮಗ, ಲಕ್ಷ್ಮೀನಾರಾಯಣ ಸಾಮಗ, ಕುಂಬ್ಳೆ ಸುಂದರ ರಾವ್, ಅರಳುಮಲ್ಲಿಗೆ ಪಾರ್ಥಸಾರಥಿ, ಶೇಣಿ ಗೋಪಾಲಕೃಷ್ಣ ಭಟ್, ವೆಂಕಟಸುಬ್ಬಯ್ಯ, ಹಂಪ ನಾಗರಾಜಯ್ಯ, ಕಬ್ಬಿನಾಲೆ ವಸಂತ ಭಾರದ್ವಾಜ್, ಕೃಷ್ಣ ಭಟ್ ಹೇರಂಜೆ ಮುಂತಾದ ಗಣ್ಯಾತಿಗಣ್ಯರ ಒಡನಾಡಿಯಾಗಿದ್ದವರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ಶ್ರೀ ರಾಮವಿಠ್ಠಲ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ಪೊಳಲಿ ಶಾಸ್ತ್ರಿ ಪ್ರಶಸ್ತಿ, ಸೀತಾನದಿ ಪ್ರಶಸ್ತಿ, ನಿಂಜೂರು ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ, ಕರ್ನಾಟಕ ಸರಕಾರ ಯಕ್ಷಗಾನ ಅಕಾಡೆಮಿಯಿಂದ ನೀಡಲ್ಪಟ್ಟ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿ ನಮ್ಮೂರಿನ ಕೀರ್ತಿ, ಘನತೆಯನ್ನು ಹೆಚ್ಚಿಸಿದವರು ಅಂಬಾತನಯರು.
ಮುದ್ರಾಡಿಯಿಂದ ಮಲೆನಾಡಿನವರೆಗೂ, ಮಲೆನಾಡಿನಿಂದ ಗಡಿನಾಡಿನವರೆಗೂ, ಕನ್ನಡದ ಕಂಪನ್ನು ನಿರಂತರವಾಗಿ ಪಸರಿಸಿದ ಕನ್ನಡದ ಕಟ್ಟಾಳು. ಕರ್ನಾಟಕ ಮಾತ್ರವಲ್ಲದೆ ದೂರದ ಮುಂಬಯಿ, ದೆಹಲಿ, ಚೆನ್ನೈ ಸೇರಿದಂತೆ ವಿದೇಶಗಳಲ್ಲೂ ಕನ್ನಡದ ಸೊಬಗನ್ನು ವಿವಿಧ ಸಾಹಿತ್ಯ ಪ್ರಕಾರಗಳ ಮೂಲಕ ಕನ್ನಡದ ಸೊಬಗನ್ನು ಉಣಬಡಿಸಿದವರು. ಅವರ ಕುರಿತಾಗಿ ಪ್ರಕಟಗೊಂಡ ‘ಸುಮನಸ’ ಅಭಿನಂದನ ಗ್ರಂಥದಲ್ಲಿ ಮುದ್ರಾಡಿಯವರ ಕುರಿತಾಗಿ ಬರೆದ ಸಾಲುಗಳು ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿಯಂತಿದೆ. ಮುದ್ರಾಡಿಯಂದರೆ ಚೈತನ್ಯದ ಚಿಲುಮೆ, ಮುದ್ರಾಡಿಯೆಂದರೆ ಜೀವನದ ಉತ್ಸಾಹ, ಮುದ್ರಾಡಿಯೆಂದರೆ ಸಾಹಿತ್ಯ ಕಾಂತಿ, ಮುದ್ರಾಡಿಯೆಂದರೆ ಮನಸ್ಸಿನ ಶಾಂತಿ, ಮುದ್ರಾಡಿಯೆಂದರೆ ಕನ್ನಡದ ಧೈರ್ಯ, ಮುದ್ರಾಡಿಯೆಂದರೆ ಆತ್ಮಸ್ಥೈರ್ಯ ಈ ಮಾತುಗಳು ಅವರ ಜೀವನಶೈಲಿಯನ್ನು ಬಿಂಬಿಸುತ್ತದೆ. ಕುಪ್ಪಳ್ಳಿಗೆ ಕುವೆಂಪು ಹೇಗೋ ಮುದ್ರಾಡಿಗೆ ಅಂಬಾತನಯರು ಹಾಗೆಯೇ.
ಹಿರಿಯರಿಗೆ ಗೌರವವನ್ನು ಕೊಡುವ, ಕಿರಿಯರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ, ನೇರ ನಡೆನುಡಿಯ, ಎಲ್ಲರಿಗೂ ಆದರ್ಶಪ್ರಾಯರಾಗಿ ಬದುಕಿದ್ದ ಅಂಬಾತನಯರು ಎಲ್ಲರಿಗೂ ಮಾದರಿ. ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ಎಂ. ಎನ್. ಡಿ. ಎಸ್. ಎಂ. ಪ್ರೌಢಶಾಲೆಯನ್ನು ಕಟ್ಟಿ ಬೆಳೆಸಿದ ಸಂಸ್ಥಾಪಕ ಅಧ್ಯಕ್ಷರಾದ ಕೃಷ್ಣ ಡಿ. ಶೆಟ್ಟಿ ಮತ್ತು ಪ್ರಸ್ತುತ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಮುದ್ರಾಡಿಯವರ ನೆಚ್ಚಿನ ಶಿಷ್ಯ ಟ್ರಸ್ಟ್ ಅಧ್ಯಕ್ಷರಾದ ದಿವಾಕರ ಎನ್. ಶೆಟ್ಟಿಯವರ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಶಿಕ್ಷಕರಿಗೆ, ಪೋಷಕರಿಗೆ ಮತ್ತು ಮಕ್ಕಳಿಗೆ ನೀಡಿದ ಮಾರ್ಗದರ್ಶನವನ್ನು ನಾವೆಂದೂ ಮರೆಯುವಂತಿಲ್ಲ.
ಆ ಮುದ್ರಾಡಿಯ ಮುತ್ತು ಪಂಚಭೂತಗಳಲ್ಲಿ ಲೀನವಾಗಿದೆ. ಅತ್ಯಂತ ಪವಿತ್ರ ವೃತ್ತಿಯಾದ ಶಿಕ್ಷಕರಾಗಿ ದುಡಿದು ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿ ಬದುಕುವ ಮೂಲಕ ನಾಡಿಗೆ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಕನ್ನಡದ ಮುತ್ತು ಅಂಬಾತನಯರ ಅಗಲುವಿಕೆ ತುಂಬಲಾರದ ನಷ್ಟ.
ಚಂದ್ರಶೇಖರ ಭಟ್
ಅಧ್ಯಾಪಕ
ಎಂ. ಎನ್. ಡಿ. ಎಸ್. ಎಂ. ಪ್ರೌಢಶಾಲೆ, ಮುದ್ರಾಡಿ





























































































error: Content is protected !!
Scroll to Top